ADVERTISEMENT

ದಾವಣಗೆರೆ | ದುರ್ಗಾಂಬಿಕಾ ದೇವಿಗೆ ಮಹಾಪೂಜೆ: ಹರಕೆ ತೀರಿಸಿ ಪುನೀತರಾದ ಭಕ್ತರು

ನಗರವನ್ನು ಆವರಿಸಿದ ಬಾಡೂಟದ ಘಮಲು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:34 IST
Last Updated 26 ಫೆಬ್ರುವರಿ 2026, 6:34 IST
ನಗರದೇವತೆ ದುರ್ಗಾಂಬಿಕಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕೋಣನ ಮುಖವಾಡದ ಮಾದರಿಯೊಂದನ್ನು ಇಡಲಾಗಿತ್ತು
ನಗರದೇವತೆ ದುರ್ಗಾಂಬಿಕಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕೋಣನ ಮುಖವಾಡದ ಮಾದರಿಯೊಂದನ್ನು ಇಡಲಾಗಿತ್ತು   

ದಾವಣಗೆರೆ: ನಗರವನ್ನು ಆವರಿಸಿದ ಮಾಂಸದೂಟದ ಘಮಲು. ಎತ್ತ ನೋಡಿದರೂ ಜನ. ಬೇವಿನುಡಿಗೆ ತೊಟ್ಟು ಹರಕೆ ತೀರಿಸುವ ಭಕ್ತ ಸಮೂಹ. ಮಡಿಯುಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದವರ ಬಾಯಿಂದ ಹೊರಬರುವ ‘ಉಧೋ.. ಉಧೋ..’ ಪ್ರಾರ್ಥನೆ. 

ಇದು ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಕಂಡುಬಂದ ದೃಶ್ಯಗಳು. ಜಾತ್ರಾ ಮಹೋತ್ಸವದ ನಾಲ್ಕನೇ ದಿನ ದೇವಿಗೆ ಮಹಾಪೂಜೆ ನೆರವೇರಿತು. ಈ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದ ವಿವಿಧೆಡೆಯಿಂದ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದು ಬಂದಿತ್ತು.

ಬುಧವಾರ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಡಬ್ಬಿಗಡಿಗೆ (ದೇಣಿಗೆ ಸಂಗ್ರಹ) ಮೂಲಕ ಭಕ್ತರಿಂದ ಪಡೆದ ಕಾಣಿಕೆಯಲ್ಲಿ ಖರೀದಿಸಿದ ಸೀರೆ ದೇವಿಯ ಮೈಮೇಲೆ ಕಂಗೊಳಿಸಿತು. ದೇಗುಲದ ಬಾಗಿಲು ತೆರೆಯುವುದಕ್ಕೂ ಮುನ್ನವೇ ಭಕ್ತರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಹಣ್ಣು, ಕಾಯಿ ನೈವೇದ್ಯವನ್ನು ಅರ್ಪಿಸಿ ಪುನೀತರಾದರು.

ADVERTISEMENT

ಇಡೀ ರಾತ್ರಿ ಉತ್ಸವ: ಮಂಗಳವಾರ ಮಧ್ಯರಾತ್ರಿ ದೇಗುಲದ ಬಾಗಿಲು ಹಾಕಲಾಗಿತ್ತು. ಕಿಟಕಿ, ಬಾಗಿಲು ಮುಚ್ಚಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಬುಧವಾರ ನಸುಕಿನಲ್ಲಿ ಮಹಾಪೂಜೆ ನೆರವೇರಿದ ಬಳಿಕ ದೇಗುಲದ ಬಳಿ ಧಾರ್ಮಿಕ ಕೈಂಕರ್ಯಗಳು ಚುರುಕು ಪಡೆದವು. ಹರಕೆ ಹೊತ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಇಡೀ ರಾತ್ರಿ ಉತ್ಸವ ಕಳೆಗಟ್ಟಿತ್ತು.

ಬಲಿ ನಿಷೇಧ ಮಾಡಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಚ್‌.ಟಿ. ಶೇಖರ್‌ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌ ಸೇರಿದಂತೆ ಅನೇಕ ಅಧಿಕಾರಿಗಳು ದೇಗುಲದ ಬಳಿ ಇಡೀ ರಾತ್ರಿ ಮೊಕ್ಕಾಂ ಹೂಡಿದ್ದರು.

ಊರ ಗಡಿಗೆ ಚರಗ ಅರ್ಪಣೆ: ಮಹಾಪೂಜೆಯ ಬಳಿಕ ಚೆಲ್ಲುವ ಚರಗಕ್ಕೆ ಮಂಗಳವಾರ ಮಧ್ಯರಾತ್ರಿಯಿಂದಲೇ ಸಿದ್ಧತೆಗಳು ನಡೆಯುತ್ತಿದ್ದವು. ದೇವಸ್ಥಾನ ಸಮೀಪದ ಕೊಠಡಿಯೊಂದರಲ್ಲಿ 15 ಕ್ವಿಂಟಲ್‌ ಬಿಳಿ ಜೋಳವನ್ನು ಬೇಯಿಸಲಾಯಿತು. ಪಶುವೈದ್ಯಾಧಿಕಾರಿ ಪಟ್ಟದ ಕೋಣದ ರಕ್ತವನ್ನು ಸಿರಿಂಜ್‌ ಮೂಲಕ ತೆಗೆದು ಹಸ್ತಾಂತರಿಸಿದರು. ಇದನ್ನು ಚರಗದಲ್ಲಿ ಮಿಶ್ರಣ ಮಾಡಲಾಯಿತು.

ಕೋಣನ ಮುಖವಾಡದ ಮಾದರಿಯೊಂದನ್ನು ದೇವಿಯ ಮುಂದಿಡಲಾಯಿತು. ಸಿದ್ಧಪಡಿಸಿದ ಚರಗವನ್ನು ಹೊತ್ತ ಯುವಕರ ತಂಡ ಬುಧವಾರ ನಸುಕಿನಲ್ಲಿ ನಗರದ ಎಲ್ಲ ದಿಕ್ಕುಗಳತ್ತ ಸಾಗಿದರು. ‘ಹುಲಿಗ್ಯೋ..’ ‘ಹುಲಿಗ್ಯೋ..’ ಎಂದು ಕೂಗುತ್ತ ಊರ ಗಡಿಗಳಲ್ಲಿ ಚರಗ ಚೆಲ್ಲಿದರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಭಕ್ತರ ಮನೆಗಳಲ್ಲಿ ಕುರಿಗಳನ್ನು ಬಲಿ ನೀಡಲಾಯಿತು. ನೈವೇದ್ಯ ಮುಗಿಸಿ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಿ ಮಾಂಸದೂಟ ಬಡಿಸಲಾಯಿತು.

3 ಲಕ್ಷ ಭಕ್ತರ ಭೇಟಿ: ಜಾತ್ರೆ ಆರಂಭವಾದಾಗಿನಿಂದ ಬುಧವಾರದವರೆಗೆ ದುರ್ಗಾಂಬಿಕಾ ದೇಗುಲಕ್ಕೆ 3 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.

‘ಭಾನುವಾರ ಜಾತ್ರೆ ಆರಂಭವಾಗುತ್ತಿದ್ದಂತೆ ಭಕ್ತರು ದೇಗುಲದತ್ತ ಮುಖ ಮಾಡಿದರು. ಸೋಮವಾರದ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಯಿತು. ಮಂಗಳವಾರ ಮತ್ತು ಬುಧವಾರ ನಿರೀಕ್ಷೆಗೂ ಮೀರಿದ ಜನರು ದೇಗುಲಕ್ಕೆ ಬಂದಿದ್ದರು. ದೇವಿ ದರ್ಶನ ಪಡೆಯಲು ಸಾಧ್ಯವಾಗದವರು ಮಹಾಮಂಟಪದ ಬಳಿಯೇ ನಮಿಸಿದರು’ ಎಂದು ತಾತ್ಕಾಲಿಕ ಪೊಲೀಸ್‌ ಠಾಣೆಯಲ್ಲಿನ ಅಧಿಕಾರಿಯೊಬ್ಬರು ವಿವರಿಸಿದರು.

ಬಟ್ಟೆ, ಬೇವು, ಎಡೆ ತೆರವು: ಹರಕೆ ತೀರಿಸಿದ ಬಳಿಕ ಬಳಿಕ ಬೇವು ಹಾಗೂ ಬಟ್ಟೆಯನ್ನು ಅನೇಕರು ದೇಗುಲದ ಬಳಿ ಬಿಟ್ಟಿದ್ದರು. ದೇವಿಗೆ ಅರ್ಪಿಸಲು ತಂದ ನೈವೇದ್ಯ ಕೂಡ ಅಲ್ಲಿಯೇ ಇಡುತ್ತಿದ್ದರು. ಮಹಾಮಂಟಪದ ಮುಂಭಾಗ, ದೇಗುಲದ ಸಮೀಪದಲ್ಲಿ ಭಕ್ತರ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದನ್ನು ಗಮನಿಸಿದ ಮಹಾನಗರ ಪಾಲಿಕೆಯ ಸಿಬ್ಬಂದಿ ಎಲ್ಲವನ್ನೂ ತೆರವುಗೊಳಿಸಿದರು.

‘ಹರಕೆ ತೀರಿಸಿದ ಬಳಿಕ ಭಕ್ತರು ಮಡಿಯಾಗುತ್ತಾರೆ. ಆಗ ಬೇವು, ಬಟ್ಟೆ ಅಲ್ಲಿಯೇ ಉಳಿಯುತ್ತವೆ. ಇದರಿಂದ ಉರುಳು ಸೇವೆ, ದೀಡ್‌ ನಮಸ್ಕಾರ ಹಾಕಲು ಅಡ್ಡಿಯಾಗುತ್ತಿತ್ತು’ ಎಂದು ಮಹಾನಗರ ಪಾಲಿಕೆಯ ಸಿಬ್ಬಂದಿ ವಿವರಿಸಿದರು.

ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಚರಗ ಚೆಲ್ಲಲು ತೆರಳಿದ ಯುವಕರು
ಜಾತ್ರೆ ಅಂಗವಾಗಿ ಬೇವಿನ ಉಡುಗೆಯಲ್ಲಿ ಹರಕೆ ತೀರಿಸಿದ ಭಕ್ತರು
ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದ ಸುತ್ತ ಕಂಡು ಬಂದ ಭಕ್ತ ಸಮೂಹ ಪ್ರಜಾವಾಣಿ ಚಿತ್ರಗಳು: ಸತೀಶ್ ಬಡಿಗೇರ
ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಬಳೆ ಖರೀದಿಸಿದ ಮಹಿಳೆಯರು

ಬೇವಿನುಡಿಗೆ: 20 ಜನರಿಗೆ ತಡೆ

ಹರಕೆ ತೀರಿಸುವ ನೆಪದಲ್ಲಿ ಅರೆಬೆತ್ತಲೆಯಾಗಿ ಬೇವು ಸುತ್ತಿಕೊಂಡು ದೇಗುಲಕ್ಕೆ ಬಂದಿದ್ದ 20 ಜನರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಡೆದರು. ಅವರಿಗೆ ಬಟ್ಟೆಯನ್ನು ಹೊದಿಸಿ ಮನೆಗೆ ಕಳುಹಿಸಿದರು. ಹರಕೆಯ ನೆಪದಲ್ಲಿ ಬೆತ್ತಲೆ ಸೇವೆ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಇಂತಹ ಮೌಢ್ಯಾಚರಣೆ ತಡೆಯಲು ಸಿಬ್ಬಂದಿ ನಿಯೋಜಿಸಿದೆ. ಬಟ್ಟೆಯ ಮೇಲೆ ಬೇವು ಸುತ್ತಿಕೊಂಡು ಹರಕೆ ತೀರಿಸಲು ಮಾತ್ರ ಅವಕಾಶ ನೀಡಲಾಗಿದೆ. ಬೇವು ಸುತ್ತಿಕೊಂಡು ದೇಗುಲಕ್ಕೆ ಬರುತ್ತಿದ್ದ ಪ್ರತಿಯೊಬ್ಬರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡ ಪರಿಶೀಲಿಸುತ್ತಿತ್ತು. ಬಟ್ಟೆಯ ಮೇಲೆ ಬೇವು ಸುತ್ತಿಕೊಂಡವರಿಗೆ ಮಾತ್ರ ಹರಕೆ ತೀರಿಸಲು ಅವಕಾಶ ನೀಡುತ್ತಿತ್ತು.

ಇಂದಿನಿಂದ ಸಾಂಸ್ಕೃತಿಕ ಕಾರ್ಯಕ್ರಮ

ಜಾತ್ರಾ ಮಹೋತ್ಸವದ ಅಂಗವಾಗಿ ದುರ್ಗಾಂಬಿಕಾ ದೇಗುಲದ ಮುಂಭಾಗದಲ್ಲಿ ಫೆ.26ರಿಂದ ಮಾರ್ಚ್‌ 10ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿತ್ಯ ರಾತ್ರಿ 8ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧೆಡೆಯ ಗಾಯಕರು ನೃತ್ಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಫೆ.27ರಿಂದ ಮಾರ್ಚ್‌ 1ರವರೆಗೆ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕುಸ್ತಿ ಏರ್ಪಡಿಸಲಾಗಿದೆ. ದೊಡ್ಡ ಜೋಡಿಗಳಿಗೆ ಬೆಳ್ಳಿ ಗದೆ ಹಾಗೂ ₹ 25000 ಬಹುಮಾನ ನೀಡಲಾಗುತ್ತದೆ. ಅಭಿನವ ರೇಣುಕಾ ಮಂದಿರದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.