ADVERTISEMENT

ಬಸವಾಪಟ್ಟಣದಲ್ಲಿ ಅಡಿಕೆಗೆ ಮನಸೋತ ರೈತರು; ಕಡಿಮೆಯಾಗುತ್ತಿರುವ ಭತ್ತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 6:52 IST
Last Updated 6 ಆಗಸ್ಟ್ 2025, 6:52 IST
ಬಸವಾಪಟ್ಟಣ ಹೋಬಳಿಯಲ್ಲಿ ಮಂಗಳವಾರ ರೈತರು ಭತ್ತದ ಸಸಿ ನಾಟಿಗೆ ಸಿದ್ಧತೆ ನಡೆಸಿರುವುದು
ಬಸವಾಪಟ್ಟಣ ಹೋಬಳಿಯಲ್ಲಿ ಮಂಗಳವಾರ ರೈತರು ಭತ್ತದ ಸಸಿ ನಾಟಿಗೆ ಸಿದ್ಧತೆ ನಡೆಸಿರುವುದು   

ಬಸವಾಪಟ್ಟಣ: ವರ್ಷ ವರ್ಷವೂ ಅಡಿಕೆ ದರ ಹೆಚ್ಚುತ್ತಿದ್ದು, ರೈತರು ಅಡಿಕೆ ಬೆಳೆಗೆ ಮನಸೋತಿರುವುದರಿಂದ ಈ ಭಾಗದ ಭತ್ತ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಈ ವರ್ಷದ ಮಳೆಗಾಲದ ಭತ್ತದ ನಾಟಿ 2,000 ಹೆಕ್ಟೇರ್‌ಗೆ ಇಳಿಕೆಯಾಗಿದೆ.

10 ವರ್ಷದ ಹಿಂದೆ ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 4,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಅದು ಈಗ ಅರ್ಧ ಪ್ರಮಾಣಕ್ಕೆ ಇಳಿದಿದೆ. ಹಿಂದೆ ಕೇವಲ 4,000 ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಅಡಿಕೆ ಈಗ 18 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಈಗ ಅಂದಾಜು 40,000 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇದಕ್ಕೆ ಅಡಿಕೆ ಕ್ವಿಂಟಲ್‌ಗೆ ₹50,000ಕ್ಕೆ ಏರಿಕೆಯಾಗಿರುವುದು ಮುಖ್ಯ ಕಾರಣ ಎನ್ನುತ್ತಾರೆ ರೈತ ಜಿ.ಎಂ.ಚನ್ನಬಸಪ್ಪ.

ಭದ್ರಾ ಮತ್ತು ಸೂಳೆಕೆರೆ ಅಚ್ಚುಕಟ್ಟಿನಲ್ಲಿ ಭತ್ತ ಮುಖ್ಯ ಬೆಳೆಯಾಗಿತ್ತು. ಆದರೆ, ಹಲವು ವರ್ಷಗಳಿಂದ ಭತ್ತದ ಉತ್ಪಾದನಾ ವೆಚ್ಚ ದಿನ ದಿನಕ್ಕೆ ಏರಿಕೆ ಯಾಗುತ್ತಿದ್ದು, ಭತ್ತದ ದರ ಮಾತ್ರ ಕ್ವಿಂಟಲ್‌ಗೆ ₹ 2,000 ದಾಟುತ್ತಿಲ್ಲ. ಅಲ್ಲದೇ ಭತ್ತ ಬೆಳೆಯಲು ಹೆಚ್ಚಿನ ಕೂಲಿಕಾರರು ಮತ್ತು ಬಂಡವಾಳ ಅಗತ್ಯವಿದ್ದು, ಒಮ್ಮೆ ಬಂಡವಾಳ ಹಾಕಿ ಅಡಿಕೆ ಸಸಿಗಳನ್ನು ನೆಟ್ಟರೆ ಆರೇಳು ವರ್ಷಗಳಲ್ಲಿ ಅಡಿಕೆ ಬೆಳೆ ಕೈಗೆ ಬಂದು ನಮಗೆ ಸಾಕಷ್ಟು ಲಾಭವಾಗುತ್ತದೆ ಎಂಬುದು ರೈತರ ಲೆಕ್ಕಾಚಾರ ಎಂದು ಕಣಿವೆಬಿಳಚಿಯ ರೈತ ಎಸ್‌.ಅಣ್ಣೋಜಿರಾವ್‌ ಹೇಳಿದ್ದಾರೆ.

ADVERTISEMENT

ಹೆಚ್ಚು ಲಾಭದ ಗುರಿಯಿಂದ ಎಲ್ಲಾ ರೈತರೂ ಅಡಿಕೆ ಬೆಳೆಯಲಾರಂಭಿಸಿದರೆ ಮುಖ್ಯ ಆಹಾರ ಧಾನ್ಯವಾದ ಭತ್ತದ ಕೊರತೆ ಎದುರಾಗಿ ಮತ್ತೊಂದು ರಾಜ್ಯ ಅಥವಾ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸಮಸ್ಯೆ ನೈಜವಾಗಿ ಕಾಡುತ್ತದೆ. ಅಲ್ಲದೇ ಅಕ್ಕಿಯ ಬೆಲೆಯೂ ನಿರೀಕ್ಷೆ ಮೀರಿ ಹೆಚ್ಚಾಗುವುದರಿಂದ ಸರ್ಕಾರ ಭತ್ತದ ಬೆಳೆಗೆ ಸಾಕಷ್ಟು ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ಬುದ್ಧಿ ಜೀವಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.