ADVERTISEMENT

ಹರಿಹರ: ತುಂಗಭದ್ರಾ ಸೇತುವೆ ಸಂರಕ್ಷಣೆಗೆ ಆಗ್ರಹ

ಪಿಡಬ್ಲ್ಯುಡಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಮಾನ ಮನಸ್ಕರ ವೇದಿಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:12 IST
Last Updated 12 ಆಗಸ್ಟ್ 2022, 5:12 IST
ಹರಿಹರದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಪುರಾತನ ಸೇತುವೆ ಸಂರಕ್ಷಣೆಗೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಸದಸ್ಯರು ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಹರಿಹರದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಪುರಾತನ ಸೇತುವೆ ಸಂರಕ್ಷಣೆಗೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಸದಸ್ಯರು ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.   

ಹರಿಹರ: ತುಂಗಭದ್ರಾ ನದಿಗೆ ಅಡ್ಡಲಾಗಿ 137 ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆಯ ಸಂರಕ್ಷಣೆಗೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಸದಸ್ಯರು ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ವೇದಿಕೆ ಪದಾಧಿಕಾರಿ, ಸಾಹಿತಿ ಜೆ. ಕಲೀಂಬಾಷಾ ಮಾತನಾಡಿ, ‘1886ರಲ್ಲಿ ನಿರ್ಮಿಸಿರುವ ತುಂಗಭದ್ರಾ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಿದ್ದು, ಲಘು ವಾಹನಸಂಚಾರಕ್ಕೆ ಅನುವು ನೀಡಲಾಗಿದೆ. ನೀರು ಸರಬರಾಜು ಪೈಪ್‌ಗಳ ಅಳವಡಿಕೆ, ಎರಡೂ ಬದಿ ಬೆಳೆದಿರುವ ಗಿಡ–ಗಂಟಿಗಳಿಂದಾಗಿ ಸೇತುವೆ ದುಃಸ್ಥಿತಿಯಲ್ಲಿದೆ. ನಿರ್ವಹಣೆ ಕೊರತೆಯಿಂದ ಸೇತುವೆ ಗೋಡೆಯ ಗಾರೆ ಉದುರುತ್ತಿದೆ. ಕಲ್ಲುಗಳು ಕಿತ್ತು ಬರುತ್ತಿವೆ. ಇದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವೇದಿಕೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಸೇತುವೆ ಸಂರಕ್ಷಣೆ ವಿಚಾರವನ್ನು ಜಿಲ್ಲಾಧಿಕಾರಿ ಅವರ ಗಮನ ತರಲಾಗಿದೆ. ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗುವುದು’ ಎಂದು ತಹಶೀಲ್ದಾರ್ ಪ್ರತಿಕ್ರಿಯಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ. ಗೋವಿಂದ ರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಪುರಸಭೆ ಮಾಜಿ ಸದಸ್ಯ ಬಾಂಬೆ ರೆಹಮಾನ್, ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಅಧ್ಯಕ್ಷ ಡಾ.ಗುಲಾಮ್ ನಬಿ, ಛಲವಾದಿ ಸಮಾಜದ ಅಧ್ಯಕ್ಷ ಡಾ.ಜಗನ್ನಾಥ, ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಹಾಜಿ ಅಲಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಎಂ.ಆರ್. ಸೈಯದ್ ಸನಾಉಲ್ಲಾ, ಸೈಯದ್ ಅಹಮದ್, ಬಿ.ಕೆ. ಅನ್ವರ್ ಪಾಷಾ, ರೋಷನ್ ಜಮೀರ್, ಸೈಯದ್ ರಿಯಾಜ್ ಅಹಮದ್, ಅಬ್ದುಲ್ ಖಾದರ್, ಮೊಹಮದ್ ಇಕ್ಬಾಲ್, ಮುಖ್ತಿಯಾರ್ ಖಾಜಿ, ಎಸ್.ಎಂ. ಯಾಖೂಬ್ ಬಾಷಾ, ಮೊಹಮದ್ ಜಿಕ್ರಿಯಾ ಬೆಳ್ಳೂಡಿ, ನಿವೃತ್ತ ಮುಖ್ಯ ಶಿಕ್ಷಕ ಎ.ಡಿ. ಕೊಟ್ರಬಸಪ್ಪ, ಟಿ.ಸಿ. ಉಸ್ಮಾನ್ ಅಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.