ಹರಿಹರ: ವೆಬ್‌ಸೈಟ್ ತಂತ್ರಾಂಶಗಳ ದೋಷದಿಂದಾಗಿ ಆಸ್ತಿಗಳ ಇ– ಖಾತಾ ಉತಾರಾ (ಎಕ್ಸ್‌ಟ್ರ್ಯಾಕ್ಟ್) ನೀಡುವ ಪ್ರಕ್ರಿಯೆ ಬಹುತೇಕ ಪಾರ್ಶ್ವವಾಯು ಪೀಡಿತವಾಗಿದ್ದು, ನಗರದ ಜನ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರಸಭೆ ಇ– ಆಸ್ತಿ ಹಾಗೂ ಉಪ ನೋಂದಣಾಧಿಕಾರಿ ಕಚೇರಿಯ ಕಾವೇರಿ ತಂತ್ರಾಂಶಗಳನ್ನು ಜೋಡಿಸುವ ಪ್ರಕ್ರಿಯೆ ಆರಂಭವಾದಂದಿನಿಂದ ಈ ಸಮಸ್ಯೆ ಎದುರಾಗಿದ್ದು, ತಮ್ಮ ಆಸ್ತಿ, ಪಾಸ್ತಿಗಳ ಇ–ಖಾತಾ ಪಡೆಯಲು ನಿತ್ಯ ನೂರಾರು ಜನ ನಗರಸಭೆಗೆ ಸುತ್ತಾಡುತ್ತಿದ್ದಾರೆ.
ಖರೀದಿ, ಮಾರಾಟಕ್ಕಾಗಿ, ಸಾಲ ಪಡೆಯಲು ಅಡಮಾನ ಮಾಡುವುದು, ಉಯಿಲು ಬರೆಯಲು, ನ್ಯಾಯಾಲಯದಲ್ಲಿ ಜಾಮೀನು ಪ್ರಕ್ರಿಯೆ ಸೇರಿ ವಿವಿಧ ಕಾರ್ಯಗಳಿಗೆ ಜನರಿಗೆ ತಮ್ಮ ಆಸ್ತಿಗಳ ಇ– ಖಾತಾ ಉತಾರಾ ಪಡೆಯುವ ಅಗತ್ಯ ಸೃಷ್ಟಿಯಾಗುತ್ತದೆ.
ನೋಂದಣಾಧಿಕಾರಿ ಕಚೇರಿ ಆದಾಯ ಖೋತಾ: ಇ– ಖಾತಾ ಸಿಗದಿರುವ ಕಾರಣ ನಗರದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ವಹಿವಾಟಿಗೆ ತೀವ್ರ ಪೆಟ್ಟು ಬಿದ್ದಿದೆ. ನಗರದ ಹೊಸ ಲೇಔಟ್‌ಗಳು ಸೇರಿ ಹಳೆ ಊರಿನ ಬಡಾವಣೆಗಳ ಆಸ್ತಿಗಳ ಇ– ಖಾತಾ ಸಿಗದಿರುವುದೇ ಇದಕ್ಕೆ ಕರಣವಾಗಿದೆ. ಈಚೆಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸ್ವತಃ ಇಲ್ಲಿನ ಉಪ ನೋಂದಣಾಧಿಕಾರಿ ಈ ಮಾಹಿತಿ ನೀಡಿದ್ದರು.
ಇತ್ತೀಚಿನ ಇ– ಖಾತಾ ಉತಾರಾ ಇದ್ದರೆ ಮಾತ್ರ ಆಸ್ತಿದಾರರು ತಮ್ಮ ವಿವಿಧ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯ. ಹಳೆಯ ಇ– ಖಾತಾ ಇದ್ದರೂ ಬಳಸಲಾಗದು. ಪರಿಣಾಮವಾಗಿ ಜನರು ನಿತ್ಯ ನಗರಸಭೆಗೆ ಬರುತ್ತಾರೆ. ಸಂಬಂಧಪಟ್ಟ ಸಿಬ್ಬಂದಿಯನ್ನು ವಿಚಾರಿಸಿ ವ್ಯವಸ್ಥೆಯನ್ನು ಶಪಿಸುತ್ತ ವಾಪಸ್ ತೆರಳುತ್ತಾರೆ.
ಗಾಯದ ಮೇಲೆ ಬರೆ: ಲೋಕಾಯುಕ್ತ ದಾಳಿಗೆ ಒಳಗಾಗಿ ಹಲವು ಹುದ್ದೆಗಳು ಇಲ್ಲಿ ಖಾಲಿ ಇವೆ. ಬಿಲ್ ಕಲೆಕ್ಟರ್ ಸಿಬ್ಬಂದಿಗೆ ಕಂದಾಯ ನಿರೀಕ್ಷಕ ಪ್ರಭಾರಿಯಾಗಿ ವಹಿಸಲಾಗಿದೆ. ಹೀಗಾಗಿ ಈಗಾಗಲೇ ಸಿಬ್ಬಂದಿ ಕೊರತೆ, ಕಿರಿದಾದ ಕಚೇರಿಯಿಂದಾಗಿ ನಗರಸಭೆಯ ಕೆಲಸ ಕಾರ್ಯಗಳು ಆಮೆಗತಿಯಲ್ಲಿವೆ. ಇದರ ಜೊತೆಗೆ ಈ ತಂತ್ರಾಂಶಗಳ ದೋಷ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುವುದು ಜನರ ಅಭಿಪ್ರಾಯ.
ತಂತ್ರಾಂಶಗಳ ದೋಷ ಜನರನ್ನು ಹಲವು ತಿಂಗಳುಗಳಿಂದ ಹೈರಾಣು ಮಾಡುತ್ತಿದೆ. ಇದರಿಂದ ಜನರು ಬೇಸತ್ತಿದ್ದಾರೆ.-ಪ್ರೀತಮ್ ಬಾಬು, ಕರವೇ (ಪ್ರವೀಣ್‌ಶೆಟ್ಟಿ ಬಣ) ನಗರ ಘಟಕದ ಅಧ್ಯಕ್ಷ
ಎರಡು ತತ್ರಾಂಶಗಳ ಜೋಡಣೆ ಮಾಡಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದೆ. ಸಮಸ್ಯೆ ಪರಿಹರಿಸುವ ಕಾರ್ಯ ನಡೆಯುತ್ತಿದೆ.-ಪ್ರವೀಣ್ ಕುಮಾರ್, ನಗರಸಭೆಯ ಸೀನಿಯರ್ ಪ್ರೋಗ್ರಾಮರ್ ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.