ADVERTISEMENT

ಬಸವಾಪಟ್ಟಣ: ನಾಟಿಗೆ ಬದಲು ಡ್ರಂ ಸೀಡರ್‌ನಿಂದ ಭತ್ತದ ಬಿತ್ತನೆ

ಕಾರಿಗನೂರಿನ ನೇಗಿಲಯೋಗಿ ಸಂಘದ ಸದಸ್ಯರ ಪ್ರಯೋಗ

ಎನ್.ವಿ.ರಮೇಶ್
Published 2 ಫೆಬ್ರುವರಿ 2022, 3:56 IST
Last Updated 2 ಫೆಬ್ರುವರಿ 2022, 3:56 IST
ಬಸವಾಪಟ್ಟಣ ಸಮೀಪದ ಕಾರಿಗನೂರಿನಲ್ಲಿ ರೈತರು ಡ್ರಂ ಸೀಡರ್ ಮೂಲಕ ಭತ್ತದ ಬಿತ್ತನೆ ಮಾಡುತ್ತಿರುವುದು.
ಬಸವಾಪಟ್ಟಣ ಸಮೀಪದ ಕಾರಿಗನೂರಿನಲ್ಲಿ ರೈತರು ಡ್ರಂ ಸೀಡರ್ ಮೂಲಕ ಭತ್ತದ ಬಿತ್ತನೆ ಮಾಡುತ್ತಿರುವುದು.   

ಬಸವಾಪಟ್ಟಣ: ದಿನಗಳು ಕಳೆದಂತೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರು ನಷ್ಟ ಅನುಭವಿಸುವುದು ಸಹಜವಾಗಿರುವ ಈ ಕಾಲದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗಾರರಿಗೆ ಡ್ರಂ ಸೀಡರ್‌ನಿಂದ ಬಿತ್ತನೆ ಒಂದು ವರದಾನವಾಗಿದೆ.

ನಾಟಿಗೆ ಒಂದು ತಿಂಗಳ ಮುಂಚೆ ಸಸಿ ಮಡಿಗಳನ್ನು ಸಿದ್ಧಪಡಿಸಿ, ಅದರಲ್ಲಿ ಬೀಜಗಳನ್ನು ಚೆಲ್ಲಿ ಗೊಬ್ಬರ ಹಾಕಿ ಬೆಳೆಸಿ ಕೂಲಿಕಾರರನ್ನು ಹೊಂದಿಸಿಕೊಂಡು ನಾಟಿ ಮಾಡಿಸಬೇಕಾದ ಅತಿ ಕಷ್ಟದ ಕೆಲಸ ಈಗ ಡ್ರಂ ಸೀಡರ್‌ನಿಂದಾಗಿ ಸುಲಭವಾಗಿದೆ. ಕಾರಿಗನೂರಿನ ನೇಗಿಲಯೋಗಿ ಸಂಘದ ಸದಸ್ಯರು ಈ ವರ್ಷದ ಬೇಸಿಗೆ ಭತ್ತದ ಬೆಳೆಗೆ ನಾಟಿಗೆ ಬದಲಾಗಿ ಡ್ರಂ ಸೀಡರ್‌ ಮೂಲಕವೇ ಭತ್ತದ ಬಿತ್ತನೆ ಮಾಡುತ್ತಿದ್ದಾರೆ.

ನಾಟಿಗೆ ಸಿದ್ಧಪಡಿಸುವಂತೆ ಗದ್ದೆಗಳನ್ನು ಸಿದ್ಧಪಡಿಸಿ ಮೊಳಕೆ ಬಂದ ಭತ್ತದ ಬೀಜಗಳನ್ನು ಐದು ಅಡಿ ಉದ್ದದ ಅಚ್ಚಿಗೆ ಅಳವಡಿಸಿದ ನಾಲ್ಕು ಡ್ರಂಗಳಿಗೆ ತುಂಬಿ ಒಬ್ಬನೇ ರೈತ ನಿಧಾನವಾಗಿ ಗದ್ದೆಯಲ್ಲಿ ಎಳೆದುಕೊಂಡು ಹೋದಾಗ ಬೀಜಗಳು ಕ್ರಮವಾಗಿ ಗದ್ದೆಗೆ ಸುರಿಯ ತೊಡಗುತ್ತವೆ.

ADVERTISEMENT

‘ಒಂದು ಎಕರೆಗೆ 8 ಕೆ.ಜಿ ಬೀಜ ಸಾಕು. ಒಬ್ಬ ರೈತ ದಿನಕ್ಕೆ ಎರಡರಿಂದ ಎರಡೂವರೆಗೆ ಎಕರೆ ಬೀಜ ಬಿತ್ತನೆ ಮಾಡಬಹುದು. ಇದರಿಂದ ಸಸಿ ಮಡಿಗಳನ್ನು ಸಿದ್ಧಪಡಿಸುವ, ಬೀಜ ಚೆಲ್ಲುವ ಅವುಗಳನ್ನು ಕಾಪಾಡುವ, ನಾಟಿಗೆ ಕೂಲಿಕಾರರನ್ನು ಹೊಂದಿಸುವ ರಗಳೆ ಇಲ್ಲವಾಗಿ ಸಾಕಷ್ಟು ಹಣದ ಉಳಿತಾಯವಾಗುತ್ತದೆ’ ಎನ್ನುತ್ತಾರೆ ಇಲ್ಲಿಯ ಪ್ರಗತಿಪರ ರೈತ ರುದ್ರೇಶ್‌.

‘ಬಿತ್ತನೆಯಾದ 25 ದಿನಗಳಿಗೆ ಒಂದು ಬಾರಿ ಕಳೆ ನಾಶಕ ಸಿಂಪಡಿಸಿದರೆ ಸಾಕು ಮತ್ತೆ ಮತ್ತೆ ಕಳೆ ತೆಗೆಯುವುದೇ ಬೇಡ. ಇನ್ನು ರಾಸಾಯನಿಕ ಗೊಬ್ಬರವೂ ಅಷ್ಟೇ, ನಾಟಿ ಭತ್ತಕ್ಕೆ ಒಟ್ಟು ಬೆಳೆಗೆ 3.5 ಕ್ವಿಂಟಲ್‌ ಖರ್ಚಾದರೆ, ಈ ಡ್ರಂ ಸೀಡರ್‌ ಬಿತ್ತನೆಗೆ ಎಕರೆಗೆ ಕೇವಲ 1.5 ಕ್ವಿಂಟಲ್‌ ಸಾಕು. ಈ ಪದ್ಧತಿಯಲ್ಲಿ ಎಕರೆಗೆ 25 ಕ್ವಿಂಟಲ್‌ ಇಳುವರಿಯಂತೂ ಸಾಧ್ಯವಿದೆ. ಕೃಷಿ ಕಾರ್ಮಿಕರ ಕೊರತೆಯ ಈ ಕಾಲದಲ್ಲಿ ಭತ್ತದ ಕೊಯ್ಲಿಗೆ ಯಂತ್ರಗಳು ಬಂದು ಸುಲಭವಾಗಿ ಒಕ್ಕಲು ನಡೆಯುತ್ತಿದೆ. ಈಗ ಡ್ರಂ ಸೀಡರ್‌ನಿಂದ ಭತ್ತದ ಬಿತ್ತನೆ ಅತಿ ಸುಲಭವಾಗಿದೆ. ನಮ್ಮಲ್ಲಿ ಹೀಗೆ ಬಿತ್ತನೆ ಮಾಡಿದ ಭತ್ತದ ಬೀಜಗಳಿಂದ ಸಸಿಗಳು ಉತ್ತಮವಾಗಿ ಹುಟ್ಟಿವೆ. ಈಗಾಗಲೇ ಇಲ್ಲಿ 20 ಎಕರೆಗಿಂತಲೂ ಹೆಚ್ಚು ಭತ್ತ ಬಿತ್ತನೆಯಾಗಿದೆ. ನಮ್ಮ ಸಂಘಕ್ಕೆ ಆನ್‌ಲೈನ್‌ ಮೂಲಕ ಎರಡು ಡ್ರಂ ಸೀಡರ್‌ಗಳನ್ನು ತರಿಸಿದ್ದೇವೆ. ಬೆಲೆ ತಲಾ ₹ 8 ಸಾವಿರ ಮಾತ್ರ. ಮುಂದಿನ ದಿನಗಳಲ್ಲಿ ಎಲ್ಲ ರೈತರು ಇದೇ ವಿಧಾನ ಅನುಸರಿಸಿ ಭತ್ತದ ಬೆಳೆಯನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ನೇಗಿಲಯೋಗಿ ಸಂಘದ ರೈತರಾದ ಅಲ್ಲಮಪ್ರಭು, ಬಾತಿ ಸಿದ್ಧೇಶ್‌, ಮಲ್ಲಿಕಾರ್ಜುನ.

‘ಭತ್ತದ ಬಿತ್ತನೆಗೆ ಈಗ ಬಂದಿರುವ ಡ್ರಂ ಸೀಡರ್‌ ಒಂದು ವರದಾನವಾಗಿದೆ. ಒಂದು ಎಕರೆ ಭತ್ತದ ನಾಟಿಗೆ ₹ 3,000 ದಿಂದ 3,500 ಕೊಡಬೇಕಿತ್ತು. ಈಗ ಅದರ ಗೋಜಿಲ್ಲ. ಡ್ರಂ ಸೀಡರ್‌ನಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿದೆ. ಈ ಪ್ರಮುಖ ಆಹಾರದ ಬೆಳೆಯಲ್ಲಿ ಲಾಭ ತರುವಂತಹ ಈ ವಿಧಾನವನ್ನು ಎಲ್ಲ ರೈತರೂ ಅನುಸರಿಸಿ ಯಾಂತ್ರೀಕೃತ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ಅವರ ಶ್ರಮವೂ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಇಲ್ಲಿನ ಕೃಷಿ ಅಧಿಕಾರಿ ಡಾ.ಡಿ.ಎಂ. ರಂಗಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.