
ದಾವಣಗೆರೆ: ‘ಕೃಷಿ, ಕೂಲಿ ಕಾರ್ಮಿಕರು ಒಂದಾದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದು ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಹೊಸಳ್ಳಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿನ ಈರಲಮ್ಮ ದೇವಸ್ಥಾನದಲ್ಲಿ ಭಾನುವಾರ ಕಿಸಾನ್ ಸಭಾ ಮತ್ತು ಕೃಷಿ ಕೂಲಿ ಕಾರ್ಮಿಕರ ಸಂಘಟನೆಯಿಂದ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದುಡಿಯುವ ಮಹಿಳೆಯರು, ರೈತ ಮತ್ತು ಕೃಷಿ ಕಾರ್ಮಿಕರು ಒಟ್ಟುಗೂಡಿ ಸೌಲಭ್ಯಗಳನ್ನು ಪಡೆಯಬೇಕು. ಹೋರಾಟದ ಮೂಲಕ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದರು.
‘ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ರೈತ ಕಾರ್ಮಿಕರು, ಮಹಿಳೆಯರು ಬೀದಿ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು’ ಎಂದು ಪ್ರಮುಖರಾದ ಕುಸುಮಾ ಹೇಳಿದರು.
‘ಎಂಎಸ್‌ಪಿ ದರದಲ್ಲಿ ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಸರ್ಕಾರವೇ ಖರೀದಿಸಬೇಕು. ಕೂಲಿಕಾರರಿಗೆ ದಿನವೊಂದಕ್ಕೆ ಕನಿಷ್ಠ ₹600 ಕೂಲಿ ನಿಗದಿ ಪಡಿಸಬೇಕು. ಮಹಿಳಾ ಕಾರ್ಮಿಕರಿಗೆ 2 ಮಕ್ಕಳಿಗೆ ಹೆರಿಗೆ ಭತ್ಯೆ ಸಹಾಯಧನ ₹1 ಲಕ್ಷ ನೀಡಬೇಕು. ಸಣ್ಣ ರೈತ ಮತ್ತು ಕೃಷಿ ಕಾರ್ಮಿಕರಿಗೆ ನಿವೃತ್ತಿ ವೇತನ ಘೋಷಣೆ ಮಾಡಬೇಕು. ರಾಜ್ಯದಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕು’ ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ್ ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು ಮಾತನಾಡಿದರು. ರೈತ ಮುಖಂಡ ಲೋಕಿಕೆರೆ ರುದ್ರೇಶ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಲೋಕಿಕೆರೆ ಗ್ರಾಮ ಘಟಕದ ಮುಖ್ಯ ಸಂಚಾಲಕರನ್ನಾಗಿ ರುದ್ರೇಶ್ ಅವರನ್ನು ಆಯ್ಕೆ ಮಾಡಲಾಯಿತು. ಸಂಚಾಲನ ಸಮಿತಿಗೆ ಶಿವರಾಜ್, ಅಜಯ್, ಅಂಜಿನಪ್ಪ, ಚಂದ್ರಪ್ಪ, ಅಂಜಿನಪ್ಪ, ಪವಿತ್ರಾ, ಶಾಂತಕುಮಾರಿ, ಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಬಾನಪ್ಪ ಹಾಗೂ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.