ADVERTISEMENT

ಕಲ್ಯಾಣ ಕರ್ನಾಟಕಕ್ಕೆ ₹ 2 ಸಾವಿರ ಕೋಟಿಗೆ ಮನವಿ

ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:36 IST
Last Updated 25 ಫೆಬ್ರುವರಿ 2020, 12:36 IST
ಜಿ.ಕರುಣಾಕರ ರೆಡ್ಡಿ
ಜಿ.ಕರುಣಾಕರ ರೆಡ್ಡಿ   

ಹರಪನಹಳ್ಳಿ : ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ₹ 2 ಸಾವಿರ ಕೋಟಿ ಅನುದಾನ ಮೀಸಲಿಡುವಂತೆ ಆರು ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿರುವುದಾಗಿ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಶಾಸಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದುವರೆಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ತಾಲ್ಲೂಕಿಗೆ ₹ 58 ಕೋಟಿ ಅನುದಾನ ಮುಂಜೂರಾಗಿ ಬಳಕೆ ಆಗಿದೆ’ ಎಂದು ಹೇಳಿದರು.

‘ಬಜೆಟ್‍ನಲ್ಲಿ ತಾಲ್ಲೂಕಿಗೆ ಕುಡಿಯುವ ನೀರಿನ ಯೋಜನೆ, ಪಟ್ಟಣಕ್ಕೆ ಎರಡನೇ ಹಂತದ ಯೋಜನೆಗೂ ಅನುದಾನ ಪಡೆಯಲು ಪ್ರಯತ್ನಿಸಿದ್ದೇನೆ. ಯಾರೂ ಸನ್ಯಾಸಿಗಳಲ್ಲ, ನಾನು ಸಚಿವ ಸ್ಥಾನದ ಆಕಾಂಕ್ಷಿಯೇ. ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಈ ಬಾರಿ ಸಚಿವ ಸ್ಥಾನ ದೊರಕಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರಿದೆ. ಅರಣ್ಯ, ಪೊಲೀಸ್ ಇಲಾಖೆಯನ್ನೂ ಸೇರಿಸುವಂತೆ ರಾಜ್ಯ ಹಂತದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಶೀಘ್ರ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಕರೆದು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲು ಕ್ರಮ ಜರುಗಿಸಲು ಸೂಚಿಸುತ್ತೇನೆ. ಗರ್ಭಗುಡಿ ಯೋಜನೆ ಆರಂಭಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಪಿಎಲ್‍ಡಿ ಬ್ಯಾಂಕ್‍ ಚುನಾವಣೆ ಗೊಂದಲದಿಂದ ಕೂಡಿದ್ದು, ಪರಿಶೀಲನೆಗೆ ಒತ್ತಾಯಿಸಲಾಗಿದೆ’ ಎಂದರು.

‘ಲಕ್ಷ್ಮಣ ಸವದಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಇದ್ದಾರೆ. ಆನಂದ ಸಿಂಗ್ ಬಳ್ಳಾರಿ ಜಿಲ್ಲೆ ಕೊಡಿ ಎಂದು ಕೇಳಿದ್ದಾರೆ. ಯಾರೇ ಉಸ್ತುವಾರಿ ಪಡೆದರೂ ಪ್ರಮಾಣಿಕವಾಗಿ ಕೆಲಸ ಮಾಡಬೇಕಷ್ಟೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.