ADVERTISEMENT

ನಕಲಿ ಬಂಗಾರ ನೀಡಿ ವಂಚನೆ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:22 IST
Last Updated 28 ಜನವರಿ 2023, 6:22 IST

ದಾವಣಗೆರೆ: ಬಂಗಾರ ನೀಡುವುದಾಗಿ ನಂಬಿಸಿ ನಕಲಿ ಬಂಗಾರ ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು ₹ 8ಲಕ್ಷ ಹಾಗೂ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಗೆದ್ದಲಹಟ್ಟಿ ಗ್ರಾಮದ ನಿವಾಸಿ ಗಣೇಶ (28) ಬಂಧಿತ. ಪಿರ್ಯಾದಿ ಪ್ರಭಾಕರ ಅವರಿಗೆ ಸೇರಿದ ಮನೆಯ ಪಾಯ ತೆಗೆಯುತ್ತಿರುವ ವೇಳೆ ಬಂಗಾರ ಸಿಕ್ಕಿದೆ ಎಂದು ನಂಬಿಸಿದ ಆರೋಪಿ ಹಣ ತೆಗೆದುಕೊಂಡು ಬರುವಂತೆ ತಿಳಿಸಿದ್ದಾನೆ. ಹಣ ತೆಗೆದುಕೊಂಡು ಬಂದ ಕೂಡಲೇ ಪ್ರಭಾಕರ ಅವರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದ. ಆತನನ್ನು ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಂತೇಬೆನ್ನೂರು ಠಾಣೆ ವ್ಯಾಪ್ತಿಯ ಕಾಕನೂರು ಗ್ರಾಮದಲ್ಲಿ ಕಲ್ಲೇಶಪ್ಪರವರ ಟ್ರಾಕ್ಟರ್ ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ವಶಕ್ಕೆ ಪಡೆದು ₹3.50 ಲಕ್ಷ ಬೆಲೆಬಾಳುವ ಸೊನಾಲಿಕ ಟ್ರಾಕ್ಟರ್ ಮತ್ತು ಟೈಲರ್ ಅನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಸಂತೋಷ್ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಮಹೇಶ್ ಅವರ ನೇತೃತ್ವದಲ್ಲಿ ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಎಸ್.ಮೇಟಿ ಹಾಗೂ ಸಿಬ್ಬಂದಿ ಮೈಲಾರಪ್ಪ, ಎಎಸ್ಐ, ಉಮೇಶ ವಿಟಿ, ಕೊಟ್ರೇಶ, ರವಿ, ರುದ್ರೇಶ, ಸತೀಶ, ಪರುಶುರಾಮ, ಸಂತೋಷ, ದೊಡ್ಡೇಶ್, ಮಂಜುನಾಥ, ಪ್ರಹ್ಲಾದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.

ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ ಅವರು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

===

ಆ್ಯಪ್‌ ಅಪ್‌ಡೇಟ್ ಮಾಡಲು ಹೋಗಿ ₹ 4.15 ಲಕ್ಷ ಕಳೆದುಕೊಂಡ ವ್ಯಕ್ತಿ

ದಾವಣಗೆರೆ: ಯೊನೊ ಆ್ಯಪ್ ಅಪ್‌ಡೇಟ್ ಮಾಡಲು ಲಿಂಕ್ ಒತ್ತಿದ ನಗರದ ವ್ಯಕ್ತಿಯೊಬ್ಬರು ಈಚೆಗೆ ₹4.15 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ದೇವರಾಜ ಅರಸು ಬಡಾವಣೆ ನಿವಾಸಿ ವಿರೂಪಾಕ್ಷಪ್ಪ ವಂಚನೆಗೆ ಒಳಗಾದವರು. ಪಿಜೆ ಬಡಾವಣೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ವಿರೂಪಾಕ್ಷಪ್ಪ ಉಳಿತಾಯ ಖಾತೆ ಹೊಂದಿದ್ದು, ಎಸ್‌ಬಿಐ ಯೋನೊ ಆ್ಯಪ್‌ನಲ್ಲಿ ಪ್ಯಾನ್ ಅಪ್‌ಡೇಟ್ ಮಾಡಲು ಲಿಂಕ್ ಒತ್ತಿ' ಎಂದು ವಿರೂಪಾಕ್ಷಪ್ಪ ಅವರ ಮೊಬೈಲ್‌ಗೆ ಎಸ್‌ಎಂಎಸ್ ಬಂದಿತ್ತು. ಅದನ್ನು ಒತ್ತಿದಾಗ ಹಣ ಕಳೆದುಕೊಂಡಿದ್ದಾರೆ.

ಮರುದಿನ ಮಧ್ಯಾಹ್ನ ಅವರ ಖಾತೆಯಿಂದ ಹಣ ಕಡಿತಗೊಂಡ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಅವರ ಖಾತೆಯಿಂದ ಕ್ರಮವಾಗಿ ವಿವಿಧ ಹಂತಗಳಲ್ಲಿ ₹4.15 ಲಕ್ಷ ಕಡಿತಗೊಂಡಿದೆ.

ಲಿಂಕ್‌ಗಳನ್ನು ಒತ್ತುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.