ADVERTISEMENT

ಸುಗಮವಲ್ಲ ರಾಷ್ಟ್ರೀಯ ಹೆದ್ದಾರಿ ಸಂಚಾರ: ವರ್ಷಗಳೇ ಉರುಳಿದರೂ ಮುಗಿಯದ ಕಾಮಗಾರಿ

ಜಿ.ಬಿ.ನಾಗರಾಜ್
ಡಿ.ಶ್ರೀನಿವಾಸ
Published 20 ಅಕ್ಟೋಬರ್ 2025, 6:16 IST
Last Updated 20 ಅಕ್ಟೋಬರ್ 2025, 6:16 IST
<div class="paragraphs"><p>ದಾವಣಗೆರೆ ಹೊರವಲಯದ ಕುಂದುವಾಡ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ವಾಹನಗಳು ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುತ್ತಿರುವುದು&nbsp; </p></div>

ದಾವಣಗೆರೆ ಹೊರವಲಯದ ಕುಂದುವಾಡ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ವಾಹನಗಳು ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುತ್ತಿರುವುದು 

   

ಪ್ರಜಾವಾಣಿ ಚಿತ್ರಗಳು/ಸತೀಶ್‌ ಬಡಿಗೇರ

ದಾವಣಗೆರೆ: ಯರಗುಂಟೆಯ ವೆಂಕಟೇಶ್ವರ ದೇಗುಲದ ಅರ್ಚಕ ಡಿ.ಎನ್. ಬಾಲಸುಬ್ರಮಣ್ಯಂ ನಸುಕಿನಲ್ಲಿ ಕಾರು ಏರಿದರು. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದರು. ಲಕ್ಕಮುತ್ತೇನಹಳ್ಳಿ ಸಮೀಪ ಹಿಂಬದಿಯಿಂದ ವೇಗವಾಗಿ ಬಂದ ವಾಹನ ಕಾರಿಗೆ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.

ADVERTISEMENT

ದಾವಣಗೆರೆ ತಾಲ್ಲೂಕಿನ ಎಚ್‌. ಕಲ್ಪನಹಳ್ಳಿಯ ಶಶಿಕುಮಾರ್‌ ಜಮೀನು ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ– 48 ದಾಟುತ್ತಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ರೈತ ಸ್ಥಳದಲ್ಲೇ ಮೃತಪಟ್ಟರು.

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48 (ಪುಣೆ–ಬೆಂಗಳೂರು) ಹಾಗೂ ರಾಷ್ಟ್ರೀಯ ಹೆದ್ದಾರಿ 50 (ನಾಂದೇಡ್‌–ಚಿತ್ರದುರ್ಗ) ಇಂತಹ ಅಪಘಾತಗಳಿಗೆ ನಿತ್ಯ ಸಾಕ್ಷಿಯಾಗುತ್ತಿವೆ. ಜಿಲ್ಲೆಯಲ್ಲಿ 2024 ರಲ್ಲಿ 283 ಜನರು ಇಂತಹ ಅಪಘಾತಗಳಿಗೆ ಬಲಿಯಾಗಿದ್ದಾರೆ. ಈ ಸಾವಿನ ಸಂಖ್ಯೆಯಲ್ಲಿ ಈ ಹೆದ್ದಾರಿಗಳ ಪಾಲು ಬಹುದೊಡ್ಡದು.

ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಈ ಹೆದ್ದಾರಿಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ವಹಣೆ ಮಾಡುತ್ತಿದೆ. ಷಟ್ಪಥ ಹಾಗೂ ಚತುಷ್ಪಥಗಳನ್ನು ಹೊಂದಿರುವ ಈ ಹೆದ್ದಾರಿಯಲ್ಲಿ ವಾಹನಗಳು ಪ್ರತಿ ಗಂಟೆಗೆ 100 ಕಿ.ಮೀ.ಗೂ ಹೆಚ್ಚು ವೇಗವಾಗಿ ಸಂಚರಿಸುತ್ತವೆ. ಈ ವೇಗಕ್ಕೆ ತಕ್ಕಷ್ಟು ಸುಸ್ಥಿತಿಯಲ್ಲಿ ಹೆದ್ದಾರಿಗಳಿಲ್ಲ.

ಮುಗಿಯದ ಕಾಮಗಾರಿ: ಪುಣೆ–ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48ನ್ನು 2002–03ರಲ್ಲಿ ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸಲಾಯಿತು. 2018ರಲ್ಲಿ ಇದನ್ನು ಷಟ್ಪಥಕ್ಕೆ ಪರಿವರ್ತಿಸಲಾಯಿತು. ದಾವಣಗೆರೆ–ಚಿತ್ರದುರ್ಗ, ಹರಿಹರ–ರಾಣೆಬೆನ್ನೂರು ನಡುವೆ ಷಟ್ಪಥ ನಿರ್ಮಾಣವಾಗಿದೆ. ಆದರೆ, ಹರಿಹರ–ದಾವಣಗೆರೆಯ ನಡುವೆ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ದಾವಣಗೆರೆ ಹೊರವಲಯದ ಕುಂದುವಾಡ ಸಮೀಪದ ಕೆಳಸೇತುವೆ (ಅಂಡರ್‌ಪಾಸ್‌) ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರ ಹಾಗೂ ಗ್ರಾಮಸ್ಥರ ನಡುವೆ ಹಲವು ವರ್ಷಗಳಿಂದ ಜಟಾಪಟಿ ನಡೆಯುತ್ತಿದೆ. ಭತ್ತದ ಹುಲ್ಲು, ಜೋಳದ ಸೊಪ್ಪೆಯಂತಹ ಮೇವು ತುಂಬಿದ ಟ್ರ್ಯಾಕ್ಟರ್‌ಗಳು ಸರಾಗವಾಗಿ ಸಾಗಲು 18 ಮೀಟರ್‌ ಅಗಲದ ಅಂಡರ್‌ಪಾಸ್‌ಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಗ್ರಾಮವನ್ನು ನೇರವಾಗಿ ಸಂಪರ್ಕಿಸುವ ವ್ಯವಸ್ಥೆ ರೂಪಿಸುವಂತೆ ಪಟ್ಟು ಹಿಡಿದಿದ್ದರು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಲು ಪ್ರಾಧಿಕಾರ ವಿಳಂಬ ಮಾಡಿದ್ದರಿಂದ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಂಡಿಲ್ಲ.

ನಿರ್ಮಾಣವಾಗದ ಸರ್ವಿಸ್‌ ರಸ್ತೆ: ರಾಷ್ಟ್ರೀಯ ಹೆದ್ದಾರಿಗೆ ಸರ್ವಿಸ್‌ ರಸ್ತೆ ಕಡ್ಡಾಯ. ಹೆದ್ದಾರಿ ಬದಿಯ ಹಳ್ಳಿಗಳ ಕೃಷಿ ಚಟುವಟಿಕೆಗೆ ಇದರಿಂದ ಅನುಕೂಲ. ಆದರೆ, ಹರಿಹರ ಮತ್ತು ದಾವಣಗೆರೆ ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಸರ್ವಿಸ್‌ ರಸ್ತೆ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ.

ದಾವಣಗೆರೆ–ಹರಿಹರ (ಶಾಮನೂರು ಸೇತುವೆಯಿಂದ ಹರಿಹರ ಬೈಪಾಸ್‌ವರೆಗೆ) ನಡುವೆ 23 ಕಿ.ಮೀ ಅಂತರವಿದೆ. ಇದರಲ್ಲಿ 13 ಕಿ.ಮೀ ಸರ್ವಿಸ್‌ ರಸ್ತೆಯೇ ಇರಲಿಲ್ಲ. ಎರಡು ವರ್ಷಗಳಿಂದ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆಯಾದರೂ ಪೂರ್ಣಗೊಳ್ಳುವ ಭರವಸೆ ಮೂಡಿಲ್ಲ. ಬಾತಿ, ಬನ್ನಿಕೋಡು, ಷಂಶೀಪುರ, ಹಳೆ ಕುಂದುವಾಡ, ಹೊಸ ಕುಂದುವಾಡ ಸೇರಿ ಹಲವು ಗ್ರಾಮಗಳ ಜನರು ಅನುಭವಿಸುವ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಡಾಬಾಗಳ ಹಾವಳಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಡಾಬಾಗಳ ಹಾವಳಿ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ರಂಗು ಪಡೆಯುವ ಈ ಡಾಬಾಗಳು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ನಾಯಿಕೊಡೆಗಳಂತೆ ತಲೆ ಎತ್ತಿವೆ. ಇವುಗಳಿಗೆ ಕಡಿವಾಣ ಹಾಕುವಲ್ಲಿ ಹೆದ್ದಾರಿ ಪ್ರಾಧಿಕಾರ, ಪೊಲೀಸ್‌, ಸ್ಥಳೀಯ ಸಂಸ್ಥೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಕಾಣುತ್ತಿಲ್ಲ.

ಹೆದ್ದಾರಿಗೆ ಜನ, ಜಾನುವಾರು ನುಗ್ಗದಂತೆ ತಡೆಯಲು ಹಾಗೂ ವಾಹನಗಳು ಎಲ್ಲೆಂದರಲ್ಲಿ ನಿರ್ಗಮಿಸಲು ಅವಕಾಶ ಇಲ್ಲದಂತೆ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಡಾಬಾ, ಹೋಟೆಲ್‌, ಪೆಟ್ರೋಲ್‌ ಬಂಕ್‌ಗಳು ಈ ಬೇಲಿಯನ್ನು ಮುರಿದು ಗ್ರಾಹಕರನ್ನು ಆಕರ್ಷಿಸುತ್ತಿವೆ. ಮಳೆ ನೀರು ಹರಿಯಲು ನಿರ್ಮಿಸಿದ ಚರಂಡಿಯನ್ನು ಮುಚ್ಚಲಾಗುತ್ತಿದೆ. ಇದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ದಾವಣಗೆರೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಬದಿಯಲ್ಲಿ ನಿರ್ಮಿಸಿದ ತಡೆಗೋಡೆಯನ್ನು ಒಡೆದು ಚರಂಡಿ ಮುಚ್ಚಿರುವುದು 
ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆಯುತ್ತಿರುವ ಕಾಮಗಾರಿ 
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆ ಹೊಂಡದಂತಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ
ಅರ್ಚಕ ಬಾಲಸುಬ್ರಮಣ್ಯಂ ಕಾರಿಗೆ ಡಿಕ್ಕಿ ಹೊಡೆದ ವಾಹನ ಇನ್ನೂ ಪತ್ತೆಯಾಗಿಲ್ಲ. ಹೆದ್ದಾರಿಯಲ್ಲಿ ಗುಣಮಟ್ಟದ ಸಿ.ಸಿ.ಟಿವಿ ಕ್ಯಾಮೆರಾಗಳಿಲ್ಲ. ಅಪಘಾತ ಮಾಡಿದವರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ
ಎಂ.ಜಿ. ಶ್ರೀಕಾಂತ್‌ ಸಾಮಾಜಿಕ ಕಾರ್ಯಕರ್ತ
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಯಲು ಕೆಲ ಸುಧಾರಣೆಗಳನ್ನು ಕೈಗೊಳ್ಳುವಂತೆ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಅನಧಿಕೃತ ಅಂಗಡಿ ತೆರವು ವಿದ್ಯುತ್‌ ದೀಪ ಕ್ಯಾಮೆರಾ ಅಳವಡಿಸಲು ಸಲಹೆ ನೀಡಲಾಗಿದೆ
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಜಾಹೀರಾತು ಫಲಕಗಳೇ ಅಡ್ಡಿ

ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ಮುಂದಿನ ದಾರಿ ಗೋಚರವಾಗದ ರೀತಿಯಲ್ಲಿ ಹಾಕಿದ ಫಲಕಗಳಿಂದ ತೊಂದರೆಯಾಗುತ್ತಿದೆ. ಇವು ಚಾಲಕರ ಗಮನ ಸೆಳೆಯುತ್ತಿರುವುದರಿಂದ ಚಾಲನೆಯ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದಾವಣಗೆರೆ ಹಾಗೂ ಹರಿಹರ ಸಮೀಪದಲ್ಲಿ ಇಂತಹ ಫಲಕಗಳ ಸಂಖ್ಯೆ ಹೆಚ್ಚಿದೆ. ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ ನಗರ ಸ್ಥಳೀಯ ಸಂಸ್ಥೆಯ ಅನುಮತಿ ಪಡೆಯದೇ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಸಂಚಾರಕ್ಕೆ ತೊಡಕಾದ ಫಲಕಗಳನ್ನು ತೆರವುಗೊಳಿಸಲು ನಡೆಸಿದ ಪ್ರಯತ್ನ ಕೂಡ ಫಲಪ್ರದವಾಗಿಲ್ಲ.

ಪಾಲನೆಯಾಗದ ಪಥ ಶಿಸ್ತು

ರಾಷ್ಟ್ರೀಯ ಹೆದ್ದಾರಿ –48ರಲ್ಲಿ ಪಥ ಶಿಸ್ತು ಜಾರಿಗೊಳಿಸಿ ವರ್ಷಗಳೇ ಉರುಳಿವೆ. ಷಟ್ಪಥ ಹೆದ್ದಾರಿಯಲ್ಲಿ ನಿಗದಿಪಡಿಸಿದ ಪಥದಲ್ಲಿಯೇ ವಾಹನ ಸಾಗಬೇಕು ಎಂಬುದು ಇದರ ನಿಯಮ. ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಕಡ್ಡಾಯವಾಗಿ ಪಥ ನಿಯಮ ಪಾಲನೆ ಮಾಡಬೇಕು. ಈ ಪಥ ಶಿಸ್ತಿನ ಮೇಲೆ ನಿಗಾ ಇಡುವ ಹಾಗೂ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆ ಪ್ರಬಲವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಯ ಒಳ ಪಥದಲ್ಲಿ (ಫಸ್ಟ್‌ ಲೇನ್‌) ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಗಳು ಸಾಗಬೇಕು. ಲಾರಿ ಟ್ಯಾಂಕರ್ ಸೇರಿದಂತೆ ಭಾರಿ ವಾಹನಗಳು ಹೊರ ಪಥದಲ್ಲಿ (ಔಟರ್‌ ಲೇನ್‌) ಸಂಚರಿಸಬೇಕು. ಪಥ ಶಿಸ್ತು ಉಲ್ಲಂಘಿಸುವ ವಾಹನಗಳನ್ನು ಸಿ.ಸಿ.ಟಿವಿ ಕ್ಯಾಮೆರಾಗಳು ಪತ್ತೆ ಮಾಡುತ್ತವೆ. ಇಂತಹ ವಾಹನಗಳಿಗೆ ಟೋಲ್‌ ಪ್ಲಾಜಾ ಬಳಿ ದಂಡ ವಿಧಿಸಬೇಕು. ಆದರೆ ಇದು ನಿಯಮಿತವಾಗಿ ನಡೆಯುತ್ತಿಲ್ಲ. ಇದರಿಂದ ಸರಕು ಸಾಗಣೆ ವಾಹನಗಳು ಪಥ ಶಿಸ್ತನ್ನು ಗಾಳಿಗೆ ತೂರಿವೆ.

ಜಗಳೂರು: ಸುರಕ್ಷತೆಗೆ ಸಿಗದ ಮನ್ನಣೆ

ತಾಲ್ಲೂಕಿನ ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಅವೈಜ್ಞಾನಿಕ ರಸ್ತೆ ತಿರುವುಗಳಿಂದಾಗಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಹೊಸಪೇಟೆ–ಚಿತ್ರದುರ್ಗ ಮಾರ್ಗದ ಹೆದ್ದಾರಿಯಲ್ಲಿ ದೊಣೆಹಳ್ಳಿ ಕಡೆಯಿಂದ ಮೂಡಲಮಾಚಿಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸರಿಯಾಗಿ ನಿರ್ಮಿಸಿಲ್ಲ. ಈ ಸ್ಥಳದಲ್ಲಿ ಸಂಭವಿಸುವ ಅಪಘಾತಗಳಿಂದಾಗಿ ಪ್ರತಿ ವರ್ಷ ನಾಲ್ಕೈದು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಚಿತ್ರದುರ್ಗದಿಂದ ಹೊಸಪೇಟೆ ಕಡೆಗೆ ತೆರಳುವ ಹೆದ್ದಾರಿಗೆ ಮೂಡಲಮಾಚಿಕೆರೆ ಕ್ರಾಸ್ ಬಳಿ ಬಲಕ್ಕೆ ತಿರುವು ಕೊಡಲಾಗಿದೆ. ಇಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ದಿಢೀರ್ ತಿರುವು ತೆಗೆದುಕೊಳ್ಳುವುದರಿಂದ ಹೊಸಪೇಟೆ ಕಡೆಯಿಂದ ಚಿತ್ರದುರ್ಗದತ್ತ ಶರವೇಗದಲ್ಲಿ ಸಾಗುವ ವಾಹನಗಳ ನಡುವೆ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ‘ಒಂದು ವರ್ಷದಲ್ಲಿ ಈ ಸ್ಥಳದಲ್ಲಿ ನಾಲ್ಕೈದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ. ಫ್ಲೈ ಓವರ್ ಕೆಳಭಾಗದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲ. ಇದರಿಂದ ಮಳೆ ನೀರು ವಾರಗಟ್ಟಲೆ ಸಂಗ್ರಹವಾಗುತ್ತದೆ. ಈ ನೀರಿನಲ್ಲಿ ವಾಹನಗಳು ಸಂಚರಿಸಲು ಪರದಾಡಬೇಕಾದ ಸ್ಥಿತಿ ಇದೆ’ ಎಂದು ದೊಣೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ತಿಮ್ಮಶೆಟ್ಟಿ ಬೇಸರ ವ್ಯಕ್ತಪಡಿಸಿದರು. ‘ಫ್ಲೈ ಓವರ್ ಕೆಳಭಾಗದಲ್ಲಿ ಬಹಳ ದಿನಗಳವರೆಗೆ ನೀರು ನಿಲ್ಲುವುದರಿಂದ ಜಗಳೂರಿನಿಂದ ಚಿತ್ರದುರ್ಗದ ಕಡೆ ತೆರಳುವ ವಾಹನಗಳು ಮೂಡಲಮಾಚಿಕೆರೆ ಕ್ರಾಸ್ ಬಳಿ ತಿರುವು ತೆಗೆದುಕೊಂಡು ಸಾಗುತ್ತವೆ. ಹೊಸಪೇಟೆ ಕೂಡ್ಲಿಗಿ ಚಿತ್ರದುರ್ಗ ನಾಯಕನಹಟ್ಟಿ ಮತ್ತು ಚಳ್ಳಕೆರೆ ಕಡೆಗೆ ತೆರಳುವ ಪ್ರಯಾಣಿಕರು ದೊಣೆಹಳ್ಳಿ ಕ್ರಾಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಹೆದ್ದಾರಿ ದಾಟುವುದು ಕೂಡ ಸಾಮಾನ್ಯವಾಗಿದೆ. ಈ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳದಲ್ಲಿ ಸ್ಕೈವಾಕ್ ನಿರ್ಮಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮರೇನಹಳ್ಳಿ ಬಸವರಾಜ್ ಆಗ್ರಹಿಸಿದ್ದಾರೆ. ಸಂಗೇನಹಳ್ಳಿ ಸಮೀಪದ ಇಕ್ಕೆಲಗಳಲ್ಲಿ ಜಾಲಿ ಮುಳ್ಳು ಹೆದ್ದಾರಿಯನ್ನು ಆವರಿಸಿಕೊಂಡಿದೆ. ಇದರಿಂದ ಹೆದ್ದಾರಿ ಬದಿಯಲ್ಲಿ ಏನೂ ಕಾಣದಂತಾಗಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಹಲವು ವರ್ಷಗಳಿಂದ ಇರುವ ಪೊದೆಗಳನ್ನು ತೆರವುಗೊಳಿಸದಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.