
ದಾವಣಗೆರೆ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ರದ್ದುಪಡಿಸಿ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ–ಜಿ ರಾಮ್ ಜಿ) ಯೋಜನೆ ಅನುಷ್ಠಾನಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನಗರದ ಜಯದೇವ ವೃತ್ತ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತ್ಯೇಕ ಪ್ರತಿಭಟನೆಗಳು ನಡೆದವು. ‘ವಿಬಿ–ಜಿ ರಾಮ್ ಜಿ’ ಯೋಜನೆಯನ್ನು ಕೈಬಿಡುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಮನರೇಗಾ’ ಯೋಜನೆಯನ್ನು ದುರ್ಬಲಗೊಳಿಸಿ ದುಡಿಯುವ ವರ್ಗದ ಜನರಿಗೆ ಅನ್ಯಾಯ ಎಸಗಲಾಗಿದೆ ಎಂದು ಕಿಡಿಕಾರಿದರು.
‘ಮಹಾತ್ಮ ಗಾಂಧಿ ಹೆಸರಿನ ಯೋಜನೆಯನ್ನು ಬದಲಿಸುವ ಮೂಲಕ ಮತ್ತೊಮ್ಮೆ ಅವರನ್ನು ಹತ್ಯೆ ಮಾಡಲಾಗಿದೆ. ಗಾಂಧೀಜಿ ಅವರ ಮೇಲಿನ ಅಸಹನೆಗೆ ಇದೊಂದು ನಿದರ್ಶನ. ಶ್ರೀರಾಮನನ್ನು ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಆರೋಪಿಸಿದರು.
‘ಯೋಜನೆಯ ಹೆಸರಷ್ಟೇ ಅಲ್ಲ ಸ್ವರೂಪವೂ ಬದಲಾಗಿದೆ. ಇದು ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗದ ಖಾತರಿಯಾಗಿದ್ದ ಈ ಯೋಜನೆಯನ್ನು ಉದ್ದೇಶ ಪೂರ್ವಕವಾಗಿ ಹಾಳು ಮಾಡಲಾಗಿದೆ’ ಎಂದು ಕಾರ್ಮಿಕ ಮುಖಂಡ ಆವರಗೆರೆ ಉಮೇಶ್ ದೂರಿದರು.
‘ಮನರೇಗಾ’ ಹಾಗೂ ‘ವಿಬಿ–ಜಿ ರಾಮ್ ಜಿ’ ಯೋಜನೆ ಸಂಪೂರ್ಣ ಭಿನ್ನವಾಗಿವೆ. ಮನರೇಗಾ ಯೋಜನೆ ಜನರಿಗೆ ಉದ್ಯೋಗ ನೀಡುತ್ತ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದೆ. ರಸ್ತೆ, ಚರಂಡಿ, ಜಲಮೂಲ ಸಂರಕ್ಷಣೆ, ಕೃಷಿ, ತೋಟಗಾರಿಕೆಗೆ ನೆರವಾಗಿದೆ. ಆದರೆ, ಹೊಸ ಯೋಜನೆ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ’ ಎಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಮುಖಂಡ ಸತೀಶ್ ಅರವಿಂದ್ ಅಸಮಾಧಾನ ಹೊರಹಾಕಿದರು.
ಕಾರ್ಮಿಕ ಮುಖಂಡರಾದ ಮಂಜುನಾಥ್ ಕೈದಾಳೆ, ಹೊನ್ನೂರು ಮುನಿಯಪ್ಪ, ಆವರಗೆರೆ ಚಂದ್ರು, ಮಧು ತೊಗಲೇರಿ, ಆನಂದರಾಜು, ಪಿ.ಪಿ. ಮರುಳಸಿದ್ದಯ್ಯ ಹಾಜರಿದ್ದರು.
‘ಮನರೇಗಾ’ ಯೋಜನೆಯ ಕಾಮಗಾರಿಗಳನ್ನು ಸ್ಥಳೀಯರು ನಿರ್ಧರಿಸುತ್ತಿದ್ದರು. ‘ವಿಬಿ–ಜಿ ರಾಮ್ ಜಿ’ ಯೋಜನೆಯಲ್ಲಿ ಕಾಮಗಾರಿಯನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ವಿಕೇಂದ್ರೀಕೃತ ವ್ಯವಸ್ಥೆಗೆ ಹೊಸ ಯೋಜನೆ ಧಕ್ಕೆಯುಂಟು ಮಾಡಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸದಸ್ಯರು ಆರೋಪಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಡವರು ದೀನ ದಲಿತರ ಗೌರವಯುತ ಬದುಕಿಗೆ ಹೊಸ ಕಾಯ್ದೆ ಧಕ್ಕೆ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ‘ಮನರೇಗಾ ಯೋಜನೆಯಲ್ಲಿ ಬಹುಪಾಲು ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಹೊಸ ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ 40ರಷ್ಟಿ ವೆಚ್ಚ ಭರಿಸಬೇಕಿದೆ. ಕೂಲಿಯ ದಿನಗಳನ್ನು ಎರಡು ತಿಂಗಳು ಸ್ಥಗಿತಗೊಳಿಸುವ ಅವಕಾಶ ಕಲ್ಪಿಸಿದೆ. ಇದರಿಂದ ಕಾರ್ಮಿಕರಿಗೆ ತೊಂದರೆ ಉಂಟಾಗಲಿದೆ’ ಎಂದು ಅಳಲು ತೋಡಿಕೊಂಡರು. ಸಂಘಟನೆ ಮುಖಂಡರಾದ ನಾಗರತ್ನಮ್ಮ ಮಲ್ಲಮ್ಮ ಗಂಗಮ್ಮ ಮಹಾಲಕ್ಷ್ಮಿ ರತ್ನಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.