ADVERTISEMENT

ಬಿಜೆಪಿಗೆ ಜಿಲ್ಲಾ ಸಾರಥಿ: ಅಂತಿಮ ಹಂತದಲ್ಲಿ ಮೂವರ ಹೆಸರು

ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರ ಆಯ್ಕೆ*ಇರುವ ಅಧ್ಯಕ್ಷರನ್ನೇ ಮುಂದುವರಿಸುವ ನಿಯಮವಿಲ್ಲ

ಬಾಲಕೃಷ್ಣ ಪಿ.ಎಚ್‌
Published 16 ಜನವರಿ 2020, 19:45 IST
Last Updated 16 ಜನವರಿ 2020, 19:45 IST
ಯಶವಂತರಾವ್‌ ಜಾಧವ್‌
ಯಶವಂತರಾವ್‌ ಜಾಧವ್‌   

ದಾವಣಗೆರೆ: ಬಿಜೆಪಿ ಜಿಲ್ಲಾ ಸಾರಥಿಯ ಆಯ್ಕೆಗೆ ಬಿರುಸಿನ ಕಸರತ್ತು ನಡೆಯುತ್ತಿದೆ. ಈ ಬಗ್ಗೆ ಗುರುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ಘಟದಕ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಪದಗ್ರಹಣ ಸಮಾರಂಭದಲ್ಲಿ ಕೂಡ ಚರ್ಚೆಗಳು ನಡೆದಿವೆ.

ರಾಜ್ಯದ 18 ಜಿಲ್ಲೆಗಳ ಅಧ್ಯಕ್ಷರ ಘೋಷಣೆ ಈಗಾಗಲೇ ಆಗಿದೆ. ಪ್ರಬಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಉಳಿದ ಜಿಲ್ಲೆಗಳ ಅಧ್ಯಕ್ಷರನ್ನು ಪಕ್ಷ ಆಯ್ಕೆ ಮಾಡಿರಲಿಲ್ಲ. ಸಂಸದರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯಗಳನ್ನು ಪಕ್ಷದ ವಿಭಾಗ ಪ್ರಭಾರಿಗಳು, ವೀಕ್ಷಕರು ಈಗಾಗಲೇ ಸಂಗ್ರಹಿಸಿ ರಾಜ್ಯ ಸಮಿತಿಗೆ ಕಳುಹಿಸಿದ್ದಾರೆ.

ಅಧ್ಯಕ್ಷರ ಬದಲಾವಣೆ ಆಗಲಿದೆ ಎಂಬ ಸೂಚನೆ ಪಕ್ಷದಿಂದ ಬರುತ್ತಿದ್ದಂತೆ ಎಲ್‌.ಎನ್‌. ಕಲ್ಲೇಶ್‌, ವೀರೇಶ್‌ ಹನಗವಾಡಿ, ಸಹನಾ ರವಿ, ಕೆ.ಎಂ. ಸುರೇಶ್‌, ಬಿ.ಪಿ. ಹರೀಶ, ಧನಂಜಯ ಕಡ್ಲೇಬಾಳ್‌ ಮುಂತಾದ 11 ಮಂದಿ ಆಕಾಂಕ್ಷಿಗಳ ಹೆಸರುಗಳು ಪ್ರಸ್ತಾಪವಾಗಿದ್ದವು. ಪಕ್ಷದ ಅಧ್ಯಕ್ಷರಾಗಿರುವ ಯಶವಂತರಾವ್‌ ಜಾಧವ್‌ ಅವರನ್ನೇ ಮುಂದುವರಿಸುವ ಪ್ರಸ್ತಾಪವನ್ನು ಕೆಲವರು ಇಟ್ಟಿದ್ದರೂ ಬಿಜೆಪಿಯ ಆಂತರಿಕ ನಿಯಮದ ಪ್ರಕಾರ ಮೂರು ವರ್ಷಕ್ಕೊಮ್ಮೆ ಬದಲಾವಣೆ ಮಾಡಲೇಬೇಕು. ಹಾಗಾಗಿ ಈ ಪ‍್ರಸ್ತಾಪ ಚರ್ಚೆಗೆ ಬಂದಿಲ್ಲ’ ಎಂದು ಬಿಜೆಪಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ADVERTISEMENT

‘ಹನಗವಾಡಿ ವೀರೇಶ್‌, ಕೆ.ಎಂ. ಸುರೇಶ್‌ ಮತ್ತು ನನ್ನ ಹೆಸರುಗಳು ಅಂತಿಮ ಹಂತದಲ್ಲಿ ಇವೆ. ಈ ಮೂವರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬುದನ್ನು ನೋಡಬೇಕು’ ಎಂದು ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಧನಂಜಯ ಕಡ್ಲೇಬಾಳ್‌ ಪ್ರತಿಕ್ರಿಯಿಸಿದ್ದಾರೆ.

‘ನಾನು ಆಕಾಂಕ್ಷಿಯಾಗಿದ್ದುದು ನಿಜ. ಆದರೆ ಪಕ್ಷದ ಹಿರಿಯರು ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ಬದ್ಧವಾಗಿ ನಾನು ಕೆಲಸ ಮಾಡುತ್ತೇನೆ’ ಎಂದು ಆಕಾಂಕ್ಷಿ ಕೆ.ಎಂ. ಸುರೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ಸಮರ್ಥವಾಗಿ ನಿರ್ವಹಿಸುತ್ತೇನೆ. ಅಂತಿಮ ಪಟ್ಟಿಯಲ್ಲಿರುವ ಮೂವರಲ್ಲಿ ಯಾರಿಗೆ ನೀಡಿದರೂ ಸಂತೋಷವೇ’ ಎಂದು ಹೇಳಿದ್ದಾರೆ.

‘ವೀರೇಶ್‌ ಹನಗವಾಡಿಯ ಹೆಸರು ಈ ಮೂವರಲ್ಲಿ ಮುಂಚೂಣಿಯಲ್ಲಿದೆ. ಆದರೆ ಅಧಿಕೃತ ಘೋಷಣೆಯಾಗದೆ ನಾವೇನೂ ಹೇಳುವಂತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.