ADVERTISEMENT

New Year 2026: ದಾವಣಗೆರೆಯಲ್ಲಿ ಸಂಭ್ರಮದ ಸ್ವಾಗತ

ಬಾನೆತ್ತರಕ್ಕೆ ಸಿಡಿದ ಪಟಾಕಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದ ಯುವಸಮೂಹ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:21 IST
Last Updated 1 ಜನವರಿ 2026, 7:21 IST
ದಾವಣಗೆರೆಯ ಆಹಾರ್‌ 2000 ಮಳಿಗೆಯಲ್ಲಿ ಖರೀದಿಗೂ ಮುನ್ನ ಕೇಕ್‌ ಆಯ್ಕೆಯಲ್ಲಿ ಮಗ್ನರಾದ ತಾಯಿ–ಮಗು
ದಾವಣಗೆರೆಯ ಆಹಾರ್‌ 2000 ಮಳಿಗೆಯಲ್ಲಿ ಖರೀದಿಗೂ ಮುನ್ನ ಕೇಕ್‌ ಆಯ್ಕೆಯಲ್ಲಿ ಮಗ್ನರಾದ ತಾಯಿ–ಮಗು   

ದಾವಣಗೆರೆ: ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದವರು ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಸಂಭ್ರಮಕ್ಕೆ ಸಜ್ಜಾದರು. ಆಗಸಕ್ಕೆ ಚಿಮ್ಮಿದ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಕೇಕ್‌ಗಳನ್ನು ಕತ್ತರಿಸಿ ಹರ್ಷೋದ್ಗಾರ ಮಾಡಿದರು. ಹೊಸವರ್ಷ 2026ಕ್ಕೆ ಸಂತಸದಿಂದ ಸ್ವಾಗತ ಕೋರಲಾಯಿತು.

2025ಕ್ಕೆ ವಿದಾಯ ಹೇಳಿ ಹೊಸವರ್ಷವನ್ನು ಬರಮಾಡಿಕೊಳ್ಳುವ ಗಳಿಗೆಯನ್ನು ಜಿಲ್ಲೆಯಲ್ಲಿ ಸಂಭ್ರಮಿಸಲಾಯಿತು. ಬದುಕಿನ ಹೊಸ ಸಂಕಲ್ಪದೊಂದಿಗೆ ನೂತನ ವರ್ಷವನ್ನು ಸ್ವಾಗತಿಸಲಾಯಿತು. ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.

ಹೊಸವರ್ಷಾಚರಣೆಗೆ ಹಲವು ಹೋಟೆಲ್‌, ರೆಸಾರ್ಟ್‌ ಹಾಗೂ ಕ್ಲಬ್‌ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆಯಾಗುತ್ತಿದ್ದಂತೆ ಯುವಸಮೂಹ ಇವುಗಳತ್ತ ಮುಖ ಮಾಡಿದರು. ಕತ್ತಲು ಆವರಿಸುತ್ತಿದ್ದಂತೆ ಸಂಭ್ರಮ ಹೆಚ್ಚಾಯಿತು. ವೇದಿಕೆಯ ಮೇಲಿಂದ ಹೊರಹೊಮ್ಮುತ್ತಿದ್ದ ಸುಶ್ರಾವ್ಯ ಸಂಗೀತಕ್ಕೆ ಯುವಜನರು ತಲೆದೂಗಿದರು. ಅಬ್ಬರದ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.

ADVERTISEMENT

ನಗರದ ಹೋಟೆಲ್ ಅಶೋಕ, ಹೋಟೆಲ್‌ ಸದರ್ನ್‌ಸ್ಟಾರ್‌, ಸಾಯಿ ಇಂಟರ್‌ ನ್ಯಾಷನಲ್‌, ಪೂಜಾ ಇಂಟರ್‌ ನ್ಯಾಷನಲ್‌ ಸೇರಿ ಹಲವೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಔತಣ ಕೂಟ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದರ ನಿಗದಿಪಡಿಸಲಾಗಿತ್ತು. ಮೊದಲೇ ಟಿಕೆಟ್ ಖರೀದಿಸಿದವರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಮಧ್ಯರಾತ್ರಿ ವರೆಗೆ ಕಾದು ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಕೆಲವು ಹೋಟೆಲ್‌ಗಳಲ್ಲಿ ಹಿಂದಿನ ವರ್ಷದ ಸಂಭ್ರಮ ಇರಲಿಲ್ಲ.

‘ದಾವಣಗೆರೆ ಕ್ಲಬ್‌’ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಿನ ಮನೋವಜಂ, ಅರುಂಧತಿ ಹೆಗಡೆ, ಚಿನ್ಮಯ್, ಸಾಕ್ಷಿ ಕಲ್ಲೂರ ಗಾನಸುಧೆ ಹರಿಸಿದರು. ಪ್ರಮುಖ ವೃತ್ತ, ರಸ್ತೆಗಳಲ್ಲಿ ಜಮಾಯಿಸಿದ ಯುವಕರು ನೃತ್ಯ ಮಾಡಿದರು. ದ್ವಿಚಕ್ರ ವಾಹನ, ಕಾರುಗಳಲ್ಲಿ ಸಂಚರಿಸಿ ಕೇಕೆ ಹಾಕಿದರು. ಹೆದ್ದಾರಿ ಬದಿಯ ಡಾಬಾಗಳಲ್ಲಿ ಕೂಡ ಸಂಭ್ರಮ ಕಂಡುಬಂದಿತು. ಬಡಾವಣೆ, ಅಪಾರ್ಟ್‌ಮೆಂಟ್‌ಗಳಲ್ಲಿ ಹೊಸ ವರ್ಷವನ್ನು ಸಂತಸದಿಂದ ಸ್ವಾಗತಿಸಲಾಯಿತು.

ಹೊಸ ವರ್ಷಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಹಲವೆಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳನ್ನು ತಪಾಸಣೆ ಮಾಡಲಾಯಿತು. ಕುಡಿದು ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸಲಾಯಿತು.

ದಾವಣಗೆರೆಯ ಆಹಾರ್‌ 2000 ಮಳಿಗೆಯಲ್ಲಿ ಹೊಸ ವರ್ಷಕ್ಕೆ ಸಜ್ಜಾಗಿದ್ದ ತರಹೇವಾರಿ ಕೇಕ್‌ಗಳು

ಕೇಕ್‌ ಮದ್ಯ ಭರ್ಜರಿ ಮಾರಾಟ

ಹೊಸ ವರ್ಷಾಚರಣೆಯ ಸಂಭ್ರಮಾಚರಣೆಗೆ ಜಿಲ್ಲೆಯಲ್ಲಿ ಬುಧವಾರ ಕೇಕ್‌ ಹಾಗೂ ಮದ್ಯ ಮಾರಾಟ ಜೋರಾಗಿ ನಡೆಯಿತು. ಬೇಕರಿ ಸಿಹಿ ತಿನಿಸು ಮಾಂಸದಂಗಡಿ ಹಾಗೂ ಮದ್ಯದಂಗಡಿಗಳಲ್ಲಿ ಬುಧವಾರ ಜನಜಂಗುಳಿ ಕಂಡುಬಂದಿತು. ನಗರದ ‘ಆಹಾರ್ 2000’ ಮಳಿಗೆಯಲ್ಲಿ ಹೊಸ ವರ್ಷಕ್ಕಾಗಿ 1500 ಕೆಜಿಯ ಕೇಕ್ ತಯಾರಿಸಲಾಗಿತ್ತು. ಕೇಕ್ ವರ್ಲ್ಡ್‌ನಲ್ಲಿ 700 ಕೆಜಿಗೂ ಅಧಿಕ ಹಾಗೂ ರಾಕಿಂಗ್‌ನಲ್ಲಿ 1200 ಕೆಜಿ ಕೇಕ್ ಸಿದ್ಧವಾಗಿತ್ತು. ‘ವೆಲ್‌ಕಮ್‌ 2026’ ಎಂಬ ಬರಹದೊಂದಿಗೆ ಕೇಕ್‌ಗಳನ್ನು ತಯಾರಿಸಲಾಗಿತ್ತು. ವಿವಿಧ ಆಕಾರ ಬಣ್ಣದ ಕೇಕ್‌ಗಳನ್ನು ಖರೀದಿಸಿ ಮನೆಗಳಿಗೆ ಕೊಂಡೊಯ್ಯಲಾಯಿತು.

ದಾವಣಗೆರೆಯ ಆಹಾರ್‌ 2000 ಮಳಿಗೆಯಲ್ಲಿ ಹೊಸ ವರ್ಷಾಚರಣೆಗೆ ಕೇಕ್‌ ಖರೀದಿಗೆ ಮುಂದಾದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.