
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ದಾವಣಗೆರೆ: ನ್ಯಾಯಾಲಯ, ಬ್ಯಾಂಕ್ ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಕಚೇರಿಯಲ್ಲಿ ಕನ್ನಡವೇ ಆಡಳಿತ ಭಾಷೆ ಆಗಬೇಕು. ರಾಜಕಾರಣಿಗಳು ಹುಸಿ ಕನ್ನಡ ಪ್ರೇಮ ಪ್ರದರ್ಶನ ಮಾಡುವುದನ್ನು ಬಿಟ್ಟು ಕನ್ನಡದ ಮೇಲೆ ನೈಜ ಕಾಳಜಿ ತೋರಬೇಕು ಎಂದು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್.ಸಿದ್ದೇಶ್ ಕುರ್ಕಿ ಆಗ್ರಹಿಸಿದರು.
ತಾಲ್ಲೂಕಿನ ಕುರ್ಕಿ-ಹಿರೇತೊಗಲೇರಿ ಸಮೀಪದ ಕಮಲಮ್ಮ ಗುರುಶಾಂತಪ್ಪ ಸಮುದಾಯ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಏರ್ಪಡಿಸಿದ್ದ ದಾವಣಗೆರೆ ತಾಲ್ಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಮಾಡಿದರು.
‘ಬ್ರಿಟಿಷರು ಈ ನಾಡಿನ ಸಂಸ್ಕೃತಿ ಗೌರವಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಸರ್ಕಾರಿ ಆದೇಶಗಳು ಕನ್ನಡದಲ್ಲಿ ಹೊರಬರುತ್ತಿದ್ದವು. ಸಾಹಿತ್ಯ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದ ಮೇಲೆ ರಾಜಕಾರಣಿಗಳು, ಸಚಿವರು ಅಭಿಮಾನ ವ್ಯಕ್ತಪಡಿಸುತ್ತಾರೆ. ಈ ಅಭಿಮಾನ ಆಡಳಿತದಲ್ಲಿ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಐತಿಹ್ಯ ಹೊಂದಿದ ಭಾಷೆಯನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಭಾಷೆ ಉಳಿಸುವ, ಬೆಳೆಸುವ ಔದಾರ್ಯ ಆಡಳಿತ ವರ್ಗದಲ್ಲಿ ಕಾಣುತ್ತಿಲ್ಲ. ಕನ್ನಡ ಭಾಷೆಯನ್ನು ಉಳಿಸುವ ಪಣವನ್ನು ಪ್ರತಿಯೊಬ್ಬರೂ ತೊಡಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ ಭಾಷೆಯನ್ನು ಸಮೃದ್ಧಗೊಳಿಸುವಲ್ಲಿ ದಿನಪತ್ರಿಕೆಗಳ ಪಾತ್ರ ಮಹತ್ತರ. ದಿನಪತ್ರಿಕೆಗಳಲ್ಲಿನ ಮಾಹಿತಿ ಊರು, ಜಿಲ್ಲೆ, ರಾಜ್ಯ, ದೇಶಕ್ಕೆ ಸೀಮಿತ ಆಗಿರುವುದಿಲ್ಲ. ದಿನಪತ್ರಿಕೆಗಳು ಜ್ಞಾನಾರ್ಜನೆಯ ಜೊತೆಗೆ ಭಾಷೆಯನ್ನು ಕಲಿಸುತ್ತವೆ. ಕನ್ನಡ ದಿನಪತ್ರಿಕೆಗಳು ಬದುಕಿನ ಅವಿಭಾಜ್ಯ ಅಂಗವಾಗಬೇಕು’ ಎಂದು ಬಿಐಇಟಿ ಕಾಲೇಜಿನ ನಿರ್ದೇಶಕ ವೈ.ವೃಷಭೇಂದ್ರಪ್ಪ ಸಲಹೆ ನೀಡಿದರು.
ಸಿದ್ದೇಶ್ ಕುರ್ಕಿ ಅವರ ‘ವಿಜ್ಞಾನ ಧಾರೆ’, ‘ಸೌರ ಕುಟುಂಬ’ ಎಚ್.ಕೆ. ಸತ್ಯಭಾಮ ಅವರ ‘ಅಂತಃಸಾಕ್ಷಿ’, ಎಚ್.ಎನ್. ಮಮತಾ ಅವರ ‘ಜೀವನಾಡಿ’ , ಪ್ರತಿಭಾ ಆರ್. ಅವರ ‘ತಾತನ ಪ್ರತಿಧ್ವನಿಗಳು’, ಕೆ. ರಾಘವೇಂದ್ರ ನಾಯರಿ ಸಂಪಾದಕತ್ವದ ‘ಅಪೂರ್ವ ಸಂಗಮ ನುಡಿತೇರು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್, ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಗುರೂಜಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಂಗದ ಸಹಾಯಕ ನಿರ್ದೇಶಕ ಎನ್. ಸಿದ್ಧಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ, ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ, ಜೀವನ್‌ಪ್ರಕಾಶ, ವೇದಮೂರ್ತಿಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಾ ವೆಂಕಟೇಶ ಹಾಜರಿದ್ದರು.
---
ಮನೆಯ ಅಂಗಳದಲ್ಲೇ ನಂಜಿನ ಬೀಜಗಳು ಮೊಳೆತಿವೆ. ಹಿಂದಣ ಹೆಜ್ಜೆ ಇಡುವುದಕ್ಕೆ ಭಾರತ ಹೆಚ್ಚು ಸಂಭ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಕ್ರಿಯಾಶೀಲ ಆಗಬೇಕಿದೆ. ಸಾಮಾಜಿಕ ಸಾಮರಸ್ಯಕ್ಕೆ ಸಾಹಿತಿ ಉತ್ತರದಾಯಿತ್ವ ಬೆಳೆಸಿಕೊಳ್ಳಬೇಕು
-ಎ.ಬಿ. ರಾಮಚಂದ್ರಪ್ಪ, ಸಾಹಿತಿ
ಮನಪರಿವರ್ತನೆಯ ಪ್ರಮುಖ ಸಾಧನ ಸಾಹಿತ್ಯ. ಇದು ಕನ್ನಡಿಯಾಗಿ, ದೀಪವಾಗಿ ಬದುಕನ್ನು ಬೆಳಗಬಲ್ಲದು. ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಹಿತಿ, ಕಲಾವಿದರ ಮೇಲೆ ಹೆಚ್ಚು ಜವಾಬ್ದಾರಿ ಇದೆ
-ಬಸವರಾಜ ಸಾದರ, ನಿವೃತ್ತ ನಿರ್ದೇಶಕ ಬೆಂಗಳೂರು ಆಕಾಶವಾಣಿ
ಸಮ್ಮೇಳನಾಧ್ಯಕ್ಷರ ಹಕ್ಕೋತ್ತಾಯ
* ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯನ್ನು ಸರ್ಕಾರ ಕೈಬಿಡಬೇಕು
* ರಾಜ್ಯದ ಪ್ರತಿ ಶಾಲೆಯಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಬೇಕು
* ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಕೃತಿಗಳು ಕನ್ನಡದಲ್ಲಿ ಹೆಚ್ಚು ಪ್ರಕಟಗೊಳ್ಳಬೇಕು
* ಕನ್ನಡ ಭಾಷೆಯ ಸಾಹಿತ್ಯ ಕೃತಿಗಳನ್ನು ಖರೀದಿಸಲು ಸರ್ಕಾರ ಗ್ರಂಥಾಲಯ ಇಲಾಖೆಗೆ ಹಚ್ಚು ಅನುದಾನ ನೀಡಬೇಕು
* ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ ನೇಮಕಾತಿಯಲ್ಲಿ ಕನ್ನಡ ಭಾಷಿಕರಿಗೆ ಹೆಚ್ಚು ಒತ್ತು ನೀಡಬೇಕು
* ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು
ಅಧ್ಯಕ್ಷರ ಅಮಾನತ್ತಿಗೆ ಶಾಸಕ ಬೇಸರ
ಕನ್ನಡ ಸಾಹಿತ್ಯ ಪರಿಷತ್ತು ದೇಗುಲವಿದ್ದಂತೆ. ಇದಕ್ಕೆ ಕಪ್ಪು ಚುಕ್ಕೆ ಅಂಟಬಾರದು. ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅಮಾನತು ಆಗಿರುವುದು ಬೇಸರ ಮೂಡಿಸಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು. ‘ಕನ್ನಡ ಸಾಹಿತ್ಯ ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಡೆಗೆ ಒಲವು ಹೆಚ್ಚಾಗಿದೆ. ಭಾಷೆಯ ಮೇಲಿನ ಅಭಿಮಾನ ಕಡಿಮೆ ಆಗುತ್ತಿದೆ. ಸಾಹಿತ್ಯದ ಒಲವು ಶಾಲೆ- ಕಾಲೇಜುಗಳಲ್ಲಿ ಬೆಳೆಸಬೇಕು. ಸಮಾನತೆ, ಸಹಬಾಳ್ವೆಗೆ ಸಾಹಿತ್ಯ ಅತ್ಯಗತ್ಯ. ಶಾಲೆಯ ಪಠ್ಯದಲ್ಲಿ ಕೂಡ ಸಾಹಿತ್ಯ ಬರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.