
ತ್ಯಾವಣಿಗೆ: ಭದ್ರಾ ಉಪವಿಭಾಗದ ನಾಲೆಗಳಲ್ಲಿ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ಮತ್ತಿ, ತಿಮ್ಮಪ್ಪ ಕ್ಯಾಂಪ್, ಗೋಣಿವಾಡ, ದಾಸಪ್ಪ ನಗರ, ಕಾರಿಗನೂರು ಕ್ಯಾಂಪ್, ಆಂಜನೇಯ ನಗರ, ಕುಕ್ಕವಾಡ, ಕೊಳೇನಹಳ್ಳಿ ಗ್ರಾಮದ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮೀಪದ ಕುಕ್ಕವಾಡ ಗ್ರಾಮದ ಕಬ್ಬು ಬೆಳೆಗಾರರ ಸಂಘದ ಕಚೇರಿಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ, ‘ಭದ್ರಾ ಡ್ಯಾಂನಿಂದ ನೀರು ಬಿಟ್ಟು 38 ದಿನ ಕಳೆದರೂ, ನಮಗೆ ಸಮರ್ಪಕವಾಗಿ ತಲುಪುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಬಿ. ಚನ್ನಬಸಪ್ಪ ಹೇಳಿದರು.
‘ನೀರು ಬರುತ್ತಿಲ್ಲ ಎಂದು ಕರೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತೀರಿ. ನಮಗೆ ನೀರು ಸಿಗದೆ ಮೂರು ತಿಂಗಳಾಯಿತು’ ಎಂದು ರೈತ ಮಲ್ಲೇಶಪ್ಪ ದೂರಿದರು.
‘ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇದ್ದರೆ ಕೊನೆ ಭಾಗದ ರೈತರಿಗೆ ನೀರು ಹರಿಸಬಹುದು. ಅಧಿಕಾರಿಗಳು ಮೊದಲೇ ಕಾಲುವೆಗಳ ಸ್ಥಿತಿ ಪರಿಶೀಲಿಸಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ, ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.
ಪೊಲೀಸ್ ಇಲಾಖೆ, ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಅಕ್ರಮ ಪಂಪ್‌ಸೆಟ್ ತೆರವು ಮಾಡಬೇಕು. ರೈತರಿಂದ ಅಹಿತಕರ ಘಟನೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು.
‘ಬುಧವಾರದಿಂದ ನಾಲ್ಕು ದಿನ ರಾತ್ರಿ, ಹಗಲು ಕಾಲುವೆ ತುಂಬಾ ನೀರು ಹರಿಸಲಾಗುವುದು’ ಎಂದು ಎಇಇ ರಮೇಶ್ ಭರವಸೆ ನೀಡಿದರು.
ಸಹಾಯಕ ಅಧಿಕಾರಿ ಮಧು, ಎಂಜಿನಿಯರ್ ತಿಪ್ಪೇಶ್, ರಘುವೀರ್, ಸತೀಶ್ ಕೊಳೇನಹಳ್ಳಿ, ಮಲ್ಲೇಶಪ್ಪ, ಕೃಷಿಕ ಮಂಜುನಾಥ್, ಗಂಗಾಧರ್, ವಕೀಲ ಹನುಮಂತಪ್ಪ, ಎನ್. ಎಂ. ಮಂಜುನಾಥ್, ಕೆ.ಎನ್. ಮಂಜುನಾಥ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.