ದಾವಣಗೆರೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿಯಿಂದ ಲೋಕಸಭೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತ ಜಗಳೂರಿನ ಉಮೇಶ್ ಪಿ. ಬಳ್ಳಾರಿ ಅವರು ಮೈಮೇಲೆ ಡೀಸೆಲ್ ಸುರಿದುಕೊಂಡಾಗ ಕಾರ್ಯಕರ್ತರು ತಡೆದರು. –ಪ್ರಜಾವಾಣಿ ಚಿತ್ರ
ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಲೋಕಸಭೆ ಚುನಾವಣೆಯ ದಾವಣಗೆರೆ ಕ್ಷೇತ್ರದ ಟಿಕೆಟ್ ನೀಡಿರುವುದಕ್ಕೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಟಿಕೆಟ್‌ನ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ, ಗುರುವಾರ ತಾಲ್ಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿರುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ನಿವಾಸದಲ್ಲಿ ಸಭೆ ನಡೆಸಿದ ಪಕ್ಷದದ ಮುಖಂಡರು ಹಾಗೂ ಕಾರ್ಯಕರ್ತರು ಅಭ್ಯರ್ಥಿಯನ್ನು ಬದಲಿಸುವಂತೆ ಆಗ್ರಹಿಸಿದರು.
‘ಸಿದ್ದೇಶ್ವರ ಹಠಾವೋ, ದಾವಣಗೆರೆ ಬಚಾವೋ’, ‘ಸಿದ್ದೇಶ್ವರ ಗೋ ಬ್ಯಾಕ್’ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಇದೇ ವೇಳೆ ಸಿದ್ದೇಶ್ವರ ಪತ್ನಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಕಾರ್ಯಕರ್ತನೊಬ್ಬ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ತಡೆದ ಇತರ ಕಾರ್ಯಕರ್ತರು, ತಲೆಯ ಮೇಲೆ ನೀರು ಸುರಿದು ಸಮಾಧಾನಪಡಿಸಿದರು.
‘ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರನ್ನು ಎದುರಿಸಲು ನನ್ನನ್ನು ಬಿಟ್ಟರೆ ಬೇರೆ ಯಾರಿಗೆ ತಾಕತ್ತಿದೆ?’ ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಿರುವ ಸಿದ್ದೇಶ್ವರ ಅವರು ಸದ್ದಾಂ ಹುಸೇನ್ ಥರ ವರ್ತಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ಟಿಕೆಟ್ ರದ್ದುಪಡಿಸಬೇಕು ಎಂದು ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.
‘ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸಂಸದರ ಪತ್ನಿ ಮತ್ತು ಅವರ ಪುತ್ರ ಒಮ್ಮೆಯಾದರೂ ಬಿಜೆಪಿಯ ಬಾವುಟ ಹಿಡಿದು ಹೋರಾಟ ಮಾಡಿದ್ದಾರೆಯೇ’ ಎಂದು ಪ್ರಶ್ನಿಸಿದ ಅವರು, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ನಿಂತು ಗೆಲ್ಲಿಸಿಕೊಂಡು ಬರುತ್ತೇವೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ. ಪಕ್ಷ ನಡೆಸಿರುವ ಸಮೀಕ್ಷೆಯಲ್ಲೂ ಸಂಸದ ಸಿದ್ದೇಶ್ವರ ಕುಟುಂಬದ ವಿರುದ್ಧ ಅನಿಸಿಕೆ ವ್ಯಕ್ತವಾಗಿವೆ. ಹಾಗಾಗಿ ಸಿದ್ದೇಶ್ವರ ಅವರು ತಾವಾಗಿಯೇ ಕುಟುಂಬಕ್ಕೆ ನೀಡಿದ ಟಿಕೆಟ್ ನಿರಾಕರಿಸಬೇಕು’ ಎಂದರು.
‘ಅಭ್ಯರ್ಥಿ ಬದಲಿಸಲೇಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸುತ್ತೇವೆ. ಮಾ.18ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರೆದುರು ಈ ಬಗ್ಗೆ ಮನವರಿಕೆ ಮಾಡಲಾಗುವುದು’ ಎಂದು ಎಸ್.ಎ. ರವೀಂದ್ರನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.