ADVERTISEMENT

ಮೌಲ್ಯಮಾಪನ ಮುಗಿದ 2 ಗಂಟೆಯಲ್ಲೇ ಬಿ.ಇಡಿ ಫಲಿತಾಂಶ

ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ ದಾವಣಗೆರೆ ವಿಶ್ವವಿದ್ಯಾಲಯ

ವಿನಾಯಕ ಭಟ್ಟ‌
Published 8 ಏಪ್ರಿಲ್ 2022, 3:00 IST
Last Updated 8 ಏಪ್ರಿಲ್ 2022, 3:00 IST
ಡಾ.ಎಚ್.ಎಸ್. ಅನಿತಾ
ಡಾ.ಎಚ್.ಎಸ್. ಅನಿತಾ   

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯವು ಮೌಲ್ಯಮಾಪನ ಪೂರ್ಣಗೊಳಿಸಿದ ಎರಡು ಗಂಟೆಯೊಳಗೇ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಬಿ.ಇಡಿ ನಾಲ್ಕನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಪದವೀಧರ ಶಿಕ್ಷಕರ (ಜಿಪಿಟಿ) ನೇಮಕಾತಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 8 ತರಗತಿವರೆಗೆ) 15 ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳನ್ನು (ಕಲ್ಯಾಣ ಕರ್ನಾಟಕದ 5,000 ಹುದ್ದೆ ಸೇರಿ) ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಮಾರ್ಚ್‌ 21ರಂದು ಅಧಿಸೂಚನೆ ಹೊರಡಿಸಿತ್ತು. ಏಪ್ರಿಲ್‌ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬಿ.ಇಡಿ ನಾಲ್ಕನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಮಾರ್ಚ್‌ 23ರಂದು ಕೊನೆಯ ಪರೀಕ್ಷೆ ಬರೆದಿದ್ದರು. ಫಲಿತಾಂಶ ಹೊರಬರುವುದು ವಿಳಂಬವಾದರೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕೈತಪ್ಪಬಹುದು ಎಂಬ ಆತಂಕ ಅವರನ್ನು ಕಾಡುತ್ತಿತ್ತು. ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವು ಏಪ್ರಿಲ್‌ 4ರಂದು ಮೌಲ್ಯಮಾಪನವನ್ನು ಆರಂಭಿಸಿ, ಮೂರು ದಿನಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ ಬಿ.ಇಡಿ ನಾಲ್ಕನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ.

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿನ ಒಟ್ಟು 34 ಬಿ.ಇಡಿ ಕಾಲೇಜುಗಳಿಂದ ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆಗೆ 2,282 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರ ಪೈಕಿ 2,281 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಉತ್ತೀರ್ಣರಾಗಿರುವ 2,240 (ಶೇ 98.2) ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದುಕೊಂಡಿದ್ದಾರೆ. 41 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಮೇ 21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ನಡೆಯಲಿದೆ.

ADVERTISEMENT

‘ಶಿಕ್ಷಕರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದರಿಂದ ಬಿ.ಇಡಿ ನಾಲ್ಕನೇ ಸೆಮಿಸ್ಟರ್‌ನ ಕೆಲವು ವಿದ್ಯಾರ್ಥಿಗಳು ಬೇಗನೆ ಫಲಿತಾಂಶ ನೀಡುವಂತೆ ಮನವಿ ಮಾಡಿದ್ದರು. ಶಿಕ್ಷಕರಾಗುವ ಅವಕಾಶದಿಂದ ನಮ್ಮ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂದು ಶಿಕ್ಷಣ ನಿಕಾಯದ ಸಹಕಾರದೊಂದಿಗೆ ಕಾರ್ಯಯೋಜನೆ ರೂಪಿಸಿಕೊಂಡೆವು. ಬಿ.ಇಡಿ 2ನೇ ಸೆಮಿಸ್ಟರ್‌ನ ಕೊನೆಯ ಪರೀಕ್ಷೆ ಏಪ್ರಿಲ್‌ 28ಕ್ಕೆ ನಡೆದಿತ್ತು. ಬಳಿಕ ಯುಗಾದಿ ಹಬ್ಬದ ರಜೆ, ಭಾನುವಾರ ಬಂದಿದ್ದರಿಂದ ಸೋಮವಾರ (ಏಪ್ರಿಲ್‌ 4) ಮೌಲ್ಯಮಾಪನ ಆರಂಭಿಸಿದೆವು. ಮೌಲ್ಯಮಾಪನ ಮಾಡಿದ ಬಳಿಕ ಆಯಾ ದಿನ ಸಂಜೆಯೇ ವಿವರಗಳನ್ನು ಮರು ಪರಿಶೀಲಿಸಿ ತಂತ್ರಾಂಶದಲ್ಲಿ ನಮೂದಿಸಿಕೊಳ್ಳುತ್ತಿದ್ದೆವು. ಏಪ್ರಿಲ್‌ 6ರಂದು ಸಂಜೆ 5.30ಕ್ಕೆ ಮೌಲ್ಯಮಾಪನ ಸಂಪೂರ್ಣವಾಗಿ ಮುಗಿದು, ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶದ ವಿವರ ನಮಗೆ ಲಭಿಸಿತು. ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿ ರಾತ್ರಿ 7.20ರ ವೇಳೆಗೆ ಫಲಿತಾಂಶವನ್ನು ಪ್ರಕಟಿಸಿದ್ದೇವೆ. ಆದಷ್ಟು ಬೇಗನೆ ಅಂಕಪಟ್ಟಿಯನ್ನು ಮುದ್ರಿಸಿ ಕೊಡುತ್ತೇವೆ’ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವೆ ಡಾ.ಎಚ್‌.ಎಸ್‌. ಅನಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಿಪಿಇಡಿ ಫಲಿತಾಂಶ: ವಿಶ್ವವಿದ್ಯಾಲಯವು ಬಿಪಿಇಡಿ 3ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್‌ 6ರಂದು ಸಂಜೆ ಮುಗಿದ ಎರಡು ಗಂಟೆಯೊಳಗೇ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪರೀಕ್ಷೆ ಬರೆದಿದ್ದ 63 ವಿದ್ಯಾರ್ಥಿಗಳ ಪೈಕಿ 62 (ಶೇ 98.41) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

*

ಒಂದೆರಡು ದಿನಗಳಲ್ಲೇ ಪ್ರಾವಿಷನಲ್‌ ಅಂಕಪಟ್ಟಿ ಕೊಡಲು ವ್ಯವಸ್ಥೆ ಮಾಡುತ್ತೇವೆ. ಕಾಲೇಜಿನಿಂದ ಪ್ರಾವಿಜನಲ್‌ ಅಂಕಪಟ್ಟಿ ಪಡೆದು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

– ಡಾ. ಎಚ್‌.ಎಸ್‌. ಅನಿತಾ, ಪರೀಕ್ಷಾಂಗ ಕುಲಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.