ಹರಿಹರ: ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ, ಕಾರ್ಪಣ್ಯಗಳ ಸ್ಮರಣೆಯ ಶುಭ ಶುಕ್ರವಾರವನ್ನು ಶುಕ್ರವಾರ ನಗರದ ಆರೋಗ್ಯಮಾತೆ ಬಸಿಲಿಕ ಚರ್ಚ್‌ನಲ್ಲಿ ಕ್ರೈಸ್ತರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಯೇಸುವಿನ ಪ್ರಾಣ, ತ್ಯಾಗದ ಪವಿತ್ರ ಸ್ಮರಣೆಯ ಶಿಲುಬೆ ಹಾದಿಯ ಪ್ರಾರ್ಥನಾ ವಿಧಿಯನ್ನು ಭಕ್ತರು ಬಿರು ಬಿಸಿಲಿನ ಮಧ್ಯೆ ನಡೆಸುವ ಮೂಲಕ ಭಕ್ತಿ ಮೆರೆದರು. ಯೇಸುವಿನ ಶಿಲುಬೆ ಹಾದಿಯ 14 ಸ್ಥಳಗಳಲ್ಲಿ ನಿಂತು ಧ್ಯಾನ ಹಾಗೂ ಪ್ರಾರ್ಥನೆಯನ್ನು ಉಪವಾಸದೊಂದಿಗೆ ಮಾಡಿದ್ದು ವಿಶೇಷವಾಗಿತ್ತು.
‘ಯೇಸುವಿನ ತ್ಯಾಗ, ಬಲಿದಾನಗಳು ನಮ್ಮ ಜೀವನಕ್ಕೆ ಮಾದರಿಯಾಗಬೇಕು. ಜೀವನದಲ್ಲಿ ಆತ್ಮಸ್ಥೈರ್ಯ ಇರಬೇಕು. ಪರಸ್ಪರ ಪ್ರೀತಿಸುವ ಹಾಗೂ ಯೇಸುವಿನ ಪ್ರೀತಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಚರ್ಚ್‌ನ ಫಾದರ್ ಕೆ.ಎ.ಜಾರ್ಜ್ ಸಂದೇಶ ನೀಡಿದರು.
ಚರ್ಚ್‌ನ ಭಕ್ತರು ತಮ್ಮ ಕೈಯಲ್ಲಿ ಶಿಲುಬೆಗಳನ್ನು ಹಿಡಿದು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಚರ್ಚ್‌ನ ಪಾಲನಾ ಪರಿಷತ್ತಿನ ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.