ADVERTISEMENT

ದಾವಣಗೆರೆ: ಕೋವಿಡ್ ಸಂಕಷ್ಟದ ನಡುವೆಯೂ ಖರೀದಿಗೆ ಉತ್ಸಾಹ

ಆಯುಧಪೂಜೆ: ಹೂವು, ಹಣ್ಣುಗಳ ಬೆಲೆ ಏರಿಕೆ ಬಿಸಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 14:38 IST
Last Updated 24 ಅಕ್ಟೋಬರ್ 2020, 14:38 IST
ಆಯುಧ ಪೂಜೆ ಹಾಗೂ ವಿಜಯದಶಮಿ ನಿಮಿತ್ತ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಹೂವು–ಹಣ್ಣುಗಳ ಖರೀದಿಗಾಗಿ ಜನರು ಮುಗಿಬಿದ್ದಾಗ ಸಂಚಾರಕ್ಕೆ ಅಡಚಣೆಯಾಯಿತು.
ಆಯುಧ ಪೂಜೆ ಹಾಗೂ ವಿಜಯದಶಮಿ ನಿಮಿತ್ತ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಹೂವು–ಹಣ್ಣುಗಳ ಖರೀದಿಗಾಗಿ ಜನರು ಮುಗಿಬಿದ್ದಾಗ ಸಂಚಾರಕ್ಕೆ ಅಡಚಣೆಯಾಯಿತು.   

ದಾವಣಗೆರೆ: ಕೋವಿಡ್ ಸಂಕಷ್ಟದ ನಡುವೆಯೂ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬಗಳಿಗೆ ನಗರದಲ್ಲಿ ಖರೀದಿ ಜೋರಾಗಿತ್ತು.

ಆಯುಧಪೂಜೆ ಮುನ್ನಾ ದಿನವಾದ ಶನಿವಾರ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಕೆಎಸ್‌ಆರ್‌ಟಿಸಿ ಎದುರಿನ ಮಾರುಕಟ್ಟೆ, ಕೆ.ಆರ್‌. ಮಾರುಕಟ್ಟೆ, ಹೈಸ್ಕೂಲ್‌ ಮೈದಾನ, ಎಪಿಎಂಸಿ ಮಾರುಕಟ್ಟೆ, ಪ್ರವಾಸಿ ಮಂದಿರ ರಸ್ತೆ, ನಿಜಲಿಂಗಪ್ಪ ವೃತ್ತ, ಪಿ.ಬಿ.ರಸ್ತೆ ಸೇರಿ ಹಲವೆಡೆ ಬಾಳೆ ಕಂದು, ಬೂದು ಕುಂಬಳಕಾಯಿ, ಹೂವು, ಹಣ್ಣುಗಳ ಭರ್ಜರಿ ವ್ಯಾಪಾರ ನಡೆಯಿತು.

ಹೂವು, ಹಣ್ಣು, ತರಕಾರಿ, ದಿನಸಿಗಳನ್ನು ಖರೀದಿಸಿದರು. ಪ್ರಮುಖ ರಸ್ತೆಗಳಲ್ಲಿ ಆಲಂಕಾರಿಕ ವಸ್ತುಗಳು, ಪೂಜೆ ಸಾಮಗ್ರಿಗಳಿಗೆ ಪ್ರತ್ಯೇಕ ಅಂಗಡಿಗಳನ್ನು ತೆರೆಯಲಾಗಿತ್ತು. ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ, ಅತಿವೃಷ್ಟಿಯಿಂದಾಗಿ ಬೆಳೆ ನಾಶದಿಂದ ಅಗತ್ಯ ವಸ್ತುಗಳ ಬೆಲೆ ಏರಿದರೂ ಇದ್ದುದರಲ್ಲಿಯೇ ಹಬ್ಬ ಆಚರಿಸಿ ಸಂಭ್ರಮಿಸುವ ಜನರ ಉತ್ಸಾಹಕ್ಕೆ ಕೊರತೆ ಕಾಣಲಿಲ್ಲ.

ADVERTISEMENT

ಹಬ್ಬದ ಸಾಮಗ್ರಿ ಖರೀದಿಗೆ ಜನರು ಶನಿವಾರ ಪ್ರವಾಸಿ ಮಂದಿರ ರಸ್ತೆ ಬದಿ ಒಮ್ಮೆಲೆ ಧಾವಿಸಿದಾಗ ಸಂಚಾರಕ್ಕೆ ಅಡಚಣೆಯಾಯಿತು. ಪೊಲೀಸರು ಕೆಲವು ವ್ಯಾಪಾರಿಗಳಿಗೆ ರಸ್ತೆಯ ಬದಿಗೆ ಹೋಗುವಂತೆ ಎಚ್ಚರಿಕೆ ನೀಡಿ ಕಳುಹಿಸಿದರು.

ಖರೀದಿ ಭರಾಟೆಯಲ್ಲಿ ಕೆಲವರು ಅಂತರ ಮರೆತಿದ್ದರು. ವ್ಯಾಪಾರಸ್ಥರಲ್ಲಿ ಹಲವರು ಮಾಸ್ಕ್ ಹಾಕಿಕೊಂಡಿರಲಿಲ್ಲ. ಇನ್ನು ಕೆಲವರು ಕುತ್ತಿಗೆ, ಗಲ್ಲಕ್ಕೆ ಮಾಸ್ಕ್ ಹಾಕಿಕೊಂಡು ವ್ಯಾಪಾರದಲ್ಲಿ ತೊಡಗಿದ್ದರು.

ಆಯುಧಪೂಜೆಯಲ್ಲಿ ವಾಹನ, ಅಂಗಡಿ ಪೂಜೆ ಮಾಡುವವರು ಹೆಚ್ಚು. ಪೂಜಾ ಸಾಮಗ್ರಿ, ಆಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಹೊಸ ವಾಹನ ಖರೀದಿಸಿದವರು ಉತ್ಸುಕರಾಗಿ ಅಲಂಕಾರಿಕ ವಸ್ತುಗಳ ಅಂಗಡಿಯಲ್ಲಿ ಸೇರಿದ್ದರು.

ಬೆಲೆ ಏರಿಕೆ ಬಿಸಿ:ಆಯುಧಪೂಜೆಗೆ ಹೂವು, ಹಣ್ಣು, ಬೂದುಗುಂಬಳದ ಬೆಲೆ ಏರಿಕೆಯಾಗಿತ್ತು. ಮಾಮೂಲಿ ದಿನಗಳಲ್ಲಿ ಒಂದು ಸಣ್ಣ ಹೂವಿನ ಹಾರ ₹120 ಇದ್ದಿದ್ದು, ಶನಿವಾರ ₹300ಕ್ಕೆ ಮಾರಾಟವಾಯಿತು. ಸಣ್ಣ ಗುಲಾಬಿ 250 ಗ್ರಾಂಗೆ ₹50ರಿಂದ ₹100 ಏರಿಕೆಯಾಗಿತ್ತು. ಒಂದು ಮಾರು ಚೆಂಡು ಹೂವಿಗೆ ₹100, ಸೇವಂತಿಗೆ ₹100 ಹಾಗೂ ಮಲ್ಲಿಗೆ ಹೂವಿಗೆ ₹80 ಇತ್ತು.

ಬೂದುಕುಂಬಳ ಸಣ್ಣ ಗಾತ್ರದ್ದು ₹80ರಿಂದ ₹100, ಮಧ್ಯಮ ಗಾತ್ರದ್ದು ₹150ರಿಂದ ಹಾಗೂ ದೊಡ್ಡ ಗಾತ್ರದ್ದು ₹200ವರೆಗೂ ಮಾರಾಟವಾದವು. ಬಾಳೆ ಕಂದುಗಳ ಬೆಳೆ ಒಂದು ಜೋಡಿಗೆ ₹40ರಿಂದ ₹60ರವರೆಗೆ ಇತ್ತು. ನಿಂಬೆ ಹಣ್ಣು ಒಂದಕ್ಕೆ ₹5 ಇತ್ತು.

ಯಾವುದಕ್ಕೆ ಎಷ್ಟು ಬೆಲೆ (ಕೆಜಿಗಳಲ್ಲಿ)

ಸೇಬು: ₹80 (ಒಂದು ಡಜನ್‌ಗೆ)

ದ್ರಾಕ್ಷಿ: 120

ಸೇಬು: 150

ದಾಳಿಂಬೆ: 130

ಸಪೋಟ: 70

ಕಿತ್ತಳೆ: 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.