ADVERTISEMENT

ಬಸವಾಪಟ್ಟಣ: ನೂರಾರು ಜನರಿಗೆ ನೆರವಾದ ನೂರಾನಿ ಮಸೀದಿ ಆಂಬುಲೆನ್ಸ್‌

ಸಕಾಲಕ್ಕೆ ಉಚಿತವಾಗಿ ಒದಗಿ ಜೀವ ಉಳಿಸಿದ ವಾಹನ

ಎನ್‌.ವಿ ರಮೇಶ್‌
Published 23 ಫೆಬ್ರುವರಿ 2025, 6:17 IST
Last Updated 23 ಫೆಬ್ರುವರಿ 2025, 6:17 IST
ಬಸವಾಪಟ್ಟಣದ ಬುಡೇನ್‌ನಗರ ನೂರಾನಿ ಮಸೀದಿಯ ಮುಂಭಾಗದಲ್ಲಿ ರೋಗಿಗಳ ಸೇವೆಗೆ ಸಿದ್ಧವಾಗಿರುವ ಆಂಬುಲೆನ್ಸ್‌
ಬಸವಾಪಟ್ಟಣದ ಬುಡೇನ್‌ನಗರ ನೂರಾನಿ ಮಸೀದಿಯ ಮುಂಭಾಗದಲ್ಲಿ ರೋಗಿಗಳ ಸೇವೆಗೆ ಸಿದ್ಧವಾಗಿರುವ ಆಂಬುಲೆನ್ಸ್‌   

ಬಸವಾಪಟ್ಟಣ: ಇಲ್ಲಿನ ಬುಡೇನ್‌ ನಗರ ಬಡಾವಣೆಯ ನೂರಾನಿ ಮಸೀದಿ ಸಮಿತಿಯು ರೋಗಿಗಳ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್‌ ಸೇವೆ ಒದಗಿಸುತ್ತಿದ್ದು, ಬಡ ಜನತೆಗೆ ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದೆ.

2020ರಲ್ಲಿ ಜಗತ್ತಿನಾದ್ಯಂತ ಕೊರೊನಾ ಕಂಡುಬಂದ ಸಂದರ್ಭ ನೂರಾನಿ ಮಸೀದಿ ಸಮಿತಿಯಿಂದ ಒಂದು ಆಂಬುಲೆನ್ಸ್‌ ಖರೀದಿಸುವ ಆಲೋಚನೆ ಮಾಡಿದಾಗ, ಸದ್ಯ ದಾವಣಗೆರೆಯಲ್ಲಿ ನೆಲೆಸಿರುವ ಬಸವಾಪಟ್ಟಣ ಮೂಲದ ಉದ್ಯಮಿ ಪಿ.ಗಜಂಫರ್‌ ಅಲಿ ಅವರು ವೈಯಕ್ತಿಕವಾಗಿ ಸುಸಜ್ಜಿತ ಅಂಬುಲೆನ್ಸ್‌ ಖರೀದಿಸಿ ದಾನವಾಗಿ ನೀಡಿದ್ದರು. ನಾಲ್ಕು ವರ್ಷಗಳಿಂದ ಯಾವುದೇ ಜಾತಿ, ಧರ್ಮ, ಪಂಗಡದ ರೋಗಿಗಳಿಗೆ ತುರ್ತು ಚಿಕಿತ್ಸೆ ಕೊಡಿಸಲು ಆ ಆಂಬುಲೆನ್ಸ್ ನೆರವಾಗುತ್ತಿದೆ. 

ಆರೋಗ್ಯ ಇಲಾಖೆ ಒದಗಿಸಿರುವ ‘108 ಆಂಬುಲೆನ್ಸ್‌’ ವಾಹನವು ರೋಗಿಗಳನ್ನು ಜಿಲ್ಲೆಯಲ್ಲಿರುವ ಆಸ್ಪತ್ರೆಗೆ ಮಾತ್ರ ಕರೆದುಕೊಂಡು ಹೋಗುವ ವ್ಯವಸ್ಥೆ ಹೊಂದಿದೆ. ಆದರೆ ಕೆಲವು ಸಂದರ್ಭಗಳಲ್ಲಿ ದೂರದ ಮಣಿಪಾಲ್‌, ಮಂಗಳೂರು, ಹುಬ್ಬಳ್ಳಿ, ಬೆಂಗಳೂರು ಹಾಗೂ ಹೊರ ರಾಜ್ಯಗಳಲ್ಲಿರುವ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದುಕೊಂಡು ಹೋಗಲು ನೂರಾನಿ ಮಸೀದಿಯ ಆಂಬುಲೆನ್ಸ್‌ ಸಕಾಲಕ್ಕೆ ನೆರವಾಗುತ್ತಿದೆ.

ADVERTISEMENT

ದಿನದ 24 ಗಂಟೆಯೂ ಈ ವಾಹನದ ಸೇವೆ ಲಭ್ಯವಿದ್ದು, ಐವರು ವಾಹನ ಚಾಲಕ ಯುವಕರು ಆಂಬುಲೆನ್ಸ್‌ ಚಾಲನೆ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳು ಅಥವಾ ಅವರ ಬಂಧುಗಳು ಕಡು ಬಡವರಾಗಿದ್ದರೆ ಯಾವುದೇ ಖರ್ಚಿಲ್ಲದೇ ಉಚಿತವಾಗಿ ಆಂಬುಲೆನ್ಸ್‌ ಒದಗಿಸಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ಅಂದಾಜು 1,000ಕ್ಕೂ ಅಧಿಕ ರೋಗಿಗಳನ್ನು ದಾವಣಗೆರೆ ಜಿಲ್ಲೆ ಮಾತ್ರವಲ್ಲದೇ ಶಿವಮೊಗ್ಗ, ಉಡುಪಿಯಲ್ಲಿರುವ ದೂರದ ಆಸ್ಪತ್ರೆಗಳಿಗೆ ಕಳಿಸಲಾಗಿದೆ ಎಂದು ಮಸೀದಿಯ ಮುತವಲ್ಲಿ ಪಿ.ಮಹ್ಮದ್‌ ಜಿಯಾವುಲ್ಲಾ ಮತ್ತು ಕಾರ್ಯದರ್ಶಿ ಯಕ್ಬಾಲ್‌ ಅಹಮದ್‌ ತಿಳಿಸುತ್ತಾರೆ.

‘ನಮ್ಮ ತಂದೆಯವರು ಅಪಘಾತದಲ್ಲಿ ತೀವ್ರ ಗಾಯಗೊಂಡ ಸಂದರ್ಭ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ಸಾಗಿಸಲು ಇಲ್ಲಿನ ನೂರಾನಿ ಮಸೀದಿಯ ಆಂಬುಲೆನ್ಸ್‌ ಸಕಾಲಕ್ಕೆ ಒದಗಿದ್ದರಿಂದ ಅವರ ಪ್ರಾಣ ಉಳಿಯಿತು’‌ ಎಂದು ಸ್ಮರಿಸಿದವರು ಇಲ್ಲಿನ ನಿವಾಸಿ ಮಹ್ಮದ್‌ ಅಲಿ.

‘ಬಸವಾಪಟ್ಟಣದಲ್ಲಿರುವ 62 ವರ್ಷ ವಯಸ್ಸಿನ ನಮ್ಮ ಸೋದರಿಗೆ ಮಿದುಳಿನಲ್ಲಿ ರಕ್ತಸ್ರಾವ ಆಗಿದ್ದ ತುರ್ತು ಸಂದರ್ಭದಲ್ಲಿ ನೂರಾನಿ ಮಸೀದಿಯ ಆಂಬುಲೆನ್ಸ್‌ನಲ್ಲಿ ಸಕಾಲಕ್ಕೆ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಿದ್ದರಿಂದ ಅವರ ಜೀವ ಉಳಿದು ಈಗ ಆರೋಗ್ಯವಾಗಿದ್ದಾರೆ’ ಎಂದು ಎನ್‌.ಎಸ್‌. ಸತೀಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.