ADVERTISEMENT

ದಾವಣಗೆರೆ | ಓಪನ್‌ ಟೆನಿಸ್‌ ಟೂರ್ನಿ: ಮುದ ನೀಡಿದ ತಂದೆ–ಮಗನ ಅನುಬಂಧ

ಜಿ.ಶಿವಕುಮಾರ
Published 28 ಅಕ್ಟೋಬರ್ 2023, 7:58 IST
Last Updated 28 ಅಕ್ಟೋಬರ್ 2023, 7:58 IST
ಪುಟಾಣಿ ಸಿದ್ದಾರ್ಥ್‌, ಅಪ್ಪ ವಿಷ್ಣುವರ್ಧನ್‌ಗೆ ಐಸ್‌ಕ್ರೀಂ ತಿನಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಪುಟಾಣಿ ಸಿದ್ದಾರ್ಥ್‌, ಅಪ್ಪ ವಿಷ್ಣುವರ್ಧನ್‌ಗೆ ಐಸ್‌ಕ್ರೀಂ ತಿನಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಐಟಿಎಫ್‌ ದಾವಣಗೆರೆ ಓಪನ್‌ ಟೆನಿಸ್‌ ಟೂರ್ನಿಯು ತಂದೆ–ಮಗನ ಅನುಬಂಧಕ್ಕೆ ಸಾಕ್ಷಿಯಾಗಿದೆ. 

ಒಲಿಂಪಿಕ್ಸ್‌ ಹಾಗೂ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಆಡಿರುವ ಭಾರತದ ವಿಷ್ಣುವರ್ಧನ್‌, ದಾವಣಗೆರೆ ಜಿಲ್ಲಾ ಟೆನಿಸ್‌ ಸಂಸ್ಥೆಯ ಅಂಗಳದಲ್ಲೂ ಮೋಡಿ ಮಾಡಿದ್ದಾರೆ. ಡಬಲ್ಸ್‌ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಅವರು ಪ್ರಶಸ್ತಿಯ ಕನವರಿಕೆಯಲ್ಲಿದ್ದಾರೆ.

ವಿಷ್ಣುವರ್ಧನ್‌ ಹಾಗೂ ಅವರ ಪುಟಾಣಿ ಮಗ ಸಿದ್ದಾರ್ಥನ ನಡುವಣ ಬೆಸುಗೆ ಎಲ್ಲರ ಗಮನ ಸೆಳೆಯುತ್ತಿದೆ. ಪಂದ್ಯದ ವೇಳೆ, ಅಭ್ಯಾಸದ ಸಮಯದಲ್ಲಿ ಸದಾ ಅಪ್ಪನ ಜೊತೆಗೇ ಇರುವ ಸಿದ್ಧಾರ್ಥ್‌, ತಂದೆಯ ಕೈಹಿಡಿದು ಹೆಜ್ಜೆ ಹಾಕುವುದು ಪ್ರೇಕ್ಷಕರ ಮನಸ್ಸಿಗೆ ಮುದ ನೀಡುತ್ತಿದೆ. 

ADVERTISEMENT

ಮಗನ ಜೊತೆಗಿನ ಒಡನಾಟದ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ವಿಷ್ಣುವರ್ಧನ್‌, ‘ಆತ ನನ್ನೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತಾನೆ. ಶಾಲೆಗೆ ರಜೆ ಇರುವುದರಿಂದ ಹಠ ಮಾಡಿ ಜೊತೆಗೆ ಬಂದಿದ್ದಾನೆ. ಗ್ಯಾಲರಿಯಲ್ಲಿ ಕುಳಿತು ನನ್ನ ಪಂದ್ಯಗಳನ್ನು ನೋಡುತ್ತಾನೆ. ಅಭ್ಯಾಸಕ್ಕೆ ಹೋದಾಗಲೂ ನನ್ನನ್ನು ಹಿಂಬಾಲಿಸುತ್ತಾನೆ’ ಎಂದು ತಿಳಿಸಿದರು.

‘ಆತನಿಗೆ ಇಲ್ಲಿನ ಹೋಟೆಲ್‌ಗಳಲ್ಲಿ ಸಿಗುವ ಬೆಣ್ಣೆ ದೋಸೆ ತುಂಬಾ ಹಿಡಿಸಿಬಿಟ್ಟಿದೆ. ಇಲ್ಲಿಗೆ ಬಂದ ದಿನದಿಂದಲೂ ಬೆಳಿಗ್ಗಿನ ಉಪಾಹಾರಕ್ಕೆ ಬೆಣ್ಣೆ ದೋಸೆ ಬೇಕೆ ಬೇಕು ಎಂದು ಹಠ ಹಿಡಿಯುತ್ತಿದ್ದಾನೆ. ಕೊಡಿಸದಿದ್ದರೆ ಅಳುತ್ತಾನೆ. ಮನೆಗೆ ಹೋದ ನಂತರವೂ ಬೆಣ್ಣೆ ದೋಸೆ ಮಾಡಿಕೊಡಬೇಕೆಂದು ನನ್ನ ಪತ್ನಿಗೆ ಈಗಾಗಲೇ ಫರ್ಮಾನು ಹೊರಡಿಸಿಬಿಟ್ಟಿದ್ದಾನೆ’ ಎಂದು ನಕ್ಕರು.

‘ಆತನಿಗೂ ಟೆನಿಸ್‌ ಬಗ್ಗೆ ಆಸಕ್ತಿ ಇದೆ. ಶಾಲೆಗೆ ರಜೆ ಇದ್ದಾಗಲೆಲ್ಲಾ ತನ್ನ ಪುಟ್ಟ ‘ರ‍್ಯಾಕೆಟ್‌’ ಹಿಡಿದು ಅಭ್ಯಾಸಕ್ಕೆಂದು ಅಕಾಡೆಮಿಗೆ ಹೋಗುತ್ತಾನೆ. ನಾನೂ ಕೂಡ ಆತನಿಗೆ ಟೆನಿಸ್‌ ತಂತ್ರಗಳನ್ನು ಹೇಳಿಕೊಡುತ್ತೇನೆ. ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಗೆದ್ದ ಬಳಿಕ ನನಗೆ ಐಸ್‌ಕ್ರೀಂ ತಿನಿಸಿ ಆತನೂ ಖುಷಿಪಟ್ಟ’ ಎಂದರು.

‘ದಾವಣಗೆರೆಯ ವಾತಾವರಣ ಚೆನ್ನಾಗಿದೆ. ಜಿಲ್ಲಾ ಟೆನಿಸ್‌ ಸಂಸ್ಥೆಯ ಕ್ರೀಡಾಂಗಣದಲ್ಲಿರುವ ‘ಹಾರ್ಡ್‌ ಕೋರ್ಟ್‌’ಗಳು ಅಂತರರಾಷ್ಟ್ರೀಯ ಗುಣಮಟ್ಟದಿಂದ ಕೂಡಿವೆ. ಇಲ್ಲಿನ ಮಕ್ಕಳಲ್ಲೂ ಟೆನಿಸ್‌ ಬಗ್ಗೆ ಒಲವಿದ್ದಂತೆ ಕಾಣುತ್ತಿದೆ. ಡಬಲ್ಸ್‌ ವಿಭಾಗದ ಪಂದ್ಯದ ವೇಳೆ ‘ಬಾಲ್‌ ಬಾಯ್‌’ವೊಬ್ಬ ಅಮೆರಿಕದ ಆಟಗಾರ ನಿಕ್‌ ಚಾಪೆಲ್‌ ಜೊತೆ ಮಾತನಾಡುತ್ತಿದ್ದುದನ್ನು ಗಮನಿಸಿದ್ದೇನೆ’ ಎಂದು ಹೇಳಿದರು.

‘ಹಿಂದಿನ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಲು ಆಗಿರಲಿಲ್ಲ. ಡಬಲ್ಸ್‌ ಜೊತೆಗಾರ ಸಿದ್ಧಾಂತ್‌ ಬಂತಿಯಾ ಜೊತೆ ಕಠಿಣ ಅಭ್ಯಾಸ ನಡೆಸಿದ್ದೆ. ನಿಕ್‌ ಚಾಪೆಲ್‌ ಹಾಗೂ ಬೊಗ್ಡಾನ್‌ ಬೊಬ್ರೊವ್‌ ಎದುರಿನ ಸೆಮಿಫೈನಲ್‌ನಲ್ಲಿ ಮೊದಲ ಸೆಟ್‌ ಸೋತೆವು. ಅದರಿಂದ ವಿಚಲಿತರಾಗದೆ ದಿಟ್ಟ ಆಟ ಆಡಿದ್ದರಿಂದ ಎರಡನೇ ಸೆಟ್‌ನಲ್ಲಿ ಜಯ ಒಲಿಯಿತು. ‘ಟೈ ಬ್ರೇಕರ್‌’ನಲ್ಲಿ ಎದುರಾಳಿಗಳು ಬಾರಿಸಿದ ಚೆಂಡನ್ನು ಅಮೋಘ ರೀತಿಯಲ್ಲಿ ರಿಟರ್ನ್‌ ಮಾಡಿದೆವು. ಅದು ನಮ್ಮ ಗೆಲುವಿಗೆ ನೆರವಾಯಿತು’ ಎಂದು ಖುಷಿ ಹಂಚಿಕೊಂಡರು.

ಅಭ್ಯಾಸದ ವೇಳೆ ಮಗನೊಂದಿಗೆ ವಿಷ್ಣುವರ್ಧನ್‌ ಖುಷಿಯ ಕ್ಷಣ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.