ADVERTISEMENT

ದಾವಣಗೆರೆ | ಪ್ರಿಯಕರನ ಜೊತೆ ಪತ್ನಿ ಪರಾರಿ: ಪತಿ, ಸೋದರ ಮಾವ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 0:12 IST
Last Updated 28 ಜನವರಿ 2026, 0:12 IST
ಹರೀಶ್‌, ರುದ್ರೇಶ್
ಹರೀಶ್‌, ರುದ್ರೇಶ್   

ದಾವಣಗೆರೆ: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು, ಈ ಜೋಡಿಗೆ ಮದುವೆ ಮಾಡಿಸಿದ್ದ ವಧುವಿನ ಸೋದರಮಾವ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ತಾಲ್ಲೂಕಿನ ಗುಮ್ಮನೂರು ಗ್ರಾಮದ ಹರೀಶ್‌ (30), ಅವರ ಸೋದರ ಮಾವ ನಗರದ ಆನೆಕೊಂಡ ನಿವಾಸಿ ರುದ್ರೇಶ್ (36) ಆತ್ಮಹತ್ಯೆ ಮಾಡಿಕೊಂಡವರು. ಸರಸ್ವತಿ ಅವರನ್ನು ಹರೀಶ್‌ 3 ತಿಂಗಳ ಹಿಂದೆ ವಿವಾಹವಾಗಿದ್ದರು. ಆಕೆ ಜ. 23ರಂದು ಪ್ರಿಯಕರ ಕುಮಾರ್‌ ಜೊತೆ ಪರಾರಿಯಾಗಿದ್ದರು. 

ಹರೀಶ್ ಸೋಮವಾರ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟರೆ, ಸರಸ್ವತಿಯ ಸೋದರಮಾವ ರುದ್ರೇಶ್‌ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟರು.

ADVERTISEMENT

ಡೆತ್‌ನೋಟ್‌ ಪತ್ತೆ:  ‘ಪತ್ನಿ ಓಡಿ ಹೋಗಿದ್ದಾಳೆ. ನಾನೇ ಹಿಂಸೆ ನೀಡುತ್ತಿದ್ದೇನೆ ಎಂದು ಆರೋಪ ಮಾಡಿದ್ದಾಳೆ. ಆಕೆಯ ಸಂಬಂಧಿಕರು ಜೀವ ಬೆದರಿಕೆಯೊಡ್ಡಿದ್ದಾರೆ. ನಾನು ತಪ್ಪು ಮಾಡಿಲ್ಲ. ನನಗೆ ಮಾನ– ಮರ್ಯಾದೆ ಮುಖ್ಯ’ ಎಂದು ಹರೀಶ್‌ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರ ಸಿಕ್ಕಿದೆ.

‘ಸರಸ್ವತಿಯ ಪ್ರಿಯಕರ ಕುಮಾರ್‌, ಹರೀಶ್‌ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ. ಇದರಿಂದ  ನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸರಸ್ವತಿ, ಆಕೆ ಪೋಷಕರು ಹಾಗೂ ಕುಮಾರ್ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಹರೀಶ್ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದಾವಣಗೆರೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.