ಕಡರನಾಯ್ಕನಹಳ್ಳಿ: ಕೆಸರು ಗದ್ದೆಯಂತಾಗಿರುವ ಕೊಕ್ಕನೂರು-ಕಡರನಾಯ್ಕನಹಳ್ಳಿ ರಸ್ತೆ ಕಾಮಗಾರಿ ಐದು ವರ್ಷಗಳಾದರೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದ ರೈತರು ಮಂಗಳವಾರ ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ಮೊಳಕಾಲುದ್ದದ ಗುಂಡಿಗಳು ನಿರ್ಮಾಣವಾಗಿವೆ. ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ನಡೆದಾಡುವ ಪರಿಸ್ಥಿತಿ ಎದುರಾಗಿದೆ. ಬೈಕ್‌ನಲ್ಲಿ ಗೊಬ್ಬರ ಸಾಗಿಸಲು ಪರದಾಡಬೇಕಿದೆ. ಟ್ರ್ಯಾಕ್ಟರ್ ಸಾಗಲೂ ಸಾಧ್ಯವಾಗದಷ್ಟು ರಸ್ತೆ ಹಾಳಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಹೊಳೆಸಿರಿಗೆರೆ, ಭಾನುವಳ್ಳಿ, ಕಡರನಾಯ್ಕನಹಳ್ಳಿ, ಪಾಳ್ಯ ಗ್ರಾಮಗಳ ಜನಗಳು ನಿತ್ಯ ಬಳಸುವ ಈ ಮಾರ್ಗವು ಹೊನ್ನಾಳಿ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸ್ಮಾರ್ಟ್ ಸಿಟಿ, ಹೈಟೆಕ್ ಸಿಟಿ ಯೋಜನೆಗಳಿಗೆ ಸಿಗುವ ಅನುದಾನ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಏಕೆ ಸಿಗುವುದಿಲ್ಲ ಎಂದು ಪ್ರಶ್ನಿಸಿರುವ ಪ್ರತಿಭಟನಕಾರರು, ಗ್ರಾಮೀಣ ಜನ ಮತ ಹಾಕಲಷ್ಟೇ ಸೀಮಿತ ಎಂದು ಜನಪ್ರತಿನಿಧಿಗಳು ಭಾವಿಸಿದಂತಿದೆ ಎಂದರು.
ಕೂಡಲೇ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರೈತರಾದ ನಾಗಪ್ಪ ಹುಳ್ಳೇರ, ಮಾರುತಿ ಕಳ್ಳೇರ, ಸಜ್ಜೇರ ಬೀರೇಶ್, ಕೋಳೇರ ಬಸವರಾಜ್, ಅನಸೂಯಮ್ಮ ಕರಿದ್ಯಾಮಣ್ಣರ, ಶಿವಕುಮಾರ್, ಜಿ. ಮಂಜುನಾಥ್, ಜಿ. ಹನುಮಗೌಡ ತಿಳಿಸಿದರು.
ಐದು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನಾಪತ್ತೆಯಾದ ಗುತ್ತಿಗೆದಾರನ ಬಗ್ಗೆ ಸರ್ಕಾರ ಏನು ಕ್ರಮ ವಹಿಸಿದೆ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತರಿಸಬೇಕು-ಸಿ.ರಮೇಶ್, ರೈತ ಜಿ.ಟಿ. ಕಟ್ಟಿ ಗ್ರಾಮ
ಗುತ್ತಿಗೆದಾರನಿಗೆ ಇಲಾಖೆಯಿಂದ ಹಲವು ಬಾರಿ ತಿಳಿಸಲಾಗಿದೆ. ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು-ಎಚ್.ವಿ. ಮರಿಸ್ವಾಮಿ, ಎಇಇ ಲೋಕೋಪಯೋಗಿ ಇಲಾಖೆ ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.