ದಾವಣಗೆರೆ: ಸಿರಿಧಾನ್ಯಗಳ ಮೌಲ್ಯವರ್ಧನೆಯ ಪರಿಶ್ರಮದ ಫಲವಾಗಿ ರೂಪುಗೊಂಡ ‘ತಪಸ್ವಿ’ ಎಂಬ ಕುಕ್ಕೀಸ್ ಕಿರು ಉದ್ದಿಮೆಗೆ ಸೌರ‘ಶಕ್ತಿ’ ಜೊತೆಯಾಗಿದೆ. ಸಂಪೂರ್ಣ ಸೌರಶಕ್ತಿಯನ್ನು ಅವಲಂಬಿಸಿದ ಜಿಲ್ಲೆಯ ಮೊದಲ ಸಿರಿಧಾನ್ಯ ಉತ್ಪನ್ನಗಳ ಘಟಕ ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕೂಲಂಬಿಯ ಆರ್.ಎಸ್. ರಘು ‘ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (ಪಿಎಂಎಫ್‌ಎಂಇ) ಅಡಿಯಲ್ಲಿ ಸ್ಥಾಪಿಸಿದ ‘ಆರೋಗ್ಯ ಫುಡ್ ಮತ್ತು ಬೆವರೇಜಸ್ ಪ್ರಾಡಕ್ಟ್ಸ್’ ನವೋದ್ಯಮಕ್ಕೆ (ಸ್ಟಾರ್ಟ್‌ಅಪ್) ‘ಸೆಲ್ಕೊ’ ಫೌಂಡೇಷನ್ ನೆರವಾಗಿದೆ. ₹ 7.5 ಲಕ್ಷ ವೆಚ್ಚದಲ್ಲಿ ಸೌರ ವಿದ್ಯುತ್ ಘಟಕವನ್ನು ನಿರ್ಮಿಸಿಕೊಟ್ಟಿದೆ.
ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಸ್ಥಾಪಿಸಿದ ರಘು ಅವರಿಗೆ ವಿದ್ಯುತ್ ಮೇಲಿನ ಅವಲಂಬನೆ ಸಮಸ್ಯೆಯಾಗಿ ಪರಿಣಮಿಸಿತ್ತು. ಪ್ರತಿ ತಿಂಗಳು ₹ 4 ಸಾವಿರಕ್ಕೂ ಅಧಿಕ ಶುಲ್ಕ ಪಾವತಿಸುತ್ತಿದ್ದರೂ ವಿದ್ಯುತ್ ಪೂರೈಕೆಯಲ್ಲಿ ಎದುರಾಗುತ್ತಿದ್ದ ಅಡಚಣೆ ನಿವಾರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಘಟಕ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಉಂಟಾಗುತ್ತಿದ್ದ ವಿದ್ಯುತ್ ವ್ಯತ್ಯಯ ಉದ್ದಿಮೆಯ ಮೇಲೆ ಪರಿಣಾಮ ಬೀರಿತ್ತು. ಸೌರ ವಿದ್ಯುತ್ ಪಡೆದ ಬಳಿಕ ಈ ಸಮಸ್ಯೆಗಳು ದೂರವಾಗಿವೆ.
‘ಹಳ್ಳಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯ. ಹಗಲು ಹೊತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ವಿದ್ಯುತ್ ಕೊರತೆಯಿಂದ ಘಟಕವನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗುತ್ತಿತ್ತು. ಸೌರ ವಿದ್ಯುತ್ ಪ್ಯಾನಲ್‌ಗಳನ್ನು ಅಳವಡಿಸಿಕೊಂಡ ಬಳಿಕ ನಿತ್ಯ ಸರಾಸರಿ 8 ರಿಂದ 10 ಗಂಟೆ ಘಟಕ ಕಾರ್ಯನಿರ್ವಹಿಸುತ್ತಿದೆ’ ಎನ್ನುತ್ತಾರೆ ರಘು.
ಸಿರಿಧಾನ್ಯ ಉತ್ಪನ್ನಗಳ ಘಟಕದಲ್ಲಿ 158 ಡಿಗ್ರಿ ಉಷ್ಣಾಂಶದಲ್ಲಿ ಕುಕ್ಕೀಸ್ ಒಣಗಿಸುವ ಯಂತ್ರವಿದೆ. ಸಿರಿಧಾನ್ಯವನ್ನು ಹಿಟ್ಟಾಗಿ ಪರಿವರ್ತಿಸುವುದರಿಂದ ಹಿಡಿದು ಕುಕ್ಕೀಸ್ ರೂಪ ತಳೆದು ಹೊರಬರುವ ವಿವಿಧ ಹಂತದವರೆಗೆ ಹಲವು ಯಂತ್ರಗಳು ಸೌರ ವಿದ್ಯುತ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಸಿರಿಧಾನ್ಯದ ಮೌಲ್ಯವರ್ಧನೆಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ. ನಿತ್ಯ 10,800 ಕುಕ್ಕಿಸ್ ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ.
ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಘು ಅವರಿಗೆ ಸಿರಿಧಾನ್ಯದ ಮೇಲೆ ಆಸಕ್ತಿ ಹುಟ್ಟಿದ್ದು ತಾಯಿ ಬಸಮ್ಮ ತಯಾರಿಸುತ್ತಿದ್ದ ಖಾದ್ಯಗಳಿಂದ. ಸಿರಿಧಾನ್ಯಗಳ ಮೌಲ್ಯವರ್ಧನೆಗಾಗಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದಿದ್ದಾರೆ. 2021ರಲ್ಲಿ ಸ್ಥಾಪನೆಯಾದ ಈ ಕಿರು ಉದ್ದಿಮೆಯಲ್ಲಿ ತಯಾರಾದ ‘ಕುಕ್ಕೀಸ್’ ಹೊರರಾಜ್ಯಕ್ಕೂ ಮಾರುಕಟ್ಟೆ ವಿಸ್ತರಿಸಿಕೊಂಡಿದೆ.
‘ಕುಕ್ಕೀಸ್’ ರೂಪದಲ್ಲಿ ಸಿರಿಧಾನ್ಯ
ಪೌಷ್ಟಿಕ ಆಹಾರವಾಗಿರುವ ಸಿರಿಧಾನ್ಯದಲ್ಲಿ ‘ಕುಕ್ಕೀಸ್’ ತಯಾರಿಸಿ ಯಶಸ್ಸು ಪಡೆದವರು ರಘು. ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಇವರಿಗೆ ಬೆನ್ನೆಲುಬಾಗಿ ನಿಂತಿವೆ.
ನವಣೆ, ಹಾರಕ, ಸಜ್ಜೆ, ರಾಗಿ ಹಾಗೂ ಸಾಮೆ ಬಳಸಿ ‘ಕುಕ್ಕೀಸ್’ಗಳನ್ನು ತಯಾರಿಸಲಾಗುತ್ತಿದೆ. ನಂದಿನ ತುಪ್ಪ, ಹಾಲಿನ ಪುಡಿ ಹಾಗೂ ಬೆಲ್ಲವನ್ನು ಬಳಸಲಾಗುತ್ತದೆ. ನವಣೆ ‘ಕುಕ್ಕೀಸ್’ಗೆ ಹೆಚ್ಚು ಬೇಡಿಕೆ ಇದೆ.
10 ಗ್ರಾಂ ತೂಕದ ಕುಕ್ಕೀಸ್‌ಗೆ ₹ 5 ಬೆಲೆ ನಿಗದಿಪಡಿಸಲಾಗಿದೆ. ಬ್ರಾಂಡೆಡ್ ಕಂಪನಿಗಳ ಮಾದರಿಯಲ್ಲಿ ಪ್ಯಾಕಿಂಗ್ ಮಾಡಿ ₹ 10ಕ್ಕೆ ಕುಕ್ಕೀಸ್ ಪ್ಯಾಕೆಟ್ ಲಭ್ಯವಾಗುವಂತೆ ಮಾರುಕಟ್ಟೆಗೆ ಬಿಡಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ‘ಪಿಎಂಶ್ರೀ’ ಸೌಲಭ್ಯ ಪಡೆದ ಎರಡು ಸರ್ಕಾರಿ ಶಾಲೆಗಳಿಗೆ ಈ ಕುಕ್ಕೀಸ್‌ಗಳು ಪೂರೈಕೆ ಆಗುತ್ತಿವೆ. ಬೆಂಗಳೂರು, ಮೈಸೂರು ಸೇರಿ ರಾಜ್ಯದ ಹಲವೆಡೆಯಿಂದ ಬರುವ ಬೇಡಿಕೆಗೆ ಅನುಗುಣವಾಗಿ ಕುಕ್ಕೀಸ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ.
‘ಕುಕ್ಕೀಸ್’ ತಯಾರಿಕಾ ಘಟಕದಲ್ಲಿ 6 ಜನರು ಕೆಲಸ ಮಾಡುತ್ತಿದ್ದೇವೆ. ಸಿರಿಧಾನ್ಯದಿಂದ ಕುರ್‌ಕುರೆ ಚಕ್ಕುಲಿ ಹಾಗೂ ಖಾರ ತಯಾರಿಸುವ ಸಿದ್ಧತೆಯಲ್ಲಿ ತೊಡಗಿದ್ದೇನೆ.ಆರ್.ಎಸ್.ರಘು, ಉದ್ದಿಮೆ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.