ADVERTISEMENT

ಎಂಜಿನಿಯರಿಂಗ್‌: 6 ತಿಂಗಳು ಇಂಟರ್ನ್‌ಶಿಪ್‌; ಪ್ರೊ.ಎಸ್‌. ವಿದ್ಯಾಶಂಕರ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:15 IST
Last Updated 18 ಡಿಸೆಂಬರ್ 2025, 5:15 IST
<div class="paragraphs"><p>ದಾವಣಗೆರೆಯ&nbsp;ಯುಬಿಡಿಟಿ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ಆಯೋಜಿಸಿದ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ್ ಅವರು ಬುಧವಾರ ಉದ್ಘಾಟಿಸಿದರು </p></div>

ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ಆಯೋಜಿಸಿದ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ್ ಅವರು ಬುಧವಾರ ಉದ್ಘಾಟಿಸಿದರು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ಎಂಜಿನಿಯರಿಂಗ್‌ ಸ್ನಾತಕ ಪದವಿಯ 8ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ 6 ತಿಂಗಳ ಇಂಟರ್ನ್‌ಶಿ‍ಪ್‌ ಕಡ್ಡಾಯಗೊಳಿಸಲಾಗಿದೆ. ಎಂಜಿನಿಯರಿಂಗ್‌ ಪದವೀಧರರಲ್ಲಿ ಉದ್ಯೋಗ ಹಿಡಿಯುವ ಸಾಮರ್ಥ್ಯವನ್ನು ರೂಪಿಸುವ ಉದ್ದೇಶದಿಂದ ಈ ಪಠ್ಯಕ್ರಮವನ್ನು ಪರಿಚಯಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಹೇಳಿದರು.

ADVERTISEMENT

ಇಲ್ಲಿನ ವಿಶ್ವವಿದ್ಯಾಲಯದ ಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ಆಯೋಜಿಸಿದ ಮೂರು ದಿನಗಳ 2ನೇ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 220 ಎಂಜಿನಿಯರಿಂಗ್‌ ಕಾಲೇಜುಗಳಿದ್ದು, 83,000 ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪದವೀಧರರಲ್ಲಿ ಉದ್ಯೋಗ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ 1,500ಕ್ಕೂ ಹೆಚ್ಚು ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಇಂಟರ್ನ್‌ಶಿಪ್‌ ಜನವರಿಯಿಂದ ಆರಂಭವಾಗಲಿದೆ’ ಎಂದರು.

‘ಸಂಶೋಧನೆಯ ಸಹಯೋಗ, ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ವಿನಿಮಯದಂತಹ ಕಾರ್ಯಕ್ರಮಗಳಿಗೆ ಜಪಾನ್‌ ದೇಶದ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಇಂತಹ ಒಡಂಬಡಿಕೆಗೆ ಸಹಿ ಹಾಕಿದ 15 ದಿನಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಉತ್ಸುಕರಾಗಿದ್ದೇವೆ’ ಎಂದು ನುಡಿದರು.

‘ಕ್ವಾಂಟಮ್‌, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ ಹಾಗೂ ಸೆಮಿ ಕಂಡೆಕ್ಟರ್‌ ಕ್ಷೇತ್ರಗಳು ನಿರ್ಣಾಯಕ ತಂತ್ರಜ್ಞಾನಗಳಾಗಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕ್ವಾಂಟಮ್‌ ತಂತ್ರಜ್ಞಾನದಲ್ಲಿ ಎಂ.ಟೆಕ್‌ ಪದವಿ ನೀಡುತ್ತಿರುವ ರಾಜ್ಯದ ಏಕೈಕ ಸರ್ಕಾರಿ ವಿಶ್ವವಿದ್ಯಾಲಯವಾಗಿದೆ. ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾಗಿ ಪ್ರತಿ ವರ್ಷ ಪಠ್ಯಕ್ರಮವನ್ನು ಪರಿಷ್ಕರಣೆ ಮಾಡುತ್ತಿದೆ’ ಎಂದು ವಿವರಿಸಿದರು.

‘ದೇಶದ ಜನಸಂಖ್ಯೆಯಲ್ಲಿ ಶೇ 60ರಷ್ಟು ಯುವಸಮೂಹವಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನರು ಉದ್ಯೋಗ ಮಾಡುವ ಸಾಮರ್ಥ್ಯವನ್ನು ಹೊಂದಿದ ದೇಶ ಭಾರತ. ವಿಶ್ವವಿದ್ಯಾಲಯವು ಇನ್ನೂ ಕೆಲವು ಕೋರ್ಸ್‌ಗಳನ್ನು ರೂಪಿಸಲು ಆಲೋಚಿಸುತ್ತಿದೆ’ ಎಂದರು.

ದೆಹಲಿಯಿಂದ ಆನ್‌ಲೈನ್‌ ಮೂಲಕ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಟಿ.ಜಿ. ಸೀತರಾಮ್‌, ‘ಎಂಜಿನಿಯರಿಂಗ್‌ ಶಿಕ್ಷಣವು ವಿಷಯ ಆಧಾರಿತ ಕಲಿಕೆಯಿಂದ ಸಾಮರ್ಥ್ಯ ಆಧಾರಿತ ಕಲಿಕೆಯತ್ತ ಹಾಗೂ ಶಿಸ್ತಿನಿಂದ ಬಹುಶಿಸ್ತೀಯ ಕಲಿಕೆಯತ್ತ ಸಾಗುವ ಅಗತ್ಯವಿದೆ. ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು ಬಹುಶಿಸ್ತೀಯ ಕಲಿಕೆಯತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಭಾರತದಲ್ಲಿ ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ. ದೇಶಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ಎಂಜಿನಿಯರುಗಳನ್ನು ನೀಡಿದೆ. ವಿಶ್ವದ ಹಲವು ದೇಶ ಹಾಗೂ ಕಾರ್ಪೊರೇಟ್‌ ಕಂಪನಿಗಳಲ್ಲಿ ಭಾರತೀಯ ಎಂಜಿನಿಯರುಗಳಿದ್ದಾರೆ. ಹಲವು ಕಾರ್ಪೊರೇಟ್‌ ಕಂಪನಿಗಳನ್ನು ಭಾರತೀಯ ಎಂಜಿನಿಯರುಗಳೇ ಮುನ್ನಡೆಸುತ್ತಿದ್ದಾರೆ. ಜಪಾನ್‌ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಯುಬಿಡಿಟಿ ಕಾಲೇಜು ಸಂಶೋಧನಾ ಕೇಂದ್ರ ತೆರೆಯಬಹುದು’ ಎಂದು ಹೇಳಿದರು.

ಕಗೋಷಿಮಾ ವಿಶ್ವವಿದ್ಯಾಲಯದ ಪ್ರೊ.ತೋಶಿನೊಬೊ ಯಮಗುಚಿ, ಪ್ರೊ.ಸತಾಯುಕಿ ಥನಕ, ಕುರುಮೆ ತಾಂತ್ರಿಕ ಸಂಸ್ಥೆಯ ಪ್ರೊ.ಸುಯಿಚಿ ಥೋರಿ, ಪ್ರಾಂಶುಪಾಲ ಡಿ.ಪಿ. ನಾಗರಾಜಪ್ಪ, ಸೂರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರೊ.ಕಟ್ಟ ವೆಂಕಟರಮಣ, ರವಿರಾಜ್‌ ಎಚ್‌. ಮೂಲಂಗಿ, ಮಂಜ ನಾಯ್ಕ, ಗಣೇಶ್‌ ಹಾಜರಿದ್ದರು.

‘ನೂತನ ಸಭಾಂಗಣ ಶೀಘ್ರ’

‘ಕಾಲೇಜು ಆವರಣದಲ್ಲಿ ಸಾವಿರ ವಿದ್ಯಾರ್ಥಿಗಳು ಆಸೀನರಾಗುವ ಸಾಮರ್ಥ್ಯದ ನೂತನ ಸಭಾಂಗಣವನ್ನು ಕೆಲವೇ ತಿಂಗಳಲ್ಲಿ ಸಜ್ಜುಗೊಳಿಸಲಾಗುವುದು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್‌. ವಿದ್ಯಾಶಂಕರ್‌ ಆಶ್ವಾಸನೆ ನೀಡಿದರು. ‘ಈ ಹೊಸ ಕಟ್ಟಡದ ಸಭಾಂಗಣ ಸಾಕಾಗುತ್ತಿಲ್ಲ. ಹಲವು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಆಸನಗಳಿಲ್ಲ. ಹಲವರು ನಿಂತುಕೊಂಡಿರುವುದನ್ನು ನೋಡಿ ಸಂಕಟವಾಗುತ್ತಿದೆ. ಈಗಾಗಲೇ ಕಾಲೇಜು ಆವರಣದಲ್ಲಿರುವ ಹಳೆಯ ಸಭಾಂಗಣವನ್ನು ನವೀಕರಿಸಲಾಗುವುದು. ಒಳಾಂಗಣ ವಿನ್ಯಾಸ ಮಾಡಿ ಎಲ್ಲರೂ ಕುಳಿತುಕೊಳ್ಳು ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.