ADVERTISEMENT

ಷರತ್ತಿಲ್ಲದ ನಿಜ ಪ್ರೀತಿಯೇ ಭಕ್ತಿ

ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ನೂತನ ಮಹಾರಥ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಜ್ಜಯಿನಿ ಶ್ರೀ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 13:12 IST
Last Updated 12 ಆಗಸ್ಟ್ 2019, 13:12 IST
ದಾವಣಗೆರೆಯ ಬಂಬೂ ಬಜಾರನಲ್ಲಿ ನಡೆದ ಮಲ್ಲಿಕಾರ್ಜುನ ದೇವಸ್ಥಾನದ ರಥ ಉದ್ಘಾಟನೆಯ ಮೆರವಣಿಗೆಯ ಪಾಲ್ಗೊಂಡಿದ್ದ ಜನ
ದಾವಣಗೆರೆಯ ಬಂಬೂ ಬಜಾರನಲ್ಲಿ ನಡೆದ ಮಲ್ಲಿಕಾರ್ಜುನ ದೇವಸ್ಥಾನದ ರಥ ಉದ್ಘಾಟನೆಯ ಮೆರವಣಿಗೆಯ ಪಾಲ್ಗೊಂಡಿದ್ದ ಜನ   

ದಾವಣಗೆರೆ: ದೇವರೇ ಅದು ಕೊಡು, ಇದು ಕೊಡು. ಕೊಟ್ಟರೆ ಆ ಸೇವೆ ಮಾಡುವೆ, ಈ ಸೇವೆ ಮಾಡುವೆ ಎಂದು ಎಲ್ಲರೂ ಭಕ್ತಿ ಪ್ರದರ್ಶಿಸುತ್ತಾರೆ. ಇದು ಭಕ್ತಿಯಲ್ಲ. ಯಾವ ಷರತ್ತೂ ಇಲ್ಲದೇ ಎಲ್ಲವೂ ನಿನ್ನದೇ ಎಂದು ದೇವರಲ್ಲಿ ತೋರುವ ಪ್ರೀತಿಯೇ ನಿಜವಾದ ಭಕ್ತಿ ಎಂದು ಉಜ್ಜಯಿನಿ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಂಬೂಬಜಾರಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಮೇದಾರ ಗಿರಿಜನ ಅಭ್ಯುದಯ ಸೇವಾ ಸಂಘದ ನೇತೃತ್ವದಲ್ಲಿ ಕೊಡ ಮಾಡಿದ ದೇವಸ್ಥಾನದ ನೂತನ ಮಹಾರಥವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇವರಲ್ಲಿ, ಧರ್ಮದಲ್ಲಿ ಭೇದವಿಲ್ಲ. ದೇವರನ್ನು, ಧರ್ಮವನ್ನು ಅನುಸರಿಸುವವರಲ್ಲಿ ಭೇದ ಇದೆ. ಪಾಶ್ಚಾತ್ಯ ದೇಶಗಳಲ್ಲಿ ದೇವರಿಗಿಂತ ದೇಹವನ್ನು ಪ್ರೀತಿಸುತ್ತಾರೆ. ಭಾರತದಲ್ಲಿ ಮಾತ್ರ ದೇಹದ ಬದಲು ದೇವರನ್ನು ಪ್ರೀತಿಸುತ್ತಾರೆ. ವಿಶ್ವಾಸ ಇಲ್ಲದಲ್ಲಿ ನಂಬಿಕೆ ಹುಟ್ಟದು ಎಂದು ಹೇಳಿದರು.

ADVERTISEMENT

ದೇವರು ವರ್ಷದ 364 ದಿನ ದೇವಸ್ಥಾನದಲ್ಲಿರುತ್ತಾರೆ. ಅವರನ್ನು ನೋಡಲು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಒಂದು ದಿನ ಮಾತ್ರ ದೇವರೇ ಭಕ್ತರನ್ನು ನೋಡಲು ಬರುತ್ತಾನೆ. ಅದೇ ರಥೋತ್ಸವ ಎಂದು ಹೇಳಿದರು.

ಚಿತ್ರದುರ್ಗ ಶಿಬಾರ ಕೇತೇಶ್ವರ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿ, ‘ಮೇದಾರ ಸಮಾಜದಲ್ಲಿ ಬಹಳಷ್ಟು ದೇವಸ್ಥಾನ, ತೇರುಗಳಿವೆ. ಆದರೆ ಈ ಸಣ್ಣ ಸಮಾಜ ಇನ್ನೂ ಬಹಳ ಹಿಂದುಳಿದಿದೆ. ಈ ಸಮಾಜ ಬೆಳೆಯಲು ಎಲ್ಲರಿಗೂ ಶಿಕ್ಷಣ ಒದಗಿಸುವ ವ್ಯವಸ್ಥೆ ಆಗಬೇಕು’ ಎಂದು ಹೇಳಿದರು.

ಕಾಯಕ ಅಂದರೇನು? ಶಿವಶರಣ ಎಂದರೇನು? ಎಂಬುದನ್ನು 12ನೇ ಶತಮಾನದಲ್ಲಿ ಮೇದಾರ ಕೇತಯ್ಯ ಶರಣರು ತಿಳಿಸಿ ಕೊಟ್ಟಿದ್ದರು. ಕಾಡಿಗೆ ಹೋಗಿ ಬಿದಿರು ತಂದು ಹೆಣೆದು ಮಾರಾಟ ಮಾಡಿ, ಅದರಲ್ಲಿ ದಾಸೋಹ ಮಾಡಿದವರು ಅವರು. ಕಾಯಕವಿಲ್ಲದೇ ಯಾವ ಮೌಲ್ಯವೂ ಇಲ್ಲ. ಕಾಯಕ ಮರೆಯಬಾರದು ಎಂಬುದನ್ನು ಸಮಾಜ ಅರಿಯಬೇಕು. ಹಾಗೆಯೇ ಮೇದಾರ ಕೇತೇಶ್ವರ ಮಠ ಇದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ‘ಕಾಯಕನಿಷ್ಠೆ ಮತ್ತು ಧಾರ್ಮಿಕ ಭಾವ ಇಟ್ಟುಕೊಂಡಿರುವ ಸಮಾಜವೇ ಮೇದಾರ ಸಮಾಜ. ಕುಲದೇವರನ್ನೂ, ಶಿವಶರಣ ಪರಂಪರೆಯನ್ನೂ, ಕುಲಕಸುಬನ್ನೂ ಬಿಡದ ಸಮಾಜ ಇದು’ ಎಂದು ಶ್ಲಾಘಿಸಿದರು.

ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಟಿ. ಬಸವರಾಜ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ಎ. ರವೀಂದ್ರನಾಥ್‌, ಅಖಿಲ ಕರ್ನಾಟಕ ಗುರು ಮೇದಾರ ಕೇತೇಶ್ವರ ಟ್ರಸ್ಟ್‌ ರಾಜ್ಯಾಧ್ಯಕ್ಷ ಸಿ.ಪಿ. ಪಾಟೀಲ್‌, ದೇವರಮನಿ ಶಿವಕುಮಾರ್‌ ಮಾತನಾಡಿದರು.

ಮೇದಾರ ಸಮಾಜದ ಉಪಾಧ್ಯಕ್ಷ ಎಂ. ತಿಮ್ಮಣ್ಣ, ಕಾರ್ಯದರ್ಶಿ ಕೆ. ಹನುಮಂತಪ್ಪ, ಬಳ್ಳಾರಿ ತಿಮ್ಮಯ್ಯ, ಮಲೆಬೆನ್ನೂರು ನಂಜಯ್ಯ, ಗಂಗಾವತಿ ಕೃಷ್ಣಪ್ಪ, ಚಿತ್ರದುರ್ಗದ ದೇವೇಂದ್ರಪ್ಪ, ಅಥಣಿ ರಮೇಶ, ಲಕ್ಷ್ಮಣ ಅವರೂ ಇದ್ದರು.

ಯು. ಗಿರೀಶ್‌ ಸ್ವಾಗತಿಸಿದರು. ಡಾ. ಗೋವಿಂದ ವಂದಿಸಿದರು. ಜಿ. ಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.