ADVERTISEMENT

7,831ಕ್ಕೂ ಸ್ಥಳಗಳಲ್ಲಿ ವೀಕ್ಷಣೆಗೆ ಅವಕಾಶ

ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 12:42 IST
Last Updated 27 ಜೂನ್ 2020, 12:42 IST
ಡಿ.ಬಸವರಾಜ್
ಡಿ.ಬಸವರಾಜ್   

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಬಿ.ಖಂಡ್ರೆ, ಸತೀಶ್‌ ಜಾರಕಿಹೊಳಿ ಅವರ ಪದಗ್ರಹಣ ಸಮಾರಂಭ ಜುಲೈ 2ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ರಾಜ್ಯದ 7,831ಕ್ಕೂ ಹೆಚ್ಚು ಸ್ಥಳಗಳಲ್ಲಿ ವೀಕ್ಷಣೆಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ತಿಳಿಸಿದರು.

‘ಅಂದಿನ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಸ್‌.ಆರ್. ಪಾಟೀಲ್, ಕೆ.ಸಿ.ವೇಣುಗೋಪಾಲ್, ಬಿ.ಕೆ. ಹರಿಪ್ರಸಾದ್, ಶಾಮನೂರು ಶಿವಶಂಕರ‌ಪ್ಪ ಸೇರಿ 150ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವರು. ರಾಜ್ಯದಾದ್ಯಂತ ಜೂಮ್ ಮುಖಾಂತರ ಕಾರ್ಯಕ್ರಮದ ನೇರ ವೀಕ್ಷಣೆ ಹಾಗೂ ಸಂವಿಧಾನ ಪೀಠಿಕೆ ಓದುವುದು ಹಾಗೂ ಪ್ರತಿಜ್ಞೆ ಕೈಗೊಳ್ಳುವ ಕಾರ್ಯಕ್ರಮ ನಡೆಯಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಯಕ್ರಮದ ವೇದಿಕೆಯ ಎರಡು ಬದಿಯಲ್ಲಿ ರಾಷ್ಟ್ರಧ್ವಜ ಹಾಗೂ ಪಕ್ಷದ ಧ್ವಜ ಇರಲಿದ್ದು, ರಾಷ್ಟ್ರ ಹಾಗೂ ರಾಜ್ಯ ನಾಯಕರ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಲಾಗುವುದು. ಜೂಮ್ ಮೂಲಕ ಕಾರ್ಯಕರ್ತರು ಕಾಂಗ್ರೆಸ್ ನಾಯಕರೊಡನೆ ಭಾಗವಹಿಸುವರು. ಇದೊಂದು ಐತಿಹಾಸಿಕ ಹಾಗೂ ವಿನೂತನ ಕಾರ್ಯಕ್ರಮವಾಗಲಿದೆ. ರಾಜ್ಯ ಹಾಗೂ ರಾಷ್ಟ್ರದ ಕೋಟ್ಯಂತರ ಜನರು ಕಾರ್ಯಕ್ರಮ ವೀಕ್ಷಿಸುವರು’ ಎಂದು ಹೇಳಿದರು.

ADVERTISEMENT

‘ರಾಜ್ಯದ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮವನ್ನು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ವಿತರಿಸಿ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಗುವುದು. ದಾವಣಗೆರೆಯಲ್ಲಿ ಪಕ್ಷದ ಜಿಲ್ಲಾ ಕಚೇರಿ ಸೇರಿ 45 ವಾರ್ಡ್‌ಗಳಲ್ಲೂ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ಕೆ. ಚಮನ್‌ಸಾಬ್‍, ಗಡಿಗುಡಾಳ್ ಮಂಜುನಾಥ್, ಕೆಪಿಸಿಸಿ ವೀಕ್ಷಕ ಅಲ್ಲಾವಲ್ಲಿ ಘಾಜಿಖಾನ್, ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ, ಕಾಂಗ್ರೆಸ್ ಮುಖಂಡರಾದ ಕೆ.ಎಂ. ಮಂಜುನಾಥ್, ಬಿ.ಎಚ್. ಉದಯ್‍ಕುಮಾರ್, ಎಂ.ಕೆ. ಲಿಯಾಖತ್ ಅಲಿ. ಡಿ. ಶಿವಕುಮಾರ್, ಕೆ.ಸಿ. ಜುಬೇರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.