ADVERTISEMENT

ವಧು–ವರರ ಕಡೆಯವರು, ಕಲ್ಯಾಣಮಂಟಪ ಮಾಲೀಕರಿಗೆ ದಂಡ

ಎಸಿ, ತಹಶೀಲ್ದಾರ್‌, ಪಾಲಿಕೆ ಆಯುಕ್ತರಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:16 IST
Last Updated 19 ಏಪ್ರಿಲ್ 2021, 4:16 IST
ದಾವಣಗೆರೆಯ ವಿವಿಧ ಕಲ್ಯಾಣ ಮಂಟಪಗಳಿಗೆ ಭಾನುವಾರ ರಾತ್ರಿ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್‌ ಗಿರೀಶ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಪರಿಶೀಲನೆ ನಡೆಸಿದರು
ದಾವಣಗೆರೆಯ ವಿವಿಧ ಕಲ್ಯಾಣ ಮಂಟಪಗಳಿಗೆ ಭಾನುವಾರ ರಾತ್ರಿ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್‌ ಗಿರೀಶ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಪರಿಶೀಲನೆ ನಡೆಸಿದರು   

ದಾವಣಗೆರೆ: ವಿವಿಧ ಕಲ್ಯಾಣ ಮಂಟಪಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದ ಕಲ್ಯಾಣ ಮಂಟಪದ ಮಾಲೀಕರಿಗೆ, ವಧು–ವರರ ಕಡೆಯವರಿಗೆ ಭಾನುವಾರ ದಂಡ ವಿಧಿಸಲಾಗಿದೆ.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್‌ ಗಿರೀಶ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಭಾನುವಾರ ರಾತ್ರಿ ವಿವಿಧ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಮದುವೆ ಕಾರ್ಯಕ್ರಮಗಳಿದ್ದ ಸರ್ಕಾರಿ ನೌಕರರ ಭವನ, ಬಕ್ಕೇಶ್ವರ ಕಲ್ಯಾಣ ಮಂಟಪ, ಬಾಪೂಜಿ ಸಮುದಾಯ ಭವನ, ರಾಜನಹಳ್ಳಿ ಸಮುದಾಯ ಭವನ, ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪಗಳಲ್ಲಿ ಪರಿಶೀಲನೆ ನಡೆಸಿದರು. ಮಾಸ್ಕ್‌ ಹಾಕದೇ ಇರುವವರಿಗೆ ತಲಾ ₹ 250ರಂತೆ ದಂಡ ವಿಧಿಸಿದರು.

ADVERTISEMENT

ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಅಡುಗೆಯವರು ಸೇರಿ ಸಿಬ್ಬಂದಿ ಮಾಸ್ಕ್ ಧರಿಸಿರಲಿಲ್ಲ. ಅಂತರ ಕಾಯ್ದುಕೊಂಡಿರಲಿಲ್ಲ. ಕೊರೊನಾ ಮುಂಜಾಗ್ರತಾ ನಿಯಮಗಳನ್ನು ಪಾಲಿಸಿರಲಿಲ್ಲ. ಹಾಗಾಗಿ ಕಲ್ಯಾಣ ಮಂಟಪದ ಮಾಲೀಕರಿಗೆ ₹ 10 ಸಾವಿರ ದಂಡ ವಿಧಿಸಲಾಯಿತು.

ಬಾಪೂಜಿ ಸಮುದಾಯ ಭವನದಲ್ಲಿ ನಿಗದಿತ ಸಂಖ್ಯೆ ಮೀರಿ ಜನರು ಮದುವೆಯಲ್ಲಿ ಭಾಗವಹಿಸಿದ್ದರು. ಅದಕ್ಕಾಗಿ ವಧು ಮತ್ತು ವರನ ಕಡೆಯವರಿಗೆ ತಲಾ ₹ 10 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು. ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಒಂದು ಕುರ್ಚಿ ಬಿಟ್ಟು ಒಂದು ಕುರ್ಚಿಗೆ ಹಗ್ಗ ಕಟ್ಟಿ ಕುಳಿತುಕೊಳ್ಳದಂತೆ ವ್ಯವಸ್ಥೆ ಮಾಡಿ ಅಂತರ ಕಾಪಾಡಿರುವುದು ಗಮನ ಸೆಳೆಯಿತು.

ಎಲ್ಲಾ ಕಲ್ಯಾಣ ಮಂಟಪಗಳು ಕೋವಿಡ್ ನಿಯಮ ಪಾಲಿಸಬೇಕು ಎಂದು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಪಾಲಿಕೆ ಆಯುಕ್ತರು ಪ್ರತ್ಯೇಕವಾಗಿ ನೋಟಿಸ್‌ ಜಾರಿ ಮಾಡಿದರು. ಸಿಪಿಐ ಗುರುಬಸವರಾಜ್‌ ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.