ADVERTISEMENT

ದಾವಣಗೆರೆ | 21 ದಿನ ಕಾಲಮಿತಿ, ಡಿ.ಜೆ. ನಿರ್ಬಂಧ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ಗಣೇಶೋತ್ಸವ, ಈದ್‌ ಮಿಲಾದ್‌ ಅಂಗವಾಗಿ ಜಿಲ್ಲಾ ಮಟ್ಟದ ನಾಗರಿಕ ಸೌಹಾರ್ದ ಸಭೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:47 IST
Last Updated 19 ಆಗಸ್ಟ್ 2025, 4:47 IST
<div class="paragraphs"><p>ದಾವಣಗೆರೆಯ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ನಡೆದ ನಾಗರಿಕ ಸೌಹಾರ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು</p></div>

ದಾವಣಗೆರೆಯ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ನಡೆದ ನಾಗರಿಕ ಸೌಹಾರ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಗಳಿಗೆ ಗರಿಷ್ಠ 21 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಗಣೇಶೋತ್ಸವ ಹಾಗೂ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಡಿ.ಜೆ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ADVERTISEMENT

ಇಲ್ಲಿನ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗಣೇಶೋತ್ಸವ ಹಾಗೂ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ನಾಗರಿಕ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

‘3, 5, 11 ಹಾಗೂ 21 ದಿನ ಗಣೇಶ ಮೂರ್ತಿ ಕೂರಿಸುವ ಸಂಪ್ರದಾಯವಿದೆ. ಇದನ್ನು ಮೀರಿ ಗಣೇಶಮೂರ್ತಿಯನ್ನು ತಿಂಗಳು ಕಾಲ ಪ್ರತಿಷ್ಠಾಪಿಸುವ ಪ್ರತೀತಿ ಇಲ್ಲ. ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗರಿಷ್ಠ 15 ದಿನ ಕಾಲಮಿತಿ ನಿಗದಿಪಡಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 21 ದಿನ ಕಾಲಾವಕಾಶ ನೀಡಲಾಗಿದೆ. ನಿಗದಿತ ಕಾಲಮಿತಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದು ಕಡ್ಡಾಯ’ ಎಂದರು.

‘ಮೆರವಣಿಗೆಯಲ್ಲಿ ಅಬ್ಬರದ ಸಂಗೀತದ ಡಿ.ಜೆ ಬಳಕೆ ಭಾರತೀಯ ಸಂಪ್ರದಾಯವಲ್ಲ. ಸನಾತನ ಸಂಸ್ಕೃತಿ ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಧಾರ್ಮಿಕ ಉತ್ಸವಗಳಲ್ಲಿ ಕಾಣುತ್ತಿದ್ದ ಡೋಲು, ಕೀಲು ಕುಣಿತದಂತಹ ಕಲೆಗಳು ಕಣ್ಮರೆಯಾಗುತ್ತಿವೆ. ಇಂತಹ ಕಲೆ, ಭಾರತೀಯ ಸಂಸ್ಕೃತಿಯನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಡಿ.ಜೆ. ಬದಲಾಗಿ ದೇಸಿಯ ಕಲೆ, ಸಂಸ್ಕೃತಿಗೆ ಆದ್ಯತೆ ಕಲ್ಪಿಸಿ’ ಎಂದು ಸಲಹೆ ನೀಡಿದರು.

‘ತುಂಗಭದ್ರಾ ನದಿ ಈಗಾಗಲೇ ಮಲಿನವಾಗಿದೆ. ಕುಡಿಯುವ ಯೋಗ್ಯತೆಯನ್ನು ನದಿ ನೀರು ಕಳೆದುಕೊಳ್ಳುವ ಆತಂಕ ಎದುರಾಗಿದೆ. ರಾಸಾಯನಿಕಯುಕ್ತ ಗಣೇಶಮೂರ್ತಿಗಳನ್ನು ಇಂತಹ ಜಲಮೂಲಗಳಿಗೆ ವಿಸರ್ಜಿಸಿದರೆ ಜನರೇ ತೊಂದರೆ ಅನುಭವಿಸಬೇಕಾಗುತ್ತದೆ. ರೈತರ ಜೀವನಾಡಿ ಆಗಿರುವ ನಾಲೆಗಳಿಗೆ ಗಣೇಶಮೂರ್ತಿಗಳನ್ನು ಯಾವುದೇ ಕಾರಣಕ್ಕೂ ವಿಸರ್ಜಿಸಬಾರದು’ ಎಂದು ಹೇಳಿದರು.

‘ಹಬ್ಬದ ಅಂಗವಾಗ ಬ್ಯಾನರ್‌, ಬಂಟಿಂಗ್ಸ್, ಫ್ಲೆಕ್ಸ್‌ ಕಟ್ಟಲು ಸ್ಥಳೀಯ ಸಂಸ್ಥೆಯ ಅನುಮತಿ ಕಡ್ಡಾಯ. ಕಾಲಮಿತಿ ಮೀರಿದ ತಕ್ಷಣ ಅವುಗಳನ್ನು ತೆರವುಗೊಳಿಸಬೇಕು. ಗಣೇಶಮೂರ್ತಿ ವಿಸರ್ಜನೆ, ಈದ್‌ ಮಿಲಾದ್‌ ಮೆರವಣಿಗೆಯ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಿಸುವಂತಿಲ್ಲ. ಪೊಲೀಸರ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಾಕೀತು ಮಾಡಿದರು.

‘ಸ್ಥಳೀಯ ಗಣೇಶ ಸಮಿತಿ ಕೈಗೊಳ್ಳುವ ತೀರ್ಮಾನಗಳನ್ನು ಬದಲಿಸುವಂತಿಲ್ಲ. ಸಮಿತಿಯ ಹೊರತಾದವರು ಕೈಗೊಳ್ಳುವ ತೀರ್ಮಾನಗಳನ್ನು ಪೊಲೀಸ್‌ ಇಲಾಖೆ ಪರಿಗಣಿಸುವುದಿಲ್ಲ. ಭಾಷಣಕಾರರನ್ನು ಕರೆಸಿ ಪ್ರಚೋದನಾಕಾರಿ ಹೇಳಿಕೆ ಕೊಡಿಸಿದರೆ ಗಣೇಶ ಸಮಿತಿ ಸದಸ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಎಚ್ಚರಿಕೆ ನೀಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಸ್ಯಾಮ್ ವರ್ಗೀಸ್, ಉಪವಿಭಾಗಾಧಿಕಾರಿ ಸಂತೋಷ್‌ ಪಾಟೀಲ್, ವಿ.ಅಭಿಷೇಕ್‌ ಹಾಜರಿದ್ದರು.

ಪುಣೆ ಮುಂಬೈಯಲ್ಲಿ ಗಣೇಶೋತ್ಸವವನ್ನು ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲಾಗುತ್ತದೆ. ಕಲಾ ತಂಡಗಳಿಗೆ ಆದ್ಯತೆ ಸಿಕ್ಕಿದೆ. ಕಲೆ ಸಂಸ್ಕೃತಿ ಅನಾವರಣಕ್ಕೆ ಹಬ್ಬ ಪೂರಕವಾಗಿರಲಿ
ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ
ಗಣೇಶ ವಿಸರ್ಜನೆಗೆ ಬಾತಿ ಕೆರೆ ಹಾಗೂ ಶಿರಮಗೊಂಡನಹಳ್ಳಿ ಬಳಿ ಕೃತಕ ಹೊಂಡ ನಿರ್ಮಿಸಲಾಗುತ್ತದೆ. 30 ಮಿನಿ ಟ್ಯಾಂಕರ್‌ಗಳು 3 ಮತ್ತು 5ನೇ ದಿನ ನಗರದಲ್ಲಿ ಸಂಚರಿಸಲಿವೆ
ರೇಣುಕಾ ಆಯುಕ್ತೆ ಮಹಾನಗರ ಪಾಲಿಕೆ

‘ಸಿ.ಸಿ. ಟಿವಿ: 47 ಬಾರಿ ಸೆರೆ’:

‘ದಾವಣಗೆರೆ ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 9600 ಸಿ.ಸಿ.ಟಿವಿ ಕ್ಯಾಮೆರಾಗಳಿವೆ. ಈ ಎಲ್ಲ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ನಿಯಂತ್ರಿಸುವ ವ್ಯವಸ್ಥೆ ‘ಸ್ಮಾರ್ಟ್‌ಸಿಟಿ’ ಕಚೇರಿಯ ಕಮಾಂಡ್‌ ಕಂಟ್ರೋಲ್‌ ಕೇಂದ್ರದಲ್ಲಿದೆ. ವ್ಯಕ್ತಿಯೊಬ್ಬ ನಿತ್ಯ ಸರಾಸರಿ 47 ಬಾರಿ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಾನೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾಹಿತಿ ನೀಡಿದರು. ‘ಮನೆಯ ಒಳಗೆ ಮಾತ್ರ ಖಾಸಗಿ ಬದುಕು. ಬೀದಿಗೆ ಕಾಲಿಟ್ಟ ಪ್ರತಿ ವ್ಯಕ್ತಿಯ ಮೇಲೆ ಸಿ.ಸಿ.ಟಿವಿ ಕ್ಯಾಮೆರಾ ನಿಗಾ ಇದೆ. ಅಪರಾಧ ಕೃತ್ಯ ಎಸಗಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೂಡ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರುತ್ತಿದೆ’ ಎಂದು ಹೇಳಿದರು.

17 ಗಡಿಪಾರು 20 ಆರೋಪಿಗಳ ಸೆರೆ:

‘ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ 27 ಜನರ ಗಡಿಪಾರಿಗೆ ಪೊಲೀಸ್‌ ಇಲಾಖೆ ಶಿಫಾರಸು ಮಾಡಿದೆ. ಇದರಲ್ಲಿ 17 ಜನರ ಗಡಿಪಾರು ಮಾಡಲಾಗಿದ್ದು ಇನ್ನೂ 10 ಜನರ ಗಡಿಪಾರು ಪ್ರಕ್ರಿಯೆ ನಡೆಯುತ್ತಿದೆ. ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ತಿಂಗಳಲ್ಲಿ 20 ಜನರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾಹಿತಿ ನೀಡಿದರು. ‘ಸಾಮಾಜಿಕ ಜಾಲತಾಣದ ಮೇಲೆ ಕೂಡ ನಿಗಾ ಇಡಲಾಗಿದೆ. ತಪ್ಪು ಮಾಹಿತಿ ಹಂಚಿಕೊಂಡು ಸಮಾಜದ ಸ್ವಾಸ್ಥ್ಯ ಕದಡುವ ವ್ಯಕ್ತಿಗಳನ್ನು ಗಡಿಪಾರು ಮಾಡಲು ತೀರ್ಮಾನಿಸಲಾಗಿದೆ. ಯುವಜನರು ಸಾಮಾಜಿಕ ಜಾಲತಾಣದ ಖಾತೆಯನ್ನು ಎಚ್ಚರಿಕೆಯಿಂದ ಬಳಸಬೇಕು’ ಎಂದು ಸೂಚನೆ ನೀಡಿದರು. ‘ಮಾದಕವಸ್ತು ಜಾಲದ ಮೇಲೆ ನಿಗಾ ಇಡಲಾಗಿದೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಸಿಕ್ಕಿಬಿದ್ದಿದ್ದಾರೆ. ತಪ್ಪು ಮಾಡಿದ ವಿದ್ಯಾರ್ಥಿಗಳ ಪಾಲಕರನ್ನು ಕರೆಸಿ ತಿಳಿವಳಿಕೆ ನೀಡಲಾಗಿದೆ. ಇದು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.