ADVERTISEMENT

ದಾವಣಗೆರೆ: ಅಧಿಕಾರದಲ್ಲಿದ್ದರೂ ದಳಕ್ಕೆ ದಾವಣಗೆರೆಯಲ್ಲಿ ಅಭ್ಯರ್ಥಿಯಿರಲಿಲ್ಲ

ನಾಮಪತ್ರ ಸಲ್ಲಿಸಲು ಜೆ.ಎಚ್‌. ಪಟೇಲ್‌ ಸೂಚಿಸಿದ್ದರೂ ಹರಿಹರಕ್ಕೆ ಒಲವು ತೋರಿದ್ದ ಬಿ.ಪಿ. ಹರೀಶ್‌

ಬಾಲಕೃಷ್ಣ ಪಿ.ಎಚ್‌
Published 19 ಮಾರ್ಚ್ 2023, 6:39 IST
Last Updated 19 ಮಾರ್ಚ್ 2023, 6:39 IST
ಬಿ.ಪಿ. ಹರೀಶ್‍
ಬಿ.ಪಿ. ಹರೀಶ್‍   

ದಾವಣಗೆರೆ: ಕರ್ನಾಟಕದಲ್ಲಿ ಜನತಾದಳ ಸರ್ಕಾರ ಇತ್ತು. ಜೆ.ಎಚ್‌. ಪಟೇಲರಿಂದಾಗಿ ಮಧ್ಯಕರ್ನಾಟಕದಲ್ಲಿಯೂ ಜನತಾದಳದ ಪ್ರಭಾವ ಇತ್ತು. ದಾವಣಗೆರೆಯಿಂದ ನಾಮಪತ್ರ ಸಲ್ಲಿಸಲು ಬಿ.ಪಿ. ಹರೀಶ್‌ ಅವರಿಗೆ ಜೆ.ಎಚ್‌. ಪಟೇಲರೇ ಸೂಚಿಸಿದ್ದರು. ಆದರೆ, ಹರೀಶ್‌ ಹರಿಹರದಿಂದ ನಾಮಪತ್ರ ಸಲ್ಲಿಸಿದ್ದರು. ಸರ್ಕಾರವೇ ಇದ್ದರೂ ದಾವಣಗೆರೆಯಲ್ಲಿ ಅಭ್ಯರ್ಥಿಯೇ ಇಲ್ಲದ ಪರಿಸ್ಥಿತಿ ಉಂಟಾಗಿತ್ತು.

ಕರ್ನಾಟಕದಲ್ಲಿ 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಬಂದಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. 1985ರಲ್ಲಿ ಚುನಾವಣೆ ಘೋಷಿಸಿ ಮತ್ತೆ ಪೂರ್ಣಬಹುಮತದಿಂದ ಗೆದ್ದು ಬಂದು ಎರಡನೇ ಬಾರಿ ಮುಖ್ಯಮಂತ್ರಿಯಾದರು. 1988ರಲ್ಲಿ ಅವರು ರಾಜೀನಾಮೆ ನೀಡಿದ್ದರಿಂದ ಚುನಾವಣೆ ಸಮಯದಲ್ಲಿ ಎಸ್‌.ಆರ್‌. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.

‘ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ’ ಎಂಬ ಹುಮ್ಮಸ್ಸಿನಲ್ಲಿ ಜನತಾದಳದ ನಾಯಕರಿದ್ದರು. ದಾವಣಗೆರೆಯಿಂದ ನಾಮಪತ್ರ ಸಲ್ಲಿಸುವಂತೆ ಬಿ.ಪಿ. ಹರೀಶ್‌ಗೆ ಜೆ.ಎಚ್. ಪಟೇಲರು ತಿಳಿಸಿದ್ದರು. ಹರಿಹರದಿಂದ ಸ್ಪರ್ಧಿಸುವುದಾಗಿ ಹರೀಶ್‌ ಹೇಳಿದಾಗ, ಎರಡೂ ಕಡೆ ನಾಮಪತ್ರ ಹಾಕಿ ಎಂದಿದ್ದರು. ಆದರೆ, ಹರೀಶ್‌ ಹರಿಹರದಿಂದ ಮಾತ್ರ ನಾಮಪತ್ರ ಸಲ್ಲಿಸಿ ಸುಮ್ಮನಾಗಿದ್ದರು.

ADVERTISEMENT

ಅಭ್ಯರ್ಥಿ ಇಲ್ಲ ಎಂಬುದು ತಿಳಿಯುತ್ತಿದ್ದಂತೆ ಜೆ.ಎಚ್‌. ಪಟೇಲರು ಸಿಟ್ಟಾಗಿದ್ದರು. ‘ಹರೀಶ್‌ ಹತ್ತಿರ ನಾಮಪತ್ರ ಹಾಕಿಸಿ ಎಂದು ನಿಮಗೆ ಹೇಳಿದ್ದರೂ ನೀವು ಯಾಕೆ ಹಾಕಿಸಿಲ್ಲ’ ಎಂದು ಜನತಾದಳ ಮುಖಂಡರಾಗಿದ್ದ ಕೆ.ಜಿ. ಪರಮೇಶ್ವರಪ್ಪ, ಬಸವನಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಫಲಿತಾಂಶ ಬಂದಾಗ ಇಡೀ ರಾಜ್ಯದ ಚಿತ್ರಣವೇ ಬದಲಾಗಿತ್ತು. ಜನತಾದಳ ಹೇಳ ಹೆಸರಿಲ್ಲದಂತೆ ಸೋತಿತ್ತು. ಕೇವಲ 22 ಕಡೆಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್‌ ಭಾರಿ ಬಹುಮತ ಪಡೆದಿತ್ತು.

ದಾವಣಗೆರೆಯಲ್ಲಿಯೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಯಜಮಾನ್‌ ಮೋತಿ ವೀರಣ್ಣ ಆ ಬಾರಿ ಆಯ್ಕೆಯಾದರು.

ಅದಕ್ಕಿಂತ ಹಿಂದೆ ಶಾಸಕರಾಗಿದ್ದ ಕಮ್ಯುನಿಸ್ಟ್‌ ಪಾರ್ಟಿಯ ಪಂಪಾಪತಿ ಎರಡನೇ ಸ್ಥಾನಕ್ಕೆ ಹೋಗಿದ್ದರು. ಹರಿಹರದಲ್ಲಿ ಹರೀಶ್‌ ಗೆಲ್ಲಲಿಲ್ಲ. ಅಲ್ಲಿಯೂ ಕಾಂಗ್ರೆಸ್‌ನ ಡಾ.ವೈ. ನಾಗಪ್ಪ ಆಯ್ಕೆಯಾಗಿದ್ದರು.

‘ಪಂಪಾಪತಿ ವಿರುದ್ಧ ನಿಲ್ಲಲು ಮನಸ್ಸು ಬರಲಿಲ್ಲ’

‘1983 ಮತ್ತು 85ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಪಂಪಾಪತಿ ಶಾಸಕರಾಗಿದ್ದರು. ನಾನು ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿಗೆ ದಾವಣಗೆರೆ ನಗರಸಭೆ ಸದಸ್ಯನಾಗಿದ್ದು ಕಮ್ಯುನಿಸ್ಟ್‌ ಬೆಂಬಲದಿಂದ. 22ನೇ ವಯಸ್ಸಿಗೆ ಸದಸ್ಯರಾಗಿರುವುದು ನಿಯಮ ಪ್ರಕಾರ ಸರಿಯಲ್ಲ ಎಂದು ಸೋತ ಅಭ್ಯರ್ಥಿ ಕೋರ್ಟಿಗೆ ಹೋಗಿದ್ದರು. ಆಮೇಲೆ ಹಿಂತೆಗೆದುಕೊಂಡಿದ್ದರು. ನನ್ನ ತಂದೆಯ ಬಗ್ಗೆ ಪಂಪಾಪತಿಯವರಿಗೆ ಭಾರಿ ಅಭಿಮಾನ. ದಾವಣಗೆರೆಯಿಂದ 1989ರಲ್ಲಿ ನಾಮಪತ್ರ ಸಲ್ಲಿಸಲು ಜೆ.ಎಚ್‌. ಪಟೇಲರು ಸೂಚಿಸಿದರೂ ಪಂಪಾಪತಿ ವಿರುದ್ಧ ಸ್ಪರ್ಧಿಸಲು ಮನಸ್ಸಾಗದೇ ನಾಮಪತ್ರ ಸಲ್ಲಿಸಿರಲಿಲ್ಲ’ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌ ‘ಪ್ರಜಾವಾಣಿ’ ಜತೆಗೆ ನೆನಪು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.