ಸಂತೇಬೆನ್ನೂರು: ಸೂಳೆಕೆರೆ ಹಿನ್ನೀರಿನ ತಟದಲ್ಲಿರುವ ಜಮೀನು, ತೋಟಗಳಲ್ಲಿ ರೈತರು ಅವೈಜ್ಞಾನಿಕವಾಗಿ ಬದುಗಳನ್ನು ನಿರ್ಮಿಸಿಕೊಂಡ ಪರಿಣಾಮ ಕೊಂಡದಹಳ್ಳಿಯ ಅಂದಾಜು 125 ಎಕರೆಯಲ್ಲಿ ಬೆಳೆಯಲಾಗಿರುವ ಅಡಿಕೆ ತೋಟ, ಮೆಕ್ಕೆಜೋಳದ ಬೆಳೆ ಜಲಾವೃತಗೊಂಡಿವೆ.
ಹಿರೇಹಳ್ಳ ಹಾಗೂ ತುಮರಿ ಹಳ್ಳಗಳು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತವೆ. ಇವು ಸೂಳೆಕೆರೆ ಸೇರುವ ಮುನ್ನ ಜಲರಾಶಿ ಅಂಚಿನ ಜಮೀನುಗಳ ಮೂಲಕ ಹಾದು ಹೋಗುತ್ತವೆ. ಈ ಎರಡು ಹಳ್ಳಗಳ ನಡುವಿನ ಜಮೀನುಗಳಲ್ಲಿ ಸದ್ಯ ನೀರು ಮೊಣಕಾಲವರೆಗೆ ನಿಂತಿದೆ.
ಇನ್ನೂ ಕೆಲವು ಜಮೀನುಗಳಲ್ಲಿ 5ರಿಂದ 6 ಅಡಿ ನೀರು ನಿಂತಿದೆ. ಇದರಲ್ಲಿ ಅಡಿಕೆ ತೋಟಗಳೇ ಹೆಚ್ಚು. ಮೆಕ್ಕೆಜೋಳದ ಬೆಳೆಯಂತೂ ಮುಳುಗಿ ಹೋಗಿದೆ.
ಹಳ್ಳಗಳ ತಟದ ಅಂಚಿನ ಜಮೀನಿನ ರೈತರು ತಮ್ಮ ಜಮೀನಿಗೆ ನೀರು ನುಗ್ಗದಂತೆ ಬೃಹತ್ ಬದುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ನೀರು ಕೆರೆ ಸೇರದೆ ಇನ್ನುಳಿದ ಜಮೀನುಗಳಲ್ಲಿ ಸಂಗ್ರಹವಾಗುತ್ತಿದೆ. ಈಚೆಗೆ ಸುರಿದ ಭಾರೀ ಮಳೆಯಿಂದ ಹಳ್ಳಗಳ ನೀರು ಜಮೀನು, ತೋಟಗಳಲ್ಲಿ ನಿಂತಿದೆ. ಮತ್ತೆ ಮಳೆ ಮುಂದುವರಿದರೆ ಸಮಸ್ಯೆ ಉಲ್ಬಣಿಸಲಿದೆ. ಪರಿಹಾರವೇ ಇಲ್ಲದೇ ಫಸಲು ಭರಿತ ತೋಟ ಕಣ್ಣೆದುರೇ ಕಮರುತ್ತಿರುವುದು ಬದುಕಿನ ಆಸರೆಯೇ ಮುರಿದು ಬಿದ್ದಂತಾಗಿದೆ ಎನ್ನುತ್ತಾರೆ ರೈತರಾದ ಕಲೀಂ ಸಾಬ್, ಪುಟ್ಟಯ್ಯ ಗೌಡ, ಯೋಗೇಶ್, ಪಾಲಯ್ಯ.
ಒಮ್ಮೆ ಜಮೀನಿನಲ್ಲಿ ಸಂಗ್ರಹಗೊಂಡ ನೀರು ಮೂರು ತಿಂಗಳಾದರೂ ಖಾಲಿ ಆಗುವುದಿಲ್ಲ. ಅಷ್ಟರಲ್ಲಿ ತೋಟದ ಬೆಳೆ ನಶಿಸುತ್ತದೆ. ಮುಂಗಾರು ಬೆಳೆಗೆ ಖರ್ಚು ಮಾಡಿದ ಹಣ ಕೂಡ ವಾಪಸ್ ಬರಲಾರದ ಸ್ಥಿತಿ ಎದುರಾಗುತ್ತದೆ ಎಂದು ರೈತ ಲಕ್ಷ್ಮಿಪತಿ ಬೇಸರ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷದಿಂದ ನೀರು ನಿಂತು ಅಡಿಕೆ ತೋಟಗಳು ಅಲ್ಲಲ್ಲಿ ಒಣಗಿವೆ. ಕೆಲ ರೈತರು ದೋಣಿ ಮೂಲಕ ಅಡಿಕೆ ಕೊಯ್ಲು ನಡೆಸಿದ್ದಾರೆ. ಸೂಳೆಕರೆಗೆ ಹಳ್ಳಗಳ ಮೂಲಕ ನೇರವಾಗಿ ಕೆರೆ ಸೇರುವ ನೀರು ಶೇ 20ರಷ್ಟು. ಉಳಿದ ಶೇ 80ರಷ್ಟು ನೀರು ಜಮೀನುಗಳ ಮೂಲಕವೇ ಹರಿದು ಸಾಗಬೇಕಿದೆ ಎಂದೂ ಅವರು ಹೇಳುತ್ತಾರೆ.
ತಾಲ್ಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿ ರೈತರ ಸಂಕಷ್ಟ ಪರಿಹರಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ರೈತರ ಜಮೀನುಗಳ ಬರಡಾಗಲಿವೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಕುಮಾರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.