ADVERTISEMENT

ದಾವಣಗೆರೆ: 5 ಚಿನ್ನದ ಪದಕ ಗೆದ್ದು ತಂದೆ ಕನಸು ನನಸು ಮಾಡಿದ ದೀಪ್ತಿ

ಡಿ.ಕೆ.ಬಸವರಾಜು
Published 12 ಮಾರ್ಚ್ 2024, 6:29 IST
Last Updated 12 ಮಾರ್ಚ್ 2024, 6:29 IST
<div class="paragraphs"><p>ದೀಪ್ತಿ ಜೆ.ಗೌಡರ್</p></div>

ದೀಪ್ತಿ ಜೆ.ಗೌಡರ್

   

ದಾವಣಗೆರೆ: ‘ತಂದೆ ಹಾಗೂ ಅಜ್ಜ ನಾನು ರ‍್ಯಾಂಕ್ ಪಡೆಯಬೇಕು ಎಂದು ಬಯಸಿದ್ದರು. ಈಗ ರ‍್ಯಾಂಕ್ ಪಡೆಯುವ ಮೂಲಕ ಅವರ ಕನಸನ್ನು ನನಸು ಮಾಡಿದ್ದೇನೆ..’

ದಾವಣಗೆರೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ 5 ಚಿನ್ನದ ಪದಕಕ್ಕೆ ಪಾತ್ರವಾಗಿರುವ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ.) ವಿಭಾಗದ ವಿದ್ಯಾರ್ಥಿನಿ ದೀಪ್ತಿ ಜೆ.ಗೌಡರ್ ಅವರು ಈ ರೀತಿ ಸಂತಸ ವ್ಯಕ್ತಪಡಿಸಿದರು.

ADVERTISEMENT

ದೀಪ್ತಿ ಈ ವರ್ಷ ದಾವಣಗೆರೆ ವಿಶ್ವವಿದ್ಯಾನಿಲಯದ ‘ಚಿನ್ನದ ರಾಣಿ’ ಗೌರವಕ್ಕೆ ಪಾತ್ರರಾಗಿದ್ದಾರೆ. ದೀಪ್ತಿ ಅವರ ತಂದೆ,  ಆಟೊ ಚಾಲಕ ಜಯರಾಜು ಜಿ. 2 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಏಕೈಕ ಪುತ್ರಿ ದೀಪ್ತಿಯನ್ನು ಕಷ್ಟಪಟ್ಟು ಓದಿಸಿದ್ದರು. ತಾಯಿ, ಅಜ್ಜಿ ಹಾಗೂ ಚಿಕ್ಕಪ್ಪ ದೀಪ್ತಿಯ ಓದಿಗೆ ಬೆನ್ನೆಲುಬಾಗಿ ನಿಂತಿದ್ದರಿಂದ ಮುಂದಿನ ಓದು ಸರಾಗವಾಯಿತು.

‘ನಾನು ರ‍್ಯಾಂಕ್ ನಿರೀಕ್ಷಿರಲಿಲ್ಲ. ವಿಷಯ ತಿಳಿದಾಗ ಆಶ್ಚರ್ಯವಾಯಿತು. ನನಗೆ ತುಂಬಾ ಸಂತೋಷವಾಗಿದ್ದು, ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ದೀಪ್ತಿ ತಿಳಿಸಿದರು.

‘ನಾನು ಪುಸ್ತಕದ ಹುಳು ಅಲ್ಲ. ಈಗ ಆರ್.ಜಿ.ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು, ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವುದು ನನ್ನ ಮುಂದಿನ ಗುರಿ. ಅದಕ್ಕಾಗಿ ಎನ್ಇಟಿ ಹಾಗೂ ಕೆ–ಸೆಟ್ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ ಎದುರು ಹೇಳಿದರು.

ಸಿಂಧು ಬಾಯಿ

ಬಡತನದಲ್ಲಿ ಅರಳಿದ ಪ್ರತಿಭೆ

ಸ್ನಾತಕ ಕಲಾ ಪದವಿಯಲ್ಲಿ ಹೊನ್ನಾಳಿ ಎಸ್.ಎಂ.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಎಸ್. ಸಿಂಧುಬಾಯಿ ಮೂರು ಚಿನ್ನದ ಪದಕ ಪಡೆದಿದ್ದಾರೆ.

ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ತಾಂಡಾದ ಶೇಖರ್‌ ನಾಯ್ಕ್ ಹಾಗೂ ರೇಣುಕಾಬಾಯಿ ಪುತ್ರಿಯಾದ ಇವರು ಟಿ.ಗೋಪಗೊಂಡನಹಳ್ಳಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಹೊನ್ನಾಳಿಯ ಮಠದ ಕಾಲೇಜಿನಲ್ಲಿ ಪಿಯುಸಿ ಪಡೆದಿದ್ದಾರೆ.

ಸಿಂಧುಬಾಯಿ ಅವರ ತಂದೆ ತಾಯಿ ಕೂಲಿ ಕಾರ್ಮಿಕರು. ಒಬ್ಬ ತಮ್ಮ ಬುದ್ಧಿಮಾಂದ್ಯ. ಕಡುಬಡತನದಲ್ಲೇ ತಂದೆ–ತಾಯಿ ಕೂಲಿ ಮಾಡಿ ಮಗಳನ್ನು ಓದಿಸಿದ್ದಾರೆ. ತಂದೆ ಶೇಖರ್‌ನಾಯ್ಕ್ ಅವರು ಅಂಗವಿಕಲರಾಗಿದ್ದು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.

‘ಪ್ರತಿ ದಿವಸ 5 ಗಂಟೆ ಓದುತ್ತಿದ್ದೆ. ರ‍್ಯಾಂಕ್ ನಿರೀಕ್ಷಿಸಿದ್ದೆ. ಆದರೆ ಮೊದಲ ರ‍್ಯಾಂಕ್ ಬರುತ್ತದೆ ನಿರೀಕ್ಷಿಸಿರಲಿಲ್ಲ. ತರಗತಿಗೆ ತಪ್ಪದೇ ಹಾಜರಾಗುತ್ತಿದ್ದೆ. ಗಮನವಿಟ್ಟು ಪಾಠ ಕೇಳುತ್ತಿದ್ದುದರಿಂದ ಯಾವುದೇ ಗೊಂದಲವಿಲ್ಲದಂತೆ ಪರೀಕ್ಷೆ ಬರೆದೆ’ ಎಂದು ಸಿಂಧುಬಾಯಿ ತಿಳಿಸಿದರು. ‘ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಐಎಎಸ್ ಹಾಗೂ ಐಪಿಎಸ್ ಮಾಡುವ ಆಸೆ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.