ADVERTISEMENT

ತಂದೆಯ ನೆನಪಲ್ಲಿ ಉಚಿತ ಆಟೊ ಸರ್ವಿಸ್‌

1 ತಿಂಗಳಿನಿಂದ ಸೇವೆ ನೀಡುತ್ತಿರುವ ಯುವ ಉದ್ಯಮಿ ಶ್ರೀಧರ ಪಾಟೀಲ್‌

ಪ್ರಜಾವಾಣಿ ವಿಶೇಷ
Published 12 ಸೆಪ್ಟೆಂಬರ್ 2021, 3:53 IST
Last Updated 12 ಸೆಪ್ಟೆಂಬರ್ 2021, 3:53 IST
ಶಿರಮಗೊಂಡನಹಳ್ಳಿಯಲ್ಲಿ ಉಚಿತವಾಗಿ ನಡೆಯುತ್ತಿರುವ ಆಟೊ ಸರ್ವಿಸ್‌
ಶಿರಮಗೊಂಡನಹಳ್ಳಿಯಲ್ಲಿ ಉಚಿತವಾಗಿ ನಡೆಯುತ್ತಿರುವ ಆಟೊ ಸರ್ವಿಸ್‌   

ದಾವಣಗೆರೆ: ‘ವ್ಯವಹಾರವೆಲ್ಲ ಕೈಕೊಟ್ಟಾಗ ಬದುಕಿಗಾಗಿ ಅಪ್ಪ ಆಟೋ ಓಡಿಸಿದರು. ಅದರ ನೆನಪಿಗಾಗಿ ನಾನು ಆಟೊಗಳನ್ನು ಉಚಿತವಾಗಿ ದುರಸ್ತಿ, ಸರ್ವಿಸ್‌ ಮಾಡುತ್ತಿದ್ದೇನೆ. ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೊ ಚಾಲಕರಿಗೆ ಇದರಿಂದ ಒಂದಷ್ಟು ಸಹಾಯ ಆಗುತ್ತಿದೆ’..

ಶಿರಮಗೊಂಡನಹಳ್ಳಿಯಲ್ಲಿ ಒಂದು ತಿಂಗಳಿನಿಂದ ಉಚಿತವಾಗಿ ಆಟೊ ಸರ್ವಿಸ್‌ ಮಾಡುತ್ತಿರುವ ಯುವ ಉದ್ಯಮಿ ಶ್ರೀಧರ ಪಾಟೀಲ್‌ ಅವರ ಮಾತಿದು.

‘ಮುಂದಿನ ಐದು ವರ್ಷಗಳ ಕಾಲ ಇದೇ ರೀತಿ ಸೇವೆಯನ್ನು ಮುಂದುವರಿಸುತ್ತೇನೆ. ಇದರಲ್ಲಿ ನಾನೊಬ್ಬನೇ ಇರುವುದಲ್ಲ. ಅಭಿಮಾನಿ ಬಳಗದ ಸದಸ್ಯರೂ ಕೈ ಜೋಡಿಸಿದ್ದಾರೆ. ಆವರಗೆರೆ ರಂಗಣ್ಣ ಉಪಕರಣಗಳ ಟ್ರಾನ್ಸ್‌ಪೋರ್ಟ್‌ ಚಾರ್ಜ್‌ ಭರಿಸುತ್ತಿದ್ದಾರೆ. ಆಟೋ ಸ್ಪಾರ್‌ಪಾರ್ಟ್ಸ್‌ಗಳನ್ನು ನಾವು ಒದಗಿಸಿದಾಗ ಜಾಕೀರ್‌ಖಾನ್‌ (ಲಾಲ್‌) ಯಾವುದೇ ಫಲಾಪೇಕ್ಷೆ ಇಲ್ಲದೇ ಜೋಡಿಸುತ್ತಾನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಉಚ್ಚಂಗಿದುರ್ಗ ಕುರುಬನಗೇರಿ ಮರುಳನಗೌಡ್ರು ವಂಶಸ್ಥರು ನಾವು. 1982ರಿಂದ 90ರ ವರೆಗೆ ನನ್ನ ತಂದೆ ಚಂದ್ರಮೌಳಿ ಗೌಡ್ರು ದೊಡ್ಡ ಉದ್ಯಮಿಯಾಗಿದ್ದರು. ಎಣ್ಣೆ ಅಂಗಡಿ, ಕಿರಣಿ ಅಂಗಡಿ, ದಲಾಳಿ ಅಂಗಡಿಗಳನ್ನು ನಡೆಸುತ್ತಿದ್ದರು. ಆದರೆ ಎಲ್ಲ ವ್ಯವಹಾರಗಳು ಇದ್ದಕ್ಕಿದ್ದಂತೆ ಕೈಕೊಟ್ಟಾಗ ತಂದೆ ಆಟೊ ಓಡಿಸತೊಡಗಿದರು. ಅದರ ದುಡಿಮೆಯಲ್ಲೇ ಸ್ವಲ್ಪ ಸಮಯ ಅಮ್ಮ, ಅಕ್ಕ, ತಮ್ಮ ಮತ್ತು ನನ್ನನ್ನು ಸಾಕಿದರು. ನಾನು ಶ್ರೀಮಂತಿಕೆಯನ್ನೂ ಅತಿ ಬಡತನವನ್ನೂ ಬದುಕಿನಲ್ಲಿ ಒಟ್ಟೊಟ್ಟಿಗೆ ಕಂಡವನು. ಅದಕ್ಕಾಗಿ ಬಡಜನರಿಗೆ ನೆರವಾಗುವ ಕೆಲಸ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.

‘ಕೊರೊನಾ ಕಾಲದಲ್ಲಿ 12 ಸಾವಿರ ಫುಡ್‌ ಕಿಟ್‌ ವಿತರಣೆ ಮಾಡಿದ್ದೆ. ಎನ್‌95 ಮಾಸ್ಕ್‌ 60 ಸಾವಿರ ವಿತರಿಸಿದ್ದೆ. ಬರೀ ರಸ್ತೆಯಲ್ಲ, ಮನೆಗಳನ್ನೇ ಸ್ಯಾನಿಟೈಸ್‌ ಮಾಡಿಸಿದ್ದೆ. ಈಗ ಒಂದು ತಿಂಗಳಿಂದ ಆಟೋ ಸರ್ವಿಸ್‌ ಮಾಡಿಸುತ್ತಿದ್ದೇನೆ. ಈವರೆಗೆ 1800 ಆಟೊಗಳು ಇಲ್ಲಿವರೆಗೆ ಸರ್ವಿಸ್‌ ಮಾಡಿಸಿಕೊಂಡು ಹೋಗಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.