ADVERTISEMENT

ಮಲೇಬೆನ್ನೂರು: ಖಾಸಗಿ ಸಂಸ್ಥೆ ಸಹಕಾರ- ಶಾಲೆಗೆ ಡಿಜಿಟಲ್‌ ಸ್ಪರ್ಶ

ಧೂಳೆಹೊಳೆ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 3:56 IST
Last Updated 1 ಡಿಸೆಂಬರ್ 2021, 3:56 IST
ಧೂಳೆಹೊಳೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು
ಧೂಳೆಹೊಳೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು   

ಮಲೇಬೆನ್ನೂರು:ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಖಾಸಗಿ ಸಂಸ್ಥೆ, ಸಂಘಟನೆ ಸಹಕಾರ ನೀಡಿದರೆ ಶಾಲೆ ಅಭಿವೃದ್ಧಿ ಕಾಣುತ್ತದೆ ಎಂಬುದಕ್ಕೆ ಸಮೀಪದಧೂಳೆಹೊಳೆ ಸರ್ಕಾರಿ ಹಿರಿಯ ಶಾಲೆ ಸಾಕ್ಷಿಯಾಗಿ ನಿಂತಿದೆ.

ದಾನಿಗಳುಅಭಿವೃದ್ಧಿಗೆ ಕೈ ಜೋಡಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ನಾಂದಿ ಹಾಡಿದ್ದರಿಂದ ಶಾಲೆ ಡಿಜಿಟಲ್‌ ಸ್ಪರ್ಶ ಪಡೆದಿದೆ.

1929ನೇ ಸಾಲಿನಲ್ಲಿ ಆರಂಭವಾಗಿರುವ ಸರ್ಕಾರಿ ಶಾಲೆ ಸೌಲಭ್ಯಗಳಿಂದ ವಂಚಿತವಾಗಿತ್ತು. ಇದನ್ನು ಮನಗಂಡ ಹಲವಾರು ಸಂಘ–ಸಂಸ್ಥೆಗಳು, ದಾನಿಗಳು ನೆರವು ನೀಡಿದ ಪರಿಣಾಮ ಶಾಲೆ ಇಂದು ಹೆಚ್ಚು ಮಕ್ಕಳನ್ನು ಸೆಳೆಯುತ್ತಿದೆ.

ADVERTISEMENT

‘ವಿದ್ಯಾರ್ಥಿಗಳಿಗೆ‌ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪಾಠ ಹಾಗೂ ಪೀಠೋಪಕರಣ, ಮಕ್ಕಳಿಗೆ ಶೂ, ಸಮವಸ್ತ್ರ, ಪುಸ್ತಕ ಹಾಗೂ ಶಾಲಾಬ್ಯಾಗ್ ನೀಡಿ ಓದಿಗೆ ಉತ್ತೇಜಿಸಿ ಕಲಿಕೆ ಗುಣಮಟ್ಟ ಹೆಚ್ಚಿಸಿದ ಪರಿಣಾಮಪ್ರತಿ ವರ್ಷ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಗುತ್ತಿದೆ. ಪ್ರಸಕ್ತ ವರ್ಷ ಒಟ್ಟು 168 ಮಕ್ಕಳು ಓದುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಬಸವರಾಜಪ್ಪ’ ಸಂತಸ ಹಂಚಿಕೊಂಡರು.

ಮೂಲ ಸೌಕರ್ಯಗಳಾದ ಶಾಲಾ ಕೊಠಡಿ, ವಾಚನಾಲಯ, ಸ್ಮಾರ್ಟ್‌ಕ್ಲಾಸ್, ಕೈ ತೋಟ, ಕಾಂಪೌಂಡ್, ಶೌಚಾಲಯ, ನೀರಿನ ಟ್ಯಾಂಕ್, ಆಟದ ಮೈದಾನ, ವಿಜ್ಞಾನ, ಗಣಿತ, ಟಿವಿ, ರೇಡಿಯೋ, ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ, ತಟ್ಟೆ ಲೋಟ, ವ್ಯವಸ್ಥೆ ಹಾಗೂ 7 ಮಂದಿ ನುರಿತ ಶಿಕ್ಷಕರ ಸೇವೆ ಲಭ್ಯವಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುನ್ನಡೆದಿವೆ.

5 ವರ್ಷಗಳಿಂದ ಶಾಲೆಯ ಸಮಗ್ರ ಅಭಿವೃದ್ಧಿ, ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಯೂತ್ ಫಾರ್, ಟೆಕ್ಸಸ್ ಇನಸ್ಟ್ರುಮೆಂಟ್ಸ್, ಆಕ್ಟಿವ್ ಫೈನಾನ್ಸ್, ದಾವಣಗೆರೆ ರೋಟರಿ, ಕರುಣಾ ಜೀವ ಟ್ರಸ್ಟ್, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಹೆಲ್ಪಿಂಗ್ ಗ್ರೂಪ್, ಜೀವಧನ ಕಂಪನಿ ಸೇರಿ ಹಲವಾರು ಸಂಘ ಸಂಸ್ಥೆ ಸಹಾಯಹಸ್ತ ಚಾಚಿವೆ ಎಂದು ಸ್ಮರಿಸಿದರು ಅವರು.

5 ಹೆಂಚಿನ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಲೆಗೆ ಈಗ 7 ಆರ್‌ಸಿಸಿ ಕೊಠಡಿಗಳಿದ್ದು, ಶಾಲಾಭಿವೃದ್ಧಿ ಸಂಸ್ಥೆ ಪದಾಧಿಕಾರಿಗಳು ಶಾಲೆಯ ಮಕ್ಕಳ ಶಿಕ್ಷಣಕ್ಕೆ ಅತ್ಯುತ್ತಮ ರೀತಿ ಸಹಕಾರ ನೀಡಿದ್ದಾರೆ. ಶಾಲಾ ಮಕ್ಕಳು ನಲಿಕಲಿ ಸೇರಿ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರುಶಿಕ್ಷಕ ಶರಣ ಕುಮಾರ್ ಹೆಗಡೆ.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರೂ ಅಪಾರ ಶ್ರಮ ಹಾಕುತ್ತಿದ್ದಾರೆ.ಶಾಲೆ ಶಿಕ್ಷಕಶರಣ ಕುಮಾರ್ ಹೆಗಡೆಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವುದು ವಿಶೇಷ.

...

ಶಿಕ್ಷಕರ ಸೇವಾ ಮನೋಭಾವ, ಗ್ರಾಮಸ್ಥರು, ಪೋಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಸಹಕಾರ ಅವಿಸ್ಮರಣೀಯ. ಎಲ್ಲರ ಶ್ರಮದಿಂದ ಶಾಲೆ ಅಭಿವೃದ್ಧಿ ಕಾಣುತ್ತಿದೆ.

-ಎಸ್. ನಿಜಲಿಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ

...

ಖಾಸಗಿ ಸಂಸ್ಥೆ, ಸರ್ಕಾರದ ಸಹಕಾರ ಶಾಲೆ ಪ್ರಗತಿಗೆ ಪೂರಕವಾಗಿದೆ. ಇದರಿಂದ ನಮಗೂ ಉತ್ತಮ ವಾತಾವರಣದಲ್ಲಿ ಮಕ್ಕಳಿಗೆ ಕಲಿಸುವ ಖುಷಿ ಇದೆ.

- ಶರಣ ಕುಮಾರ್ ಹೆಗಡೆ, ಶಿಕ್ಷಕ

...

ನಮ್ಮ ಶಾಲೆ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದಲ್ಲಿ ಕಡಿಮೆ ಇಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಹೆಚ್ಚಳವಾಗುತ್ತಿದೆ.

- ಬಸವರಾಜಪ್ಪ, ಮುಖ್ಯಶಿಕ್ಷಕ

...

ಧೂಳೆಹೊಳೆ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಡಿಜಿಟಲ್ ಸ್ಪರ್ಶ ಬಂದಿದೆ. ಇದಕ್ಕೆ ದಾನಿಗಳ ನೆರವು ಅಪಾರ. ಇಂತಹ ಕಾರ್ಯ ಎಲ್ಲೆಡೆ ಆಗಬೇಕಿದೆ.

- ಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.