ಹೊನ್ನಾಳಿಯ ಮಠದಲ್ಲಿರುವ ಆನೆಯೊಂದಿಗೆ ಮಾಜಿ ಸಚಿವ ರೇಣುಕಾಚಾರ್ಯ ಮುಖಂಡ ಎಚ್.ಎ.ಉಮಾಪತಿ ಹಾಗೂ ಭಕ್ತರು
ಹೊನ್ನಾಳಿ: ಇಲ್ಲಿನ ಶ್ರೀಚನ್ನಪ್ಪಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಸೇರಿದ್ದ ಭಕ್ತರು ಉಡುಪಿಯ ಪುತ್ತಿಗೆ ಮಠಕ್ಕೆ ಸುಭದ್ರೆ ಆನೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ಉಡುಪಿ ಮಠದವರು ಬೇಡ ಎಂದ ಕಾರಣಕ್ಕೆ ₹8 ಲಕ್ಷಕ್ಕೂ ಅಧಿಕ ಶುಲ್ಕ ಭರಿಸಿ ಸಕ್ರೆಬೈಲ್‌ನಿಂದ ಆನೆಯನ್ನು ತಂದಿದ್ದೇವೆ. ಅದಕ್ಕೆ ಚಿಕಿತ್ಸೆ ಕೊಡಿಸಿ ಗುಣಮುಖವಾಗಿಸಿದ್ದೆವು. ನಾವೇ ಸುಭದ್ರೆ ಎಂದೂ ನಾಮಕರಣ ಮಾಡಿದ್ದೆವು ಎಂದು ಮಠದವರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ನಾವು ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದರಿಂದಾಗಿ 4 ಟನ್‌ನಷ್ಟು ತೂಕವಿದ್ದ ಆನೆ ಈಗ 6 ಟನ್‌ಗೂ ಅಧಿಕ ತೂಕ ಹೊಂದಿದೆ. ಇಲ್ಲಿನ ಭಕ್ತರಿಗೆ ಅದು ಚೆನ್ನಾಗಿ ಹೊಂದಿಕೊಂಡಿದೆ ಎಂದೂ ತಿಳಿಸಿದರು.
ಮಠದಲ್ಲಿ ನಡೆದ ಸಭೆಯಲ್ಲಿ ಭಕ್ತರಾದ ಎಚ್.ಎ. ಉಮಾಪತಿ, ಎಚ್.ಆರ್. ಶಿವಕುಮಾರ್, ಹೊಸಕೇರಿ ಸುರೇಶ್, ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡಿದ್ದರು. ಆನೆಯನ್ನು ಯಾವುದೇ ಕಾರಣಕ್ಕೂ ಕಳುಹಿಸಬಾರದು ಎಂಬ ತೀರ್ಮಾನವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು.
ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ದೂರವಾಣಿ ಕರೆ ಮಾಡಿದ್ದ ಮಾಜಿ ಸಚಿವ ರೇಣುಕಾಚಾರ್ಯ, ಆನೆಯನ್ನು ಬಿಟ್ಟುಕೊಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ಖಂಡ್ರೆಯವರು ಹೊನ್ನಾಳಿಯ ಮಠಕ್ಕೆ ಹೊಸದೊಂದು ಆನೆ ಕೊಡಿಸುವ ಭರವಸೆ ನೀಡಿದರು. ಆಗ ಭಕ್ತರು ಆ ಆನೆಯನ್ನು ಉಡುಪಿಯ ಮಠಕ್ಕೆ ಕಳಿಸಿಕೊಡುವಂತೆ ತಿಳಿಸಿದರು.
‘ಉಡುಪಿ ಮಠದ ಮೇಲೆ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ ಇದೆ. ಅವರ ಮನವೊಲಿಸಿ ನಾವು ಈ ಆನೆಯನ್ನು ಮಠದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಸಂಘರ್ಷ ಬೇಡ, ಸಾಮರಸ್ಯದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ’ ಎಂದು ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.