ADVERTISEMENT

ದಾವಣಗೆರೆ | ಗ್ರಾಮೀಣ ರಸ್ತೆ ದುರಸ್ತಿಗೆ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರ ಆಗ್ರಹ

ಪಂಚ ‘ಗ್ಯಾರಂಟಿ’ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:12 IST
Last Updated 10 ಸೆಪ್ಟೆಂಬರ್ 2025, 7:12 IST
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಗಳೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡುವಂತೆ ಗ್ಯಾರಂಟಿ ಯೋಜನೆಯ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಆಗ್ರಹಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಸ್ತೆ ಹಾಳಾಗಿರುವ ವಿಚಾರವೂ ಚರ್ಚೆಗೆ ಬಂದಿತು.

‘ಜಗಳೂರು ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡ ಬೆಳೆದು ನಿಂತಿದ್ದು, ಸಾರಿಗೆ ಬಸ್‌ ಸೌಲಭ್ಯವೇ ಇಲ್ಲವಾಗಿದೆ’ ಎಂದು ಸದಸ್ಯರೊಬ್ಬರು ಸಭೆಗೆ ಮಾಹಿತಿ ನೀಡಿದರು.

ADVERTISEMENT

‘ಅರಳಿಪುರ, ಕೂಲಂಬಿ, ಕುಂದೂರು ಮಾರ್ಗ ಹಾಗೂ ಶಿವಮೊಗ್ಗ, ನ್ಯಾಮತಿ, ಹೊನ್ನಾಳಿ ಮಾರ್ಗದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ’ ಎಂದು ಸದಸ್ಯರು ಒತ್ತಾಯಿಸಿದರು.

‘ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆ ಬಗ್ಗೆ ದೂರು ಕೇಳಿಬರುತ್ತಿವೆ. ಕೆಲವು ತಾಂತ್ರಿಕ ಲೋಪದೋಷ ಕಂಡು ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಬೇಕು’ ಎಂದು ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಸೂಚಿಸಿದರು.

ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ಕೆ.ಎನ್.ಮಂಜುನಾಥ, ಅನಿಶ್ ಪಾಷಾ, ನಂಜಾನಾಯ್ಕ, ರಾಜೇಶ್ವರಿ ಹಾಜರಿದ್ದರು.

ಅನಧಿಕೃತ ಪಡಿತರ ಚೀಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಬೇಕಿದೆ. ಲೋಪ ಕಂಡುಬರುವ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಲಾಗುವುದು
ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.