ಹರಿಹರ: ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘದಿಂದ ಪ್ರತಿಷ್ಠಾಪಿಸಿದ್ದ 63ನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಶನಿವಾರ ಡಿ.ಜೆ. ಅಬ್ಬರವಿಲ್ಲದೇ, ವಿವಿಧ ಕಲಾತಂಡಗಳು ಮತ್ತು ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ನಡೆಯಿತು.
ಸಂಘದ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಟ್ರ‍್ಯಾಕ್ಟರ್ ಓಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಗಾಂಧಿ ವೃತ್ತ, ಮುಖ್ಯರಸ್ತೆ, ರಾಣಿ ಚೆನ್ನಮ್ಮ ವೃತ್ತ, ಹಳೆ ಪಿ.ಬಿ. ರಸ್ತೆ ಮೂಲಕ ಸಾಗಿ ನದಿ ದಡದಲ್ಲಿ ನಗರಸಭೆಯಿಂದ ನಿರ್ಮಿಸಲಾದ ತಾತ್ಕಾಲಿಕ ನೀರಿನ ಹೊಂಡದಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು.
ನಂದಿಕೋಲು, ಸಮಾಳ, ಡ್ರಮ್ ಸೆಟ್, ಗೊಂಬೆ ಕುಣಿತ, ಕೋಲು ಕುಣಿತ, ವೀರಗಾಸೆ, ಹುಬ್ಬಳ್ಳಿಯ ಜಗ್ಗಲಗಿ ಸೇರಿದಂತೆ ಹಲವು ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷ ಎಂ.ಬಿ. ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಕಾರ್ಯದರ್ಶಿ ಸಚ್ಚಿನ್ ಕೊಂಡಜ್ಜಿ, ಉಪಾಧ್ಯಕ್ಷ ತಿಪ್ಪಣ್ಣ, ಖಜಾಂಚಿ ಕೆ.ಬಿ. ರಾಜಶೇಖರ್, ಸದಸ್ಯರಾದ ಆಕಾಶ್ ಭೂತೆ, ನಾರಾಯಣ, ಮಂಜುನಾಥ್, ಸುರೇಶ್ ದಿಟೂರು, ಸತ್ಯನಾರಾಯಣ, ಸಂತೋಷ್ ನೋಟದವರ್, ಸ್ಟೀಲ್ ಮಂಜುನಾಥ್, ತಿಪ್ಪೇಸ್ವಾಮಿ, ಸಿ.ಕೆ. ಗುರುಪ್ರಸಾದ್, ಶಿಕ್ಷಕ ಬೀರೇಶ್, ಅರ್ಚಕರಾದ ಚಿದಂಬರ ಜೋಯಿಸ್, ಲಕ್ಷ್ಮೀಕಾಂತ್ ಜೋಯಿಸ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.