ಚನ್ನಗಿರಿ: ‘ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಎಂದರೆ ಏಡ್ಸ್. ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಇದು ಒಂದು. ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅಗತ್ಯ ಮಾಹಿತಿ ನೀಡಬೇಕು. ಏಡ್ಸ್ ಬಗ್ಗೆ ಭಯ ಬೇಡ, ಜಾಗೃತಿ ಇರಬೇಕು’ ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಮಾ ಶ್ರೀವತ್ಸ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸೋಂಕಿತರನ್ನು ಕೀಳರಿಮೆಯಿಂದ ಕಾಣಬಾರದು. ಅವರಿಗೆ ಬೆಂಬಲ ನೀಡುವ ಮೂಲಕ ಅವರು ಅನುಭವಿಸುತ್ತಿರುವ ಕಳಂಕ, ತಾರತಮ್ಯವನ್ನು ತೊಡೆದು ಹಾಕಬೇಕಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಯಾರೂ ತೊಡಗಬಾರದು. ‘ಏಡ್ಸ್ ರೋಗಿಗಳು ಒಂಟಿಯಲ್ಲ, ಅವರೊಂದಿಗೆ ನಾವೆಲ್ಲ’ ಎಂಬ ಭಾವನೆ ಮೂಡಿಸಬೇಕಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಈ. ಶಿವಕುಮಾರ್ ಹೇಳಿದರು.
ಆಡಳಿತ ವೈದ್ಯಾಧಿಕಾರಿ ಡಾ.ಎಂ.ಚಂದ್ರಪ್ಪ, ಮಕ್ಕಳ ತಜ್ಞ ಡಾ.ಅಶೋಕ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಲೋಕೇಶ್, ಐಸಿಟಿಸಿ ಆಪ್ತ ಸಮಾಲೋಚಕ ರವಿಕುಮಾರ್, ಮೇಲ್ವಿಚಾರಕ ಎ.ಪಿ.ಜಗದೀಶ್, ವಕೀಲರ ಸಂಘದ ಉಪಾಧ್ಯಕ್ಷ ಆರ್.ಬಾಬುಜಾನ್, ಕಾರ್ಯದರ್ಶಿ ಎಂ.ಎಸ್.ಜಗದೀಶ್, ಸಿ.ತಿಪ್ಪೇಶ್ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.