ADVERTISEMENT

ದಾವಣಗೆರೆ | ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 4:55 IST
Last Updated 14 ಆಗಸ್ಟ್ 2023, 4:55 IST
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡದ ನೋಟ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡದ ನೋಟ –ಪ್ರಜಾವಾಣಿ ಚಿತ್ರ   

ಡಿ.ಕೆ.ಬಸವರಾಜು

ದಾವಣಗೆರೆ: ಆರುವರೆ ತಿಂಗಳಾದರೂ ಹಾಸ್ಟೆಲ್‌ಗೆ ಬಾರದ ಹಾಸಿಗೆಳು, ನೆಲದ ಮೇಲೆಯೇ ಮಲಗುವ ವಿದ್ಯಾರ್ಥಿಗಳು. ಹೊರಗಡೆಯಿಂದ ಬಂದು ಊಟ ಮಾಡಿ ಹೋಗುವ ಅನ್ಯ ವಿದ್ಯಾರ್ಥಿಗಳು.

–ಇವು ಜಿಲ್ಲೆಯ ಕೆಲವು ಹಾಸ್ಟೆಲ್‌ಗಳ ಪರಿಸ್ಥಿತಿ. ಅಲ್ಲದೇ ಜಿಲ್ಲೆಯಲ್ಲಿ 42 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಿನ್ನಡೆಯಾಗಿದೆ. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳೇ ಆಸರೆಯಾಗಿವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ಪ್ರತಿ ವರ್ಷ ಒಂದೊಂದು ಕಟ್ಟಡಕ್ಕೆ ಸ್ಥಳಾಂತರವಾಗುವುದು ಮಾಮೂಲಿಯಾಗಿದ್ದು, ವಿದ್ಯಾರ್ಥಿಗಳು ಬಟ್ಟೆ, ಪುಸ್ತಕಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡುವುದು ಸಮಸ್ಯೆಯಾಗಿದೆ.

ADVERTISEMENT

‘ನಮ್ಮ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮಲಗಲು ಮಂಚಗಳು ಇಲ್ಲ. ನೆಲದಲ್ಲೇ ಮಲಗಬೇಕಾಗಿದೆ. ಅಲ್ಲದೇ ಹೊದಿಕೆಗಳನ್ನು ತಂದುಕೊಡುತ್ತಿಲ್ಲ. ಒಂದು ಕೊಠಡಿಗಳಲ್ಲಿ ಅಗತ್ಯ‌ಕ್ಕಿಂತ ಹೆಚ್ಚು ಜನರು ಇರುವುದರಿಂದ ತೊಂದರೆಯಾಗಿದೆ’ ಎಂದು ಇಲ್ಲಿನ ಆಂಜನೇಯ ಬಡಾವಣೆಯ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು ದೂರಿದರು.

‘ನಮ್ಮ ಹಾಸ್ಟೆಲ್‌ನಲ್ಲಿ ಮೇಲಧಿಕಾರಿಗಳು ಹಾಗೂ ಲೋಕಾಯುಕ್ತರು ಬಂದಾಗ ಮಾತ್ರ ಒಳ್ಳೆಯ ಊಟ ಕೊಡುತ್ತಾರೆ. ಉಳಿದ ದಿನಗಳಲ್ಲಿ ಊಟ ಚೆನ್ನಾಗಿರುವುದಿಲ್ಲ. ಹಾಲಿಗೆ ಹೆಚ್ಚಿನ ನೀರು ಬೆರಸುತ್ತಾರೆ. ಹೊರಗಡೆಯಿಂದ ಹುಡುಗರು ಬಂದು ಊಟ ಮಾಡಿ ಹೋಗುತ್ತಾರೆ. ಪ್ರಶ್ನಿಸಿದರೆ ನಮ್ಮ ಮೇಲೆಯೇ ಗೂಂಡಾಗಿರಿ ಮಾಡುತ್ತಾರೆ’ ಎಂದು ಸರಸ್ವತಿ ನಗರದ ಎಸ್‌ಸಿ, ಎಸ್ಟಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬಿಸಿಎಂ ಹಾಗೂ ಅಲ್ಪಸಂಖ್ಯಾತ ಇಲಾಖೆಯಡಿ ಜಿಲ್ಲೆಯಲ್ಲಿ ಒಟ್ಟು 169 ಹಾಸ್ಟೆಲ್‌ಗಳು ಇದ್ದು, ಇವುಗಳಲ್ಲಿ 127 ಹಾಸ್ಟೆಲ್‌ಗಳು ಸ್ವಂತ ಕಟ್ಟಡ ಕಟ್ಟಡ ಕಾಮಗಾರಿ ಹೊಂದಿದ್ದರೆ, 42 ಹಾಸ್ಟೆಲ್‌ಗಳಿಗೆ ಬಾಡಿಗೆ ಕಟ್ಟಡಗಳೇ ಗತಿಯಾಗಿವೆ.

‘ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಹಾಗೂ ನಂತರದ 66 ವಿದ್ಯಾರ್ಥಿನಿಲಯಗಳ ಪೈಕಿ 58ಕ್ಕೆ ಸ್ವಂತ ಕಟ್ಟಡಗಳು ಇದ್ದರೆ 8 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವುಗಳಲ್ಲಿ 2ಕ್ಕೆ ನಿವೇಶನ ಗುರುತಿಸಿದ್ದು, 2ಕಟ್ಟಡ ನಿರ್ಮಾಣ ಹಂತದಲ್ಲಿವೆ’ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 80 ಹಾಸ್ಟೆಲ್‌ಗಳ ಪೈಕಿ 49ಕ್ಕೆ ಸ್ವಂತ ಕಟ್ಟಡವಿದ್ದರೆ, 28 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವುಗಳಲ್ಲಿ 3 ವಸತಿನಿಲಯಗಳು ಸರ್ಕಾರದ ಕಟ್ಟಡಗಳಲ್ಲಿ ನಡೆಯುತ್ತಿದೆ. 15 ಹಾಸ್ಟೆಲ್‌ಗೆ ನಿವೇಶನಗಳು  ಲಭ್ಯವಾಗಿದ್ದು, ಅವುಗಳಲ್ಲಿ 6 ಹಾಸ್ಟೆಲ್‌ಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ. ಉಳಿದ 12 ವಸತಿ ನಿಲಯಗಳಿಗೆ ನಿವೇಶನ ಬೇಕಾಗಿದೆ’ ಎಂದು ಇಲಾಖೆಯ ಅಧಿಕಾರಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ತಿಳಿಸಿದರು.

‘ಇಷ್ಟಿದ್ದರೂ ಕೆಲವು ವಿದ್ಯಾರ್ಥಿನಿಲಯಗಳಲ್ಲಿ ಅಚ್ಚುಕಟ್ಟಾದ ಊಟ, ವಸತಿ ಸೌಲಭ್ಯವಿದೆ. ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಚನ್ನಗಿರಿ: ವಸತಿನಿಲಯಗಳಿಗೆ ಬೇಕು ಹೊಸ ಕಟ್ಟಡ

ಚನ್ನಗಿರಿ ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದ ಮೆಟ್ರಿಕ್‌ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳು 15 ಇವೆ. ಹಾಗೆಯೇ 3 ಮೊರಾರ್ಜಿ ದೇಸಾಯಿ ವಿದ್ಯಾರ್ಥಿನಿಲಯಗಳು ಇದ್ದು ಇದರಲ್ಲಿ ಎಲ್ಲವೂ ಕೂಡಾ ಸ್ವಂತ ಕಟ್ಟಡವನ್ನು ಹೊಂದಿದ್ದರೂ ಕಟ್ಟಡಗಳನ್ನು ನಿರ್ಮಿಸಿ 25ರಿಂದ 30 ವರ್ಷಗಳಾಗಿರುವುದರಿಂದ ವಿದ್ಯಾರ್ಥಿನಿಲಯಗಳಿಗೆ ಹೊಸ ಕಟ್ಟಡದ ಅವಶ್ಯಕತೆ ಇದೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಪಟ್ಟಣದ ಸಂತೇ ಮೈದಾನದಲ್ಲಿದ್ದು ಈ ವಿದ್ಯಾರ್ಥಿನಿಲಯ ಶಿಥಿಲಾವಸ್ಥೆ ತಲುಪಿದೆ. ಸುಣ್ಣ ಬಣ್ಣ ಕಾಣದೇ ಆದೆಷ್ಟೋ ವರ್ಷಗಳಾಗಿವೆ. ದುರಸ್ತಿಗೆ ಅಗತ್ಯ ಅನುದಾನ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗದೇ ಇರುವುದರಿಂದ ಅನಿವಾರ್ಯವಾಗಿ ಈ ಶಿಥಿಲಗೊಂಡ ಕಟ್ಟಡದಲ್ಲಿಯೇ ವಾಸ ಮಾಡುವ ಅನಿವಾರ್ಯ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಬಂದೊದಗಿದೆ.

‘ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಮಾತ್ರ ಶಿಥಿಲಗೊಂಡಿದೆ. ಈ ಬಗ್ಗೆ ಮೇಲಧಿಕಾರಿಗಳಿಗೂ  ವರದಿಯನ್ನು ನೀಡಲಾಗಿದೆ. ಒಟ್ಟು ಸಮಾಜ ಕಲ್ಯಾಣ ಇಲಾಖೆಯಿಂದ 15 ವಿದ್ಯಾರ್ಥಿನಿಲಯಗಳಿದ್ದು ಉಳಿದ 14 ವಿದ್ಯಾರ್ಥಿನಿಲಯಗಳ ಕಟ್ಟಡಗಳು ಉತ್ತಮ ರೀತಿಯಲ್ಲಿ ಇವೆ. ಸಮಸ್ಯೆ ಇದ್ದರೂ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಆಹಾರವನ್ನು ನೀಡಲಾಗುತ್ತಿದೆ. ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದ್ದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಲಾಗುತ್ತಿದೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕಿನ ಸೂಳೆಕೆರೆಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹಾಗೂ ಕಾರಿಗನೂರು ಗ್ರಾಮದಲ್ಲಿ ಎರಡು ಮೊರಾರ್ಜಿ ವಿದ್ಯಾರ್ಥಿನಿಲಯಗಳಿವೆ. ಈ ಮೂರು ವಿದ್ಯಾರ್ಥಿನಿಲಯಗಳ ಕಟ್ಟಡಗಳು ಉತ್ತಮ ಸ್ಥಿತಿಯಲ್ಲಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಗಳೂರು: ಮೂಲಸೌಕರ್ಯಗಳಿಲ್ಲದೆ ನಲುಗುತ್ತಿರುವ ಹಾಸ್ಟೆಲ್‌ಗಳು

ಸಮಾಜಕಲ್ಯಾಣ ಇಲಾಖೆ ಬಿಸಿಎಂ ಸೇರಿದಂತೆ ವಿವಿದ ಇಲಾಖೆಗಳಿಗೆ ಸೇರಿದ ತಾಲ್ಲೂಕಿನ ಹಾಸ್ಟೆಲ್‌ಗಳಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿನಿಲಯಗಳು ಮೂಲಸೌಕರ್ಯಗಳಿಲ್ಲದ ಖಾಸಗಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ತಾಲ್ಲೂಕಿನ ಮುಗ್ಗಿದರಾಗಿಹಳ್ಳಿ ಹಾಗೂ ಮೆದಗಿನಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಿಕ್ಕಬಂಟನಹಳ್ಳಿ ಹಾಗೂ ಉದ್ದಗಟ್ಟ ಗ್ರಾಮದ ಕಿತ್ತುರುರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ದೊಣೆಹಳ್ಳಿ ಹೊಸಹಟ್ಟಿ ಗ್ರಾಮದ ಡಾ.ಅಂಬೇಡ್ಕರ್ ವಸತಿ ಪ್ರೀ ಮೆಟ್ರಿಕ್ ಶಾಲೆಗಳಲ್ಲಿ ತಲಾ 250ರಂತೆ ಒಟ್ಟು 1250 ವಿದ್ಯಾರ್ಥಿಗಳು ಇದ್ದಾರೆ.

ಚಿಕ್ಕಬಂಟನಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಹಾಗು ದೊಣೆಹಳ್ಳಿ ಹೊಸಹಟ್ಟಿಯ ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡ ನಿರ್ಮಾಣ 2 ವರ್ಷದಿಂದ ಕುಂಟುತ್ತಾ ಸಾಗಿದ್ದು ಈ ಹಾಸ್ಟೆಲ್ ವಿದ್ಯಾರ್ಥಿಗಳಿಗೆ 2 ವರ್ಷದಿಂದ ಮೆದಗಿನಕೆರೆಯ ಮೊರಾರ್ಜಿ ದೇಸಾಯಿ ಮತ್ತು ಬಿದರಕೆರೆ ಗ್ರಾಮದ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಹೆಚ್ಚುವರಿಯಾಗಿ ಆಶ್ರಯ ಕಲ್ಪಿಸಲಾಗಿದೆ. ಇದರಿಂದಾಗಿ ಇಕ್ಕಟ್ಟಾದ ಕೊಠಡಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಅನಾರೋಗ್ಯಕರ ಸ್ಥಿತಿಯಲ್ಲಿ ಇರಿಸಲಾಗಿದೆ.

ಕೊಠಡಿಗಳಲ್ಲಿ ಒತ್ತೊತ್ತಾಗಿ ಇರುವುದರಿಂದ ಕೆಲವು ತಿಂಗಳ ಹಿಂದೆ ಮೆದಗಿನಕೆರೆಯ ಮೊರಾರ್ಜಿ ದೇಸಾಯಿ ಹಾಗೂ ಉದ್ದಗಟ್ಟದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಚರ್ಮವ್ಯಾದಿ ಕಾಣಸಿಕೊಂಡಿತ್ತು. ತಾಲ್ಲೂಕು ವೈದ್ಯಾಧಿಕಾರಿಗಳ ತಂಡದಿಂದ ವಸತಿ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಅನೈರ್ಮಲ್ಯದ ಕಾರಣದಿಂದ ಮೈತುರಿಕೆ ಕಜ್ಜಿಯಿಂದ ನೂರಾರು ಮಕ್ಕಳು ಹೈರಾಣಾಗಿದ್ದರು. ಆತಂಕಗೊಂಡ ಪೋಷಕರು ಸಾಲುಸಾಲಾಗಿ ತಮ್ಮ ಮಕ್ಕಳನ್ನು ವಸತಿ ಶಾಲೆಯಿಂದ ಕರೆದೊಯ್ದಿದ್ದರು. ಅಲ್ಲದೆ ಮೆದಗಿನಕೆರೆ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಹಿನ್ನೆಲೆಯಲ್ಲಿ ಅಲ್ಲಿನ ಪ್ರಾಂಶುಪಾಲರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸಮಾಜಕಲ್ಯಾಣ ಇಲಾಖೆಯ 13 ಹಾಗೂ ಬಿಸಿಎಂ ಇಲಾಖೆಯ 11 ಹಾಸ್ಟೆಲ್‌ಗಳಿದ್ದು ಅರ್ಧಕ್ಕೂ ಹೆಚ್ಚು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಬಾಡಿಗೆ ಕಟ್ಟಡಗಳು ಅತ್ಯಂತ ಇಕ್ಕಟ್ಟಾಗಿದ್ದು ಯಾವುದೇ ಮೂಲಸೌಕರ್ಯಗಳಿಲ್ಲ. ಶುದ್ಧ ಕುಡಿಯುವ ನೀರು ಹಾಗೂ ಸುಸಜ್ಜಿತ ಕೊಠಡಿಗಳಿಲ್ಲದೆ ಇಕ್ಕಟ್ಟಾದ ಕೊಠಡಿಗಳಲ್ಲಿ ಗುಂಪುಗುಂಪಾಗಿ ಮಕ್ಕಳಿಗೆ ಆಶ್ರಯ ನೀಡಲಾಗಿದೆ. ‘ಗುಣಮಟ್ಟದ ಆಹಾರದ ಕೊರತೆ ಸುಸಜ್ಜಿತ ವಾಸ್ತವ್ಯದ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ’ ಎಂದು ಪೋಷಕರು ಆರೋಪಿಸಿದ್ದಾರೆ.

ಹರಿಹರ: ವಸತಿನಿಲಯದ ಕೊರತೆ; ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಂಟಕ

ನಗರದಲ್ಲಿ ಸರ್ಕಾರಿ ಮತ್ತು ಖಾಸಗಿಗೆ ಸೇರಿರುವ 6 ಪದವಿಪೂರ್ವ 6 ಪದವಿ ಕಾಲೇಜುಗಳಿವೆ. ಜತೆಗೆ ಒಂದು ಬಿ.ಇಡಿ ಒಂದು ಸರ್ಕಾರಿ ಪಾಲಿಟೆಕ್ನಿಕ್ ಜಿಟಿಟಿಸಿ ಮೂರು ಐಟಿಐ ಕಾಲೇಜುಗಳಿವೆ. ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ವಿವಿಧ 10 ಹಾಸ್ಟೆಲ್‌ಗಳಿವೆ.

ನಗರದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ 400 ವಿದ್ಯಾರ್ಥಿನಿಯರು 200 ವಿದ್ಯಾರ್ಥಿಗಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ 300 ವಿದ್ಯಾರ್ಥಿನಿಯರು 125 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಎಂಜಿನಿಯರಿಂಗ್ ಡಿಪ್ಲೊಮಾ ಫಾರ್ಮಸಿ ಲ್ಯಾಬ್ ಟೆಕ್ನೀಷಿಯನ್ ಕಾನೂನು ಪದವಿ ವೈದ್ಯಕೀಯ ಮತ್ತಿತರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿದ್ದರೆ ಮಾತ್ರ ವಸತಿ ನಿಲಯದ ಸೌಲಭ್ಯ ಬೇಕೆಂಬ ಕಲ್ಪನೆ ಇತ್ತು. ಈಗ ಬದಲಾದ ಸ್ಥಿತಿಯಲ್ಲಿ 6ನೇ ತರಗತಿ ನಂತರದ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಪಿಯುಸಿ ಕಲೆ ವಾಣಿಜ್ಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಅಗತ್ಯವಿದೆ.

65ರ ಬದಲು 105

ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 65 ವಿದ್ಯಾರ್ಥಿನಿಯರಿಗೆ ಅವಕಾಶವಿದೆ. ಆದರೆ ಇಲ್ಲಿರುವುದು 105 ವಿದ್ಯಾರ್ಥಿನಿಯರು. ಮಕ್ಕಳ ಪ್ರವೇಶಕ್ಕೆ ಈ ಹಾಸ್ಟೆಲ್‌ಗೆ ಪಾಲಕರು ಬಂದು ವಾಪಸ್ ಹೋಗಿರುವವರ ಸಂಖ್ಯೆ50 ದಾಟಿದೆ. ಆರ್ಥಿಕವಾಗಿ ಶಕ್ತಿ ಇರುವವರು ಖಾಸಗಿ ಕಟ್ಟಡಗಳಲ್ಲಿ ಕೊಠಡಿ ಅಥವಾ ಮನೆ ಬಾಡಿಗೆ ಪಡೆದು ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ ಬಡತನದ ಹಿನ್ನೆಲೆಯವರಿಗೆ ಇದು ಸಾಧ್ಯವಿಲ್ಲ. ನಗರದಲ್ಲಿ ವಸತಿ ನಿಲಯದ ಸೌಲಭ್ಯಗಳಿಲ್ಲದೆ ಹಲವರು ಶಿಕ್ಷಣ ವಂಚಿತರಾಗುವ ಸಂಕಷ್ಟ ಎದುರಾಗಿದೆ.

ನ್ಯಾಮತಿ: ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

‘ತಾಲ್ಲೂಕಿನ ಮಾದನಬಾವಿ ಗ್ರಾಮದ ಹೊರವಲಯದಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ವಸತಿನಿಲಯದ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಇಲ್ಲದಂತೆ ಶಿಕ್ಷಣ ದೊರೆಯುತ್ತಿದೆ. ಕೆಲವು ವಾಸದ ಕೊಠಡಿಗಳ ಕಿಟಕಿ ಗಾಜುಗಳನ್ನು ದುರಸ್ತಿ ಮಾಡಿಸಬೇಕು ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಪೋಷಕರು ಹೇಳುತ್ತಾರೆ.

ಸಮಾಜ ಕಲ್ಯಾಣ ಇಲಾಖೆಯಿಂದ ನ್ಯಾಮತಿ ತಾಲ್ಲೂಕಿನಲ್ಲಿ ನಾಲ್ಕು ವಸತಿ ನಿಲಯಗಳು ಇದ್ದು ಉತ್ತಮ ಗುಣಮಟ್ಟದ ಮೂಲ ಸೌಲಭ್ಯಗಳನ್ನು ಹೊಂದಿದ್ದು. ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಿದೆ.ತಾಲ್ಲೂಕಿನ ನ್ಯಾಮತಿ ವಸತಿ ನಿಲಯದಲ್ಲಿ 59 ವಿದ್ಯಾರ್ಥಿಗಳು ಸವಳಂಗ ಸತಿ ನಿಲಯದಲ್ಲಿ 68 ಚಟ್ನಹಳ್ಳಿ ವಸತಿ ನಿಲಯದಲ್ಲಿ 71 ಹಾಗೂ ಬೆಳಗುತ್ತಿ ವಸತಿ ನಿಲಯದಲ್ಲಿ 62 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

‘ವಸತಿ ನಿಲಯಗಳಲ್ಲಿ ಸರ್ಕಾರದ ಮೆನು ಪ್ರಕಾರವೇ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಇದ್ದು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಮತ್ತು ಮನರಂಜನೆಗಾಗಿ ನಿಗದಿತ ಸಮಯದಲ್ಲಿ ದೂರದರ್ಶನ ವೀಕ್ಷಿಸುವ ವ್ಯವಸ್ಥೆ ಇದೆ. ಶಿಸ್ತಿನಿಂದ ವರ್ತಿಸುವಂತೆ ಮಾರ್ಗದರ್ಶನ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯ್ದ ವಿಷಯಗಳ ಬಗ್ಗೆ ಅನುಭವಿ ಶಿಕ್ಷಕರನ್ನು ನೇಮಿಸಿ ಪಾಠವನ್ನು ಬೋಧಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಉಮಾ ಎಚ್.ಎಲ್. ಮಾಹಿತಿ ನೀಡಿದರು.

ಕಟ್ಟಡ ಪೂರ್ಣಗೊಳಿಸಿ

ಆವರಗೆರೆಯ ಪರಿಶಿಷ್ಟ ಪಂಗಡದ ಹಾಸ್ಟೆಲ್‌ನಲ್ಲಿ ಕಟ್ಟಡ ಪೂರ್ಣಗೊಳಿಸದೇ ಇರುವುದರಿಂದ ವಿದ್ಯಾರ್ಥಿನಿಯರು ಹೊರಗಡೆ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಒಂದು ಕೊಠಡಿಯಲ್ಲಿ 20 ಜನ ಮಲಗುವ ಸ್ಥಿತಿ ಇದೆ. ಕೊಠಡಿಗಳ ಕಾಮಗಾರಿ ಹಲವು ದಿನಗಳಿಂದ ನಡೆಯುತ್ತಿದ್ದು ಕೂಡಲೇ ಕಟ್ಟಡವನ್ನು ಪೂರ್ಣಗೊಳಿಸಿ ಅವರಿಗೆ ಸೌಲಭ್ಯ ಕಲ್ಪಿಸಬೇಕು. ಊಟದ ವ್ಯವಸ್ಥೆ ಉತ್ತಮವಾಗಿರಬೇಕು. ಮೂಲಸೌಲಭ್ಯ ಕಲ್ಪಿಸಬೇಕು ಆವರಗೆರೆ ವಾಸು ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಉಸ್ತುವಾರಿ ಸಮಿತಿ ಸದಸ್ಯ

ಚನ್ನಗಿರಿ ಪಟ್ಟಣದ ಸಂತೇ ಮೈದಾನದ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಒಂದು ನೋಟ.
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಹೊಸಹಟ್ಟಿ ಗ್ರಾಮದ ಅಂಬೇಡ್ಕರ್ ವಸತಿ ಶಾಲಾ ಕಟ್ಟಡ 2 ವರ್ಷಗಳಿಂದ ಕುಂಟುತ್ತಾ ಸಾಗಿದೆ.
ವಸತಿ ವ್ಯವಸ್ಥೆ 65 ಇದ್ದರೂ 105 ವಿದ್ಯಾರ್ಥಿನಿಯರಿರುವ ಹರಿರಹದ ಅಂಬೇಡ್ಕರ್ ಶಾಲೆ ಪಕ್ಕದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.