ADVERTISEMENT

ಕಾಲ್ಕಸವನ್ನು ಮೂಗಿನೊಳಗೆ ತರಬೇಡಿ...

ಕಸ ಸುಡುವುದನ್ನು ನಿಲ್ಲಿಸಿದರೆ ಅಸ್ತಮಾ ಶೇ 50 ಕಡಿಮೆಯಾಗಲಿದೆ: ಡಾ. ಎನ್‌.ಎಚ್‌. ಕೃಷ್ಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 11:33 IST
Last Updated 19 ಡಿಸೆಂಬರ್ 2019, 11:33 IST
ದಾವಣಗೆರೆಯ ಪ್ರಜಾವಾಣಿ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅಸ್ತಮಾ, ಅಲರ್ಜಿ (ನೆಗಡಿ–ಕೆಮ್ಮು) ಸಲಹಾ ವೈದ್ಯ ಡಾ. ಎನ್‌.ಎಚ್‌. ಕೃಷ್ಣ ಅವರು ಪ್ರಶ್ನೆಗಳಿಗೆ ಉತ್ತರಿಸಿದರು.
ದಾವಣಗೆರೆಯ ಪ್ರಜಾವಾಣಿ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅಸ್ತಮಾ, ಅಲರ್ಜಿ (ನೆಗಡಿ–ಕೆಮ್ಮು) ಸಲಹಾ ವೈದ್ಯ ಡಾ. ಎನ್‌.ಎಚ್‌. ಕೃಷ್ಣ ಅವರು ಪ್ರಶ್ನೆಗಳಿಗೆ ಉತ್ತರಿಸಿದರು.   

ದಾವಣಗೆರೆ: ‘ಕಾಲ ಕೆಳಗೆ ಬಿದ್ದಿರಬೇಕಾದ ಕಸವನ್ನು ಸುಡುವ ಮೂಲಕ ಮೂಗಿನೊಳಗೆ ತರುವಂತಹ ಕೆಲಸ ನಡೆಯುತ್ತಿದೆ. ಕಸ ಸುಡುವುದನ್ನು ನಿಲ್ಲಿಸಿದರೆ ಅಸ್ತಮಾ ಸಂಬಂಧಿಸಿದ ಶೇ 50ರಷ್ಟ ಕಾಯಿಲೆಗಳು ತನ್ನಿಂದ ತಾನೇ ನಿವಾರಣೆಯಾಗಲಿದೆ’ ಎಂದು ಅಸ್ತಮಾ, ಅಲರ್ಜಿ (ನೆಗಡಿ–ಕೆಮ್ಮು) ಸಲಹಾ ವೈದ್ಯ ಡಾ. ಎನ್‌.ಎಚ್‌. ಕೃಷ್ಣ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಕರೆ ಮಾಡಿದ ರೋಗಿಗಳಿಗೆ ಅವರು ಅಸ್ತಮಾ ರೋಗ ಲಕ್ಷಣ, ಪರಿಹಾರ ಮಾರ್ಗ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಲಹೆ ನೀಡಿದರು.

‘ವಿಶೇಷವಾಗಿ ನಗರದಲ್ಲಿ ಬೆಳಿಗ್ಗೆ ಕಸವನ್ನು ಸುಡಲಾಗುತ್ತಿದೆ. ಕಸ ಸುಡುವ ಮೂಲಕ ತಾವು ಸಮಾಜ ಸೇವೆ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಜನರಿದ್ದಾರೆ. ಆದರೆ, ಅವರು ಕೊಳೆತು ಗೊಬ್ಬರವಾಗಬೇಕಾಗಿದ್ದ ಕಸವನ್ನು ಸುಡುವ ಮೂಲಕ ಮೂಗಿನೊಳಗೆ ತೆಗೆದುಕೊಂಡು ಬರುತ್ತಿದ್ದಾರೆ. ಅದರಲ್ಲೂ ಚಳಿಗಾಲದಲ್ಲಿ ಕಸ ಸುಟ್ಟಾಗ ಹೊಗೆ ಮೇಲಕ್ಕೆ ಬೇಗನೆ ಹೋಗುವುದಿಲ್ಲ. ವಾಯು ಮಾಲಿನ್ಯದಿಂದಾಗಿಯೇ ಅಸ್ತಮಾ ಕಾಯಿಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೈಮುಗಿದು ಪ್ರಾರ್ಥಿಸುತ್ತೇನೆ, ದಯವಿಟ್ಟು ಕಸವನ್ನು ಸುಡಬೇಡಿ’ ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದರು.

ADVERTISEMENT

ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಹೊರಡಲು ಇನ್ನೂ 10 ನಿಮಿಷ ಇದೆ ಎನ್ನುವಾಗ ಮಾತ್ರ ವಾಹನವನ್ನು ಸ್ಟಾರ್ಟ್‌ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತರಬೇಕು. ಟ್ರಾಫಿಕ್‌ ಹೆಚ್ಚಿದಂತೆ ವಾಹನ ಸಂಚಾರ ನಿಧಾನವಾಗಿ ಹೊಗೆ ಉಗುಳುವುದು ಹೆಚ್ಚಾಗುತ್ತದೆ. ಇದರಿಂದಲೂ ವಾಯು ಮಾಲಿನ್ಯ ಜಾಸ್ತಿಯಾಗುತ್ತಿದೆ ಎಂದು ವಿಶ್ಲೇಷಿಸಿದರು.

ಆಹಾರ ಸೇವನೆ ಹೀಗಿರಲಿ...

ಅಸ್ತಮಾ ರೋಗದಿಂದ ಬಳಲುತ್ತಿರುವವರು ವಿಶೇಷವಾಗಿ ಹುಳಿ, ಎಣ್ಣೆಯಲ್ಲಿ ಕರಿದ ಹಾಗೂ ತಣ್ಣನೆಯ ಪದಾರ್ಥಗಳನ್ನು ತಿನ್ನಬಾರದು.

ಹುಳಿಯಾಗಿರುವ ಕಿತ್ತಳೆ, ದ್ರಾಕ್ಷಿ, ಮೊಸಂಬಿ, ಪೈನಾಪಲ್‌ ಹಣ್ಣುಗಳಿಂದ ದೂರ ಉಳಿಯಬೇಕು. ಅಗತ್ಯಕ್ಕೆ ತಕ್ಕಂತೆ ಅಡುಗೆಗೆ ಹುಳಿ ಪದಾರ್ಥ ಬಳಸಿದರೆ ತೊಂದರೆಯಾಗುವುದಿಲ್ಲ. ಅದೇ ರೀತಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹಾಗೂ ನೇರವಾಗಿ ತುಪ್ಪ ತಿನ್ನಬಾರದು. ಅಡುಗೆಗೆ ಸ್ವಲ್ಪ ಮಟ್ಟಿಗೆ ಇವುಗಳನ್ನು ಬಳಸಬಹುದು. ವಿಶೇಷವಾಗಿ ಐಸ್‌ಕ್ರೀಮ್‌, ತಂಪು ಪಾನೀಯಗಳಿಂದ ದೂರ ಉಳಿಯಬೇಕು.

ತಮಗೆ ಯಾವ ಪದಾರ್ಥ ಅಲರ್ಜಿ ಎಂಬುದನ್ನು ಅವರೇ ಕಂಡುಕೊಂಡು, ಆ ಪದಾರ್ಥದಿಂದ ದೂರ ಉಳಿಯಬೇಕು. ಅಸ್ತಮಾ ಇದ್ದವರು ಮೊಸರು, ಮಜ್ಜಿಗೆ ಬಳಸಬಾರದು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಹುಳಿ ಇಲ್ಲದ ಮಜ್ಜಿಗೆ ಹಾಗೂ ಕೆನೆರಹಿತ ಮೊಸರನ್ನು ಬಳಸಬಹುದು ಎನ್ನುತ್ತಾರೆ ಡಾ. ಕೃಷ್ಣ.

ಶೇ 12 ಜನರಿಗೆ ಅಸ್ತಮಾ

ಭಾರತದ ಜನಸಂಖ್ಯೆಯಲ್ಲಿ ಶೇ 10ರಿಂದ 12ರಷ್ಟು ಜನ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶೇ 35ರಷ್ಟು ಜನರಿಗೆ ಅಲರ್ಜಿ ನೆಗಡಿ ಬಾಧಿಸುತ್ತಿದೆ. ಪ್ರತಿ ಮೂವರಲ್ಲಿ ಒಬ್ಬರಿಗೆ ಅಲರ್ಜಿ ನೆಗಡಿ ಕಾಡುತ್ತಿದ್ದಾರೆ, 10 ಜನರಲ್ಲಿ ಒಬ್ಬರಿಗೆ ಅಸ್ತಮಾ ರೋಗ ಕಾಣಿಸಿಕೊಳ್ಳುತ್ತಿದೆ ಎಂದು ಡಾ. ಎನ್‌.ಎಚ್‌. ಕೃಷ್ಣ ತಿಳಿಸಿದರು.

ಚಳಿಗಾಲದಲ್ಲಿ ಈ ಕಾಯಿಲೆ ಹೆಚ್ಚಾಗುತ್ತದೆ. ಚಿಕ್ಕ ಮಕ್ಕಳಲ್ಲೂ ಈಗ ಈ ರೋಗ ಕಾಣಿಸಿಕೊಳ್ಳುತ್ತಿದೆ. ವಯಸ್ಸು ಹೆಚ್ಚಾದಂತೆ ರೋಗವೂ ಹೆಚ್ಚು ಬಾಧಿಸುತ್ತದೆ.

ಅಸ್ತಮಾ ರೋಗಿಗಳಲ್ಲಿ ವಿಶೇಷವಾಗಿ ಬೆಳಗಿನಜಾವ 2ರಿಂದ ಬೆಳಿಗ್ಗೆ 6 ಗಂಟೆಯ ಅವಧಿಯಲ್ಲಿ ಉಸಿರಾಟದ ತೊಂದರೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಹೋಗುವುದರಿಂದ ಅಸ್ತಮಾ ತೊಂದರೆ ಹೆಚ್ಚಾಗುತ್ತದೆ.

ಕೆಲ ವಿದೇಶಗಳಲ್ಲಿ ತಾಪಮಾನವು ‘–5’ ಡಿಗ್ರಿಗೆ ಹೋದರೂ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಅಲ್ಲಿನ ವಾತಾವರಣ ಶುದ್ಧವಾಗಿರುವುದೇ ಅದಕ್ಕೆ ಕಾರಣ. ನಮ್ಮಲ್ಲಿ ವಾತಾವರಣ ಕಲುಷಿತವಾಗಿರುವುದರಿಂದ ಅಸ್ತಮಾ ಸಮಸ್ಯೆ ಹೆಚ್ಚು ಬಾಧಿಸುತ್ತಿದೆ. ಅಮೆರಿಕದಂತಹ ದೇಶಗಳಲ್ಲಿ ಮಳೆಯಾದ ಕೆಲವೇ ಕ್ಷಣದಲ್ಲಿ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುತ್ತದೆ. ನಮ್ಮಲ್ಲಿ ಎಷ್ಟೋ ಕಡೆ ಚರಂಡಿಗಳೇ ಇಲ್ಲದಿರುವುದರಿಂದ ರಸ್ತೆಯ ಮೇಲೆ ದೂಳಿನ ಪ್ರಮಾಣ ಹೆಚ್ಚಿದೆ. ಮೊದಲು ಚರಂಡಿಗಳನ್ನು ಮಾಡಿ ರಸ್ತೆ ನಿರ್ಮಿಸಿದರೆ ದೂಳಿಗೂ ಕಡಿವಾಣ ಹಾಕಬಹುದು ಎಂದು ಡಾ. ಕೃಷ್ಣ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.