ADVERTISEMENT

ಜಗಳೂರು: ಪತ್ನಿಯ ಶೀಲ ಶಂಕಿಸಿ ಕುತ್ತಿಗೆ ಕೊಯ್ದು ಕೊಲೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:21 IST
Last Updated 2 ಸೆಪ್ಟೆಂಬರ್ 2025, 5:21 IST
ಜ್ಯೋತಿ
ಜ್ಯೋತಿ   

ಜಗಳೂರು: ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಪತ್ನಿಯ ಶೀಲ ಶಂಕಿಸಿ ಪತಿ ಕುತ್ತಿಗೆ ಕೊಯ್ದು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದ ಬಾಲರಾಜು (40) ಪತ್ನಿ ಜ್ಯೋತಿ (38) ಯನ್ನು ಕುಡುಗೋಲಿನಿಂದ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಬಾಲರಾಜು ಹಾಗೂ ಜ್ಯೋತಿ ತಮ್ಮ 7 ವರ್ಷದ ಮಗುವಿನೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದರು. ಜ್ಯೋತಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿ ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಕೆಲವು ವರ್ಷ ಇಬ್ಬರೂ ಬೇರೆಬೇರೆ ವಾಸವಾಗಿದ್ದರು. ವರ್ಷದ ಹಿಂದೆ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು.

ADVERTISEMENT

‘ಬಾಲರಾಜು ತನ್ನ ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಜಗಳ ತೆಗೆಯುತ್ತಿದ್ದ. ಭಾನುವಾರ ಇಬ್ಬರೂ ಬೇರೆ ಊರಿಗೆ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ರಾತ್ರಿ ಬಾಲರಾಜು ಜ್ಯೋತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ’ ಎಂದು ಮೃತ ಜ್ಯೋತಿಯ ಸಹೋದರಿ ಯಶೋಧಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

ಜಗಳೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಪಿಐ ಸಿದ್ರಾಮಯ್ಯ ಅವರ ನೇತೃತ್ವದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.