
ಹರಿಹರ: ನಗರದ ಪ್ರಮುಖ ರಸ್ತೆಗಳ ದೂಳನ್ನು ಗುಡಿಸಿ, ಕಸ ಸಂಗ್ರಹಣೆ ಮಾಡಿ ನಗರದ ನೈರ್ಮಲ್ಯ ಕಾಪಾಡುವ ಮೂಲಕ ಸಾರ್ವಜನಿಕರಿಗೆ ಆಗುವ ದೂಳಿನ ತೊಂದರೆ ನೀಗಿಸಬೇಕಿರುವ ಕಸ ಸಂಗ್ರಹ ಯಂತ್ರದ ವಾಹನವೇ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ವತಃ ದೂಳು ತಿನ್ನುತ್ತಾ ಮೂಲೆಗೆ ಸೇರಿದೆ.
2018ರಲ್ಲಿ ₹ 20 ಲಕ್ಷ ವೆಚ್ಚದಲ್ಲಿ ವೆಕ್ಟ್ರಾ ಹಿಮ್ಯಾನ್- 175 ಎಂಬ ವಾಹನವನ್ನು ಬೆಂಗಳೂರಿನಿಂದ ಖರೀದಿಸಿ ತರಲಾಗಿತ್ತು. ಆರಂಭದ ಐದಾರು ತಿಂಗಳು ಕಾಲ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇದನ್ನು ಬಳಸಲಾಯಿತು. ನಂತರ ವಾಹನದಲ್ಲಿ ದೋಷ ಕಂಡುಬಂದಿದ್ದರಿಂದ, ದುರಸ್ತಿಗಾಗಿ ಮೆಕ್ಯಾನಿಕ್‌ಗಳಿಗೆ ಕಾಯಬೇಕಾಯಿತು. ಅವರು ಬಾರದ ಕಾರಣ ದುರಸ್ತಿ ಆಗಲೇ ಇಲ್ಲ. ಪರಿಣಾಮವಾಗಿ ನಗರದ ನೀರು ಶುದ್ಧೀಕರಣ ಘಟಕದ ಆವರಣದಲ್ಲಿರುವ ವಾಹನಗಳ ಶೆಡ್‌ನಲ್ಲಿ ದೂಳು ತಿನ್ನುತ್ತಾ 7 ವರ್ಷಗಳಿಂದ ಬಿದ್ದಿದ್ದು, ಹಾಳಾಗುವ ಅಂಚಿಗೆ ತಲುಪಿದೆ.
ಒಂದೂ ಕಾಲು ಲಕ್ಷ ಜನ ಜನಸಂಖ್ಯೆ ಹೊಂದಿರುವ, ಜಿಲ್ಲೆಯ 2ನೇ ದೊಡ್ಡ ನಗರದ ನೈರ್ಮಲ್ಯ ನಿರ್ವಹಣೆ ಹಾಗೂ ಪೌರ ಕಾರ್ಮಿಕರ ಕೆಲಸ ಹಗುರವಾಗಲಿ ಎಂಬ ಉದ್ದೇಶದಿಂದ ಖರೀದಿಸಿದ ಈ ಅಮೂಲ್ಯ ವಾಹನವು ಅಧಿಕಾರಿಗಳ ಬೇಜವಾಬ್ದಾರಿಯಿಂದ ಮೂಲೆಗುಂಪಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ. ಮಹಾಂತೇಶ್ ಆರೋಪಿಸಿದ್ದಾರೆ.
ನಗರದ ಯಾವುದೇ ರಸ್ತೆ, ಗಲ್ಲಿಗೆ ಹೋದರೂ ದೂಳಿನ ರಾಶಿ ಕಾಣುತ್ತದೆ. ವಾಹನವೊಂದು ರಸ್ತೆಯಲ್ಲಿ ಹಾದುಹೋದರೆ, ಅಲ್ಲಿ ಏಳುವ ದೂಳು ಗಾಳಿಯೊಂದಿಗೆ ಬೆರೆತು ವಾಹನ ಸವಾರರು ಹಾಗೂ ಪಾದಚಾರಿಗಳ, ಅಕ್ಕಪಕ್ಕದಲ್ಲಿರುವ ಮನೆಗಳು, ಅಂಗಡಿಗಳಲ್ಲಿ ಇರುವವರ ಕಣ್ಣಿಗೆ ರಾಚುತ್ತದೆ. ಪೌರ ಕಾರ್ಮಿಕರ ಸಂಖ್ಯೆ ನಿಗದಿಗಿಂತ ಕಡಿಮೆ ಇರುವುದರಿಂದ ಎಲ್ಲಾ ರಸ್ತೆಗಳ ದೂಳನ್ನು ಸ್ವಚ್ಛಗೊಳಿಸುವುದು ಸವಾಲಿನ ಕೆಲಸವಾಗಿದೆ. ಇಂತಹ 4 ವಾಹನಗಳನ್ನು ತಂದರೂ ಸಾಕಾಗುವಷ್ಟು ಕೆಲಸವಿದೆ ಎಂಬುದು ಸ್ಥಳೀಯರ ವಾದ.
ಹಲವು ಕಸ ಸಂಗ್ರಹಣೆ ಆಟೊ ಟಿಪ್ಪರ್ ಹಾಗೂ ಇತರೆ ವಾಹನಗಳೂ ದುರಸ್ತಿ ಕಾಣದೆ ನಿಂತಿವೆ. ನಗರಸಭೆಯ ಪರಿಸರ, ಆರೋಗ್ಯ ಶಾಖೆಯ ಅಧಿಕಾರಿಗಳು, ಪೌರಾಯುಕ್ತರು ಪ್ರಜ್ಞಾವಂತಿಕೆಯಿಂದ ಕೆಲಸ ನಿರ್ವಹಿಸಿದರೆ ಇಂತಹ ಲೋಪಗಳಾಗುವುದಿಲ್ಲ ಎಂದೂ ಅವರು ಸಲಹೆ ನೀಡಿದ್ದಾರೆ.
ವಾಹನ ಖರೀದಿಗೆ ₹ 20 ಲಕ್ಷ ವೆಚ್ಚ 7 ವರ್ಷಗಳಿಂದ ಕೆಲಸ ಮಾಡದೇ ಸ್ಥಗಿತ ಹಾಳಾಗುವತ್ತ ದೂಳು ಸಂಗ್ರಹ ವಾಹನ
₹20 ಲಕ್ಷ ಮೌಲ್ಯದ ವಾಹನ ನಿರುಪಯುಕ್ತವಾಗಿ ಬಿದ್ದಿದೆ. ಇದಕ್ಕೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು. ವಾಹನ ಬಳಕೆಗೆ ಬಾರದಿದ್ದರೆ ಅವರಿಂದಲೇ ಹಣ ವಸೂಲಿ ಮಾಡಿ ಬೇರೆ ವಾಹನ ತರಿಸಬೇಕುಪಿ.ಜೆ.ಮಹಾಂತೇಶ್ ಕದಸಂಸ ತಾಲ್ಲೂಕು ಘಟಕದ ಸಂಚಾಲಕ
ದೂಳು ಸಂಗ್ರಹ ವಾಹನವನ್ನು ಪರಿಶೀಲಿಸಿ ದುರಸ್ತಿ ಮಾಡಿಸಿ ಸೇವೆಗೆ ಉಪಯೋಗಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆನವೀನ್ ಕುಮಾರ್ ಪ್ರಭಾರ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.