ದಾವಣಗೆರೆ: ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಸೂರ್ಯ ಘರ್’ ಯೋಜನೆಗೆ ನಗರ, ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆವ್ಯಕ್ತವಾಗಿದೆ. ಮನೆಯ ತಾರಸಿ ಮೇಲೆ ಸೌರ ಫಲಕ ಅಳವಡಿಸಿಕೊಂಡು ವಿದ್ಯುತ್ ಉಳಿತಾಯದ ಜತೆಗೆ ಮಾರಾಟವನ್ನೂ ಮಾಡುವ ಈ ಮಹಾತ್ವಾಕಾಂಕ್ಷಿ ಯೋಜನೆಗೆ ನಗರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೌರ ಶಕ್ತಿಯಿಂದ ಮನೆಯಲ್ಲೇ ವಿದ್ಯುತ್ ಉತ್ಪಾದಿಸುವ ಸೌರ ಫಲಕ (ಸೋಲಾರ್ ಪ್ಯಾನಲ್) ಅಳವಡಿಕೆ ಯೋಜನೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದಕ್ಕೆ ಪೂರಕವಾಗಿ ರೂಪಿಸಲಾದ ಕೇಂದ್ರ ಸರ್ಕಾರದ ‘ಸೂರ್ಯ ಘರ್’ ಸಹಾಯಧನ ಸೌಲಭ್ಯ ವರದಾನವಾಗಿದೆ.
ಮನೆಯ ಚಾವಣಿ ಮೇಲೆ ಸೌರ ಫಲಕ ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದ್ದರೂ ‘ಸೂರ್ಯ ಘರ್’ ಬಳಿಕ ಇದಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಿದೆ.
2024ರ ಫೆಬ್ರುವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಜನೆಯನ್ನು ಘೋಷಿಸಿದ್ದರು. ಯೋಜನೆಯಡಿ ಬೆಸ್ಕಾಂ ದಾವಣಗೆರೆ ನಗರ ಉಪ ವಿಭಾಗ– 1 ಹಾಗೂ 2 ಮತ್ತು ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿ ಜನರು ಅರ್ಜಿ ಸಲ್ಲಿಸಿದ್ದಾರೆ.
ನಗರ ಉಪ ವಿಭಾಗ–1 ಹಾಗೂ ಗ್ರಾಮೀಣ ಉಪ ವಿಭಾಗದಲ್ಲೇ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಗರ ಉಪ ವಿಭಾಗ–1ರಲ್ಲಿ ಸೌರ ಫಲಕ ಅಳವಡಿಸಿಕೊಳ್ಳುವ 55 ಕಾಮಗಾರಿಗಳು ಪೂರ್ಣಗೊಂಡಿರುವುದು ಗಮನಾರ್ಹ. ಈ ವಿಭಾಗದಲ್ಲಿ ಒಟ್ಟು 95 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ‘ಸೂರ್ಯ ಘರ್’ ಯೋಜನೆಯಡಿ 85 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಗ್ರಾಮೀಣ ಉಪ ವಿಭಾಗದಲ್ಲಿ 830 ಅರ್ಜಿಗಳು ಸಲ್ಲಿಕೆಯಾಗಿದ್ದು, 120 ಜನ ಸೌರ ಫಲಕ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಯೋಜನೆಯಡಿ ಮನೆಯ ಚಾವಣಿಯಲ್ಲಿ ಸೌರ ಫಲಕ ಅಳವಡಿಸಿಕೊಳ್ಳುವ ಮೂಲಕ 1 ಕಿಲೋ ವಾಟ್ (ಕೆವಿ)ಯಿಂದ 500 ಕೆವಿವರೆಗೆ ವಿದ್ಯುತ್ ಉತ್ಪಾದನೆ ಮಾಡಬಹುದು. ಅಗತ್ಯವಿರುವಷ್ಟು ವಿದ್ಯುತ್ ಬಳಕೆ ಮಾಡಿಕೊಂಡು ಉಳಿದಿದ್ದನ್ನು ಬೆಸ್ಕಾಂಗೆ ಮಾರಾಟ ಮಾಡಬಹುದು.
ಯೋಜನೆಯಡಿ ಗರಿಷ್ಠ ₹ 78,000 ದವರೆಗೆ ಸಹಾಯಧನ ಲಭ್ಯವಿದೆ. 1 ಕೆವಿ ಸಾಮರ್ಥ್ಯದ ಸೌರ ಫಲಕಕ್ಕೆ ₹ 30,000 ಸಹಾಯಧನ ಲಭ್ಯವಿದ್ದು, 3 ಕೆವಿ ಸಾಮರ್ಥ್ಯದ ಸೌರ ಫಲಕ ಹಾಕಿಸುವುದಾದರೆ ₹ 78,000 ಸಹಾಯಧನ ಸಿಗುತ್ತದೆ. 4 ಕೆವಿವರೆಗೂ ಫಲಕ ಹಾಕಿಸಬಹುದು. ಆದರೆ ಸಹಾಯಧನದ ಗರಿಷ್ಠ ಮೊತ್ತ ₹ 78,000 ಮಾತ್ರ. ಉಳಿದ ಮೊತ್ತವನ್ನು ಗ್ರಾಹಕರೇ ಭರಿಸಬೇಕು.
1 ಕೆವಿ ಸೌರ ಫಲಕ ಅಳವಡಿಸಲು ಅಂದಾಜು ₹ 60,000ದಿಂದ ₹ 80,000 ಖರ್ಚು ಬರಲಿದೆ. ಅಳವಡಿಕೆಗೆ ಸ್ಥಳೀಯ ಏಜೆನ್ಸಿಯ ಸಹಾಯ ಪಡೆದರೆ ಈ ವೆಚ್ಚ ಕಡಿಮೆಯಾಗಲಿದೆ.
‘ಈಗಾಗಲೇ 55 ಕಡೆ ಕಾಮಗಾರಿ ಮುಗಿದಿದೆ. 30 ಕಾಮಗಾರಿಗಳು ಪ್ರಗತಿಯಲ್ಲಿವೆ. ಯೋಜನೆಯಡಿ ಅರ್ಜಿ ಹಾಕಿದ 150 ದಿನಗಳ ಒಳಗೆ ಸೌರ ಫಲಕ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿರಬೇಕು. ನಂತರ 1 ತಿಂಗಳೊಳಗೆ ಸಹಾಯಧನ ಸಿಗಲಿದೆ’ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್ ಹಳದಪ್ಪ ಜೆ.ಎಂ. ಮಾಹಿತಿ ನೀಡಿದರು.
‘ಗ್ರಾಮೀಣ ಭಾಗದಲ್ಲಿ 830 ಅರ್ಜಿಗಳು ಬಂದಿದ್ದವು. ಈಗಾಗಲೇ 120 ಜನರು ಸೌರ ಫಲಕ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಕೆಲವರು ಮೊದಲೇ ಸಹಾಯಧನ ಸಿಗಬಹುದು ಎಂದು ಅರ್ಜಿ ಹಾಕಿದ್ದರು. ಫಲಕ ಅಳವಡಿಕೆ ಕಾಮಗಾರಿ ಮುಗಿದ ಬಳಿಕ ಸಹಾಯಧನ ಬರುತ್ತದೆ ಎಂದು ತಿಳಿಸಿದೆವು. ಕೆಲವರು ಅಗತ್ಯ ಇಲ್ಲದಿದ್ದರೂ 2 ಕೆವಿಗೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಯೋಜನೆ ಬಗ್ಗೆ ಅರಿವು ಮೂಡಿಸಿದ್ದೇವೆ. ದಿನಕ್ಕೆ ಕನಿಷ್ಠ ಮೂರು–ನಾಲ್ಕು ಜನರು ಯೋಜನೆಯ ಮಾಹಿತಿ ಪಡೆಯುತ್ತಿದ್ದಾರೆ’ ಎಂದು ಬೆಸ್ಕಾಂ ದಾವಣಗೆರೆ ಗ್ರಾಮೀಣ ಉಪ ವಿಭಾಗದ ಎಇ ರೇಷ್ಮಾ ತಿಳಿಸಿದರು.
‘3 ಕೆವಿ ಸೌರ ಫಲಕ ಅಳವಡಿಸಿಕೊಂಡಿದ್ದು, ಸಹಾಯಧನ ಸೌಲಭ್ಯ ಯೋಜನೆ ಉತ್ತಮವಾಗಿದೆ. ಆದರೆ ಸೌಲಭ್ಯ ಪಡೆಯಲು ಪ್ರಕ್ರಿಯೆಗಳು ಹೆಚ್ಚು. ಹೀಗಾಗಿ ತಾಂತ್ರಿಕವಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ಮಾತ್ರ ಅರ್ಜಿ ಹಾಕಿ ಸೌಲಭ್ಯ ಪಡೆಯುತ್ತಿದ್ದಾರೆ’ ಎಂದು ಎಸ್.ಎಸ್. ಬಡಾವಣೆ ನಿವಾಸಿ ಬಸವರಾಜ ಕೆ.ಜಿ. ಹೇಳಿದರು.
ಸೂರ್ಯ ಘರ್ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕೂ ಮುಂಚೆ ಸೌರ ಫಲಕ ಅಳವಡಿಸಲು ಕಡಿಮೆ ಅರ್ಜಿಗಳು ಬರುತ್ತಿದ್ದವು. ಈಗ ಹೆಚ್ಚಿನ ಅರ್ಜಿಗಳು ಬರುತ್ತಿವೆಹಳದಪ್ಪ ಜೆ.ಎಂ. ಬೆಸ್ಕಾಂ ಸಹಾಯಕ ಎಂಜಿನಿಯರ್
ಸೂರ್ಯ ಘರ್ ಯೋಜನೆ ಬಳಿಕ ಸೌರ ಫಲಕ ಅಳವಡಿಸಿಕೊಳ್ಳುವವರ ಸಂಖ್ಯೆ ಕೊಂಚ ಹೆಚ್ಚಳವಾಗಿದೆ. ಮನೆಯ ಬಳಕೆಗೆ ಸೌರ ಫಲಕ ಹಾಕಿಸುವವರಿಗೆ ಯೋಜನೆ ವರದಾನ. ಆದರೆ ವಾಣಿಜ್ಯ ಬಳಕೆಗೆ ಸಹಾಯಧನ ಸಿಗದುಶ್ರೀಧರ್ ಎಸ್‌ಆರ್‌ಎಸ್ ಸೋಲಾರ್ ಎನರ್ಜಿ
‘ಸೂರ್ಯ ಘರ್’ ಯೋಜನೆಯಡಿ ಅರ್ಜಿ ಹಾಕಲು ಕೇಂದ್ರ ಸರ್ಕಾರದ ಎಂಎನ್‌ಆರ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಲಾಗಿನ್ ಆಗಬೇಕು. ಬಳಿಕ ಅರ್ಜಿದಾರರ ಹೆಸರು ವಿದ್ಯುತ್ ಬಿಲ್ ಸಂಖ್ಯೆ ಎಷ್ಟು ಕಿಲೋ ವಾಟ್ ಸಾಮರ್ಥ್ಯ ವೆಂಡರ್ (ಕಾಮಗಾರಿ ಕೈಗೊಳ್ಳುವವರು) ಆಯ್ಕೆ ಸೇರಿದಂತೆ ಅಗತ್ಯ ಮಾಹಿತಿ ನೀಡಬೇಕು. ಮಳೆಗಾಲದಲ್ಲೂ ವಿದ್ಯುತ್ ಉತ್ಪಾದನೆಯಾಗುತ್ತದೆ. ಸೌರ ಫಲಕಕ್ಕೆ ಹೆಚ್ಚಿನ ಬಿಸಿಲು ಬೇಕಿಲ್ಲ. ಬೆಳಕು ಇದ್ದರೆ ಸಾಕು. ಯೋಜನೆಯಡಿ ಮನೆಮನೆಗೆ 3 ಕೆವಿ ಸೌರ ಫಲಕ ಅಳವಡಿಸಲು ಶೇ 7ರ ಬಡ್ಡಿದರದಲ್ಲಿ ಯಾವುದೇ ಭದ್ರತೆ ಇಲ್ಲದೆ ₹ 2 ಲಕ್ಷದವರೆಗೆ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಮಾಸಿಕ ₹ 2500ರಂತೆ ಕಂತು ಪಾವತಿಸಲು ಅವಕಾಶ ಇದೆ.
3 ಕೆವಿ ಸೌರ ಫಲಕದಿಂದ ತಿಂಗಳಿಗೆ 300 ಯೂನಿಟ್‌ಗಿಂತ ಅಧಿಕ ವಿದ್ಯುತ್ ಉತ್ಪಾದನೆಯಾಗುತ್ತದೆ. ಮನೆ ಬಳಕೆಗೆ 200 ಯೂನಿಟ್ ಸಾಕಾಗುತ್ತದೆ. ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಬಹುದು. ಮಾಹಿತಿಗೆ ವೆಬ್‌ಸೈಟ್ pmsuryaghar.gov.in ಅಥವಾ ಬೆಸ್ಕಾಂ ಕಚೇರಿ ಸಂಪರ್ಕಿಸಬಹುದು.
‘5 ಕೆವಿ ಸೌರ ಫಲಕ ಅಳವಡಿಸಿಕೊಂಡಿದ್ದೇನೆ. ಹೀಗಾಗಿ ಸಹಾಯಧನ ಸೌಲಭ್ಯ ಇಲ್ಲ. ಮನೆಯ ಅಗತ್ಯಕ್ಕೆ ವಿದ್ಯುತ್ ಬಳಕೆ ಮಾಡಿ ಉಳಿದಿದ್ದನ್ನು ಬೆಸ್ಕಾಂಗೆ ಮಾರಾಟ ಮಾಡುತ್ತಿದ್ದೇನೆ. ಬೇಸಿಗೆಯಲ್ಲಿ 784 ಯೂನಿಟ್‌ವರೆಗೂ ವಿದ್ಯುತ್ ಉತ್ದಾದನೆಯಾಗುತ್ತದೆ. ಮನೆ ಬಳಕೆಗೆ ಅಂದಾಜು 250 ಯೂನಿಟ್ ಸಾಕು. ಉಳಿದಿದ್ದನ್ನು ಬೆಸ್ಕಾಂಗೆ ಮಾರಾಟ ಮಾಡುತ್ತಿದ್ದೇನೆ. ಒಂದು ಯೂನಿಟ್‌ಗೆ ಬೆಸ್ಕಾಂನಿಂದ ₹ 4.50 ನೀಡುತ್ತಿದ್ದಾರೆ. ಸಹಾಯಧನ ಸೌಲಭ್ಯದಲ್ಲಿ ಸೌರ ಫಲಕ ಹಾಕಿಸಿದರೆ ಯೂನಿಟ್‌ಗೆ ಸಿಗುವ ದರ ಕಡಿಮೆ ಇದೆ. 3 ಕೆವಿ ಒಳಗೆ ಫಲಕ ಹಾಕಿಸುವುದಾದರೆ ಸಹಾಯಧನ ಸೌಲಭ್ಯ ಸಿಗುತ್ತದೆ’ ಎಂದು ಸೌರ ಫಲಕ ಅಳವಡಿಸಿಕೊಂಡಿರುವ ಶಿವಕುಮಾರಸ್ವಾಮಿ ಬಡಾವಣೆಯ ಒ.ಜಿ. ಪಾಟೀಲ ವಿವರಿಸಿದರು.
1 ಕೆವಿ ಸೌರ ಫಲಕ ಅಳವಡಿಸಲು 10X10 (100 ಚ.ಅಡಿ) ವಿಸ್ತೀರ್ಣದ ಜಾಗ ಸಾಕು. 250 ಚದರ ಅಡಿ ಜಾಗದಲ್ಲಿ 3 ಕೆವಿ ಸಾಮರ್ಥ್ಯದ ಸೌರ ಫಲಕ ಅಳವಡಿಸಿಕೊಳ್ಳಬಹುದು. 30X40 ವಿಸ್ತೀರ್ಣದ ಮನೆಯೊಂದರ ಚಾವಣಿಯ 3ನೇ ಒಂದು ಭಾಗದ ಜಾಗದಲ್ಲಿ 1 ಕೆವಿ ಸಾಮರ್ಥ್ಯದ ಸೌರ ಫಲಕ ಅಳವಡಿಸಿಕೊಳ್ಳಬಹುದು. 800 ಚ.ಅಡಿ ವಿಸ್ತೀರ್ಣದಲ್ಲಿ 10 ಕೆವಿ ಸಾಮರ್ಥ್ಯದ ಸೌರ ಫಲಕ ಅಳವಡಿಸಿಕೊಳ್ಳಲು ಸಾಧ್ಯ ಎಂದು ಎಸ್‌ಆರ್‌ಎಸ್ ಸೋಲಾರ್ ಎನರ್ಜಿಯ ಶ್ರೀಧರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.