ADVERTISEMENT

ದಾವಣಗೆರೆ: 9 ತಿಂಗಳು ತಡವಾಗಿ ಬಂತು ಪಾಲಿಕೆ ಚುನಾವಣೆ

ಕೋರ್ಟ್‌ ಮೆಟ್ಟಲೇರಿದ್ದ ಮೀಸಲಾತಿ ವಿವಾದ ತಡವಾಗಲು ಕಾರಣ

ಬಾಲಕೃಷ್ಣ ಪಿ.ಎಚ್‌
Published 20 ಅಕ್ಟೋಬರ್ 2019, 19:46 IST
Last Updated 20 ಅಕ್ಟೋಬರ್ 2019, 19:46 IST
ಮಂಜುನಾಥ ಬಳ್ಳಾರಿ
ಮಂಜುನಾಥ ಬಳ್ಳಾರಿ   

ದಾವಣಗೆರೆ: ವಾರ್ಡ್‌ವಾರು ಮೀಸಲಾತಿಯ ವಿವಾದದಿಂದಾಗಿ ಮುಂದಕ್ಕೆ ಹೋಗಿದ್ದ ದಾವಣಗೆರೆ ಪಾಲಿಕೆ ಚುನಾವಣೆಗೆ ಕೊನೆಗೂ ದಿನ ಕೂಡಿಬಂದಿದೆ. ಈ ವರ್ಷದ ಫೆ.12ಕ್ಕೆ ಅವಧಿ ಮುಗಿದ್ದು, ನ.12ಕ್ಕೆ ಚುನಾವಣೆ ನಡೆಯಲಿದೆ.

ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಿದ್ದಲ್ಲದೇ ಮೀಸಲಾತಿ ನಿಗದಿಪಡಿಸಿ 2018ರ ಜೂನ್‌ನಲ್ಲಿ ಚುನಾವಣಾ ಆಯೋಗ ಮೊದಲ ಪಟ್ಟಿ ಪ್ರಕಟಿಸಿ, ಆಗಸ್ಟ್‌ನಲ್ಲಿ ಅಂತಿಮ ಪಟ್ಟಿ ಪ್ರಕಟಿಸಿತ್ತು. ಇದನ್ನು ಆಕ್ಷೇಪಿಸಿ ಮಂಗಳೂರಿನ ರವೀಂದ್ರ ನಾಯಕ್‌ ಎಂಬುವರು ಹೈಕೋರ್ಟ್‌ ಮೆಟ್ಟಿಲೇರಿದರು. ದಾವಣಗೆರೆಯಿಂದ ಎಚ್‌. ಜಯಣ್ಣ ಆಕ್ಷೇಪ ಅರ್ಜಿ ದಾಖಲಿಸಿದರು.

ದಾವಣಗೆರೆಯ ಸಮಸ್ಯೆ ಏನು?:‘ಇಲ್ಲಿನ 6ನೇ ವಾರ್ಡ್‌ ಆಗಿದ್ದ ಅಹ್ಮದ್‌ನಗರ ವಾರ್ಡ್‌ಗೆ ಬಿಸಿಎಂ (ಎ) ಮೀಸಲಾತಿ 2007ರಲ್ಲಿ ನಿಗದಿ ಮಾಡಲಾಗಿತ್ತು. ಪ್ರತಿ ಚುನಾವಣೆಗೆ ಮೀಸಲಾತಿಯನ್ನು ಸರತಿ ಪ್ರಕಾರ ಪುನರ್‌ ನಿಗದಿಗೊಳಿಸಬೇಕು. ಅದರಂತೆ 2013ರಲ್ಲಿ ಎಸ್‌ಸಿಗೆ ಮೀಸಲಾಯಿತು. ಆದರೆ, ಮೀಸಲಾತಿ ಜಾರಿಗೆ ಬಾರದೆ ಇದ್ದಿದ್ದರಿಂದ ಹಿಂದಿನ ಮೀಸಲಾತಿಯಂತೆ ಚುನಾವಣೆ ನಡೆಸಲು ಕೋರ್ಟ್‌ ಆದೇಶ ನೀಡಿತು. ಆದ್ದರಿಂದ 2013ರ ಚುನಾವಣೆಗೆ 2007ರ ಮೀಸಲಾತಿಯೇ ಮುಂದುವರಿಯಿತು. 2013ರಲ್ಲಿ ಚುನಾವಣೆ ನಡೆಯಿತಾದರೂ ಮೇಯರ್, ಉಪಮೇಯರ್‌ ಮೀಸಲಾತಿ ಪ್ರಕಟಿಸಲು ಸರ್ಕಾರ ಮತ್ತೆ ಒಂದು ವರ್ಷ ತೆಗೆದುಕೊಂಡಿತು. ಹಾಗಾಗಿ 2014ರ ಫೆ.12ರಿಂದ ಐದು ವರ್ಷ ಲೆಕ್ಕಕ್ಕೆ ಬಂತು. ಹಾಗಾಗಿ 2019ರ ಫೆ.12ಕ್ಕೆ ಅವಧಿ ಮುಗಿಯಿತು.

ADVERTISEMENT

2017ರಲ್ಲಿ ದಾವಣಗೆರೆ ಪಾಲಿಕೆಯ 41 ವಾರ್ಡ್‌ಗಳನ್ನು 45ಕ್ಕೆ ಹೆಚ್ಚಿಸಿ, ಮೀಸಲಾತಿ ನಿಗದಿಪಡಿಸಿತು. ಅಹ್ಮದ್‌ನಗರ 12ನೇ ವಾರ್ಡ್‌ ಆಗಿದೆ. ಆದರೆ ಮೀಸಲಾತಿ ಮಾತ್ರ ಎಸ್‌ಸಿಗೆ ಬಂದಿಲ್ಲ. ಈ ವಾರ್ಡ್‌ನಲ್ಲಿ ಮುಸ್ಲಿಮರು ಮೊದಲ ಸ್ಥಾನದಲ್ಲಿದ್ದರೆ, ಎಸ್‌ಸಿ ಸಮುದಾಯ ಎರಡನೇ ಸ್ಥಾನದಲ್ಲಿದೆ. ಮುಸ್ಲಿಮರಿಗೆ ಅವಕಾಶ ಸಿಕ್ಕಿದೆ. ರೊಟೇಶನ್‌ ಮಾದರಿಯಲ್ಲಿ ಮೀಸಲಾತಿ ಪುನರ್‌ನಿಗದಿ ಮಾಡಿ ಎಂದು ಎಚ್‌. ಜಯಣ್ಣ ನ್ಯಾಯಾಲಯಕ್ಕೆ ಮೊರೆಹೋಗಿದ್ದರು. ಇಂತಹದ್ದೇ ವಿವಾದದಲ್ಲಿ ಮಂಗಳೂರಿನಲ್ಲಿಯೂ ನ್ಯಾಯಾಲಯಕ್ಕೆ ಹೋಗಲಾಗಿತ್ತು.

ನ್ಯಾಯಾಲಯವು ಈ ಆಕ್ಷೇಪ ಅರ್ಜಿಗಳನ್ನು ವಜಾ ಮಾಡಿ 2017ರ ಮೀಸಲಾತಿಯಂತೆ ಚುನಾವಣೆ ನಡೆಸುವಂತೆ ಸೂಚಿಸಿತು. ಅದರಂತೆ ಈಗ ಚುನಾವಣಾ ಆಯೋಗವು ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆಗಳು ಮತ್ತು 6 ನಗರಸಭೆ, ತಲಾ ಮೂರು ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ಜೋಗ–ಕಾರ್ಗಲ್‌ ಪ.ಪಂ.: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ–ಕಾರ್ಗಲ್‌ ಪಟ್ಟಣ ಪಂಚಾಯಿತಿಗೂ ನ.12ರಂದು ಚುನಾವಣೆ ನಡೆಯಲಿದೆ. ಈ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ಅವಧಿಯು ಡಿಸೆಂಬರ್‌ ಅಂತ್ಯಕ್ಕೆ ಮುಗಿಯುತ್ತಿತ್ತು.

*
2017ರ ಮೀಸಲಾತಿ ಅಧಿಸೂಚನೆಯಂತೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
-ಮಂಜುನಾಥ ಬಳ್ಳಾರಿ, ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ

ವೇಳಾ ಪಟ್ಟಿ

ಅ.24: ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸುವ ದಿನ.

ಅ.31: ನಾಮಪತ್ರ ಸಲ್ಲಿಸಲು ಕೊನೇ ದಿನ.

ನ.2: ನಾಮಪತ್ರ ಪರಿಶೀಲನೆ.

ನ.4: ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೇ ದಿನ.

ನ.12: ಮತದಾನ (ಬೆಳಿಗ್ಗೆ 7ರಿಂದ ಸಂಜೆ 5).

ನ.14: ಮತ ಎಣಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.