ADVERTISEMENT

ಹಾನಗಲ್‌ ಉಪ ಚುನಾವಣೆ: ಬಂಡಾಯ ಅಭ್ಯರ್ಥಿಯ ಮನವೊಲಿಸಲು ಕಸರತ್ತು

ದಾವಣಗೆರೆಗೆ ಸಿ.ಆರ್‌. ಬಳ್ಳಾರಿ ಅವರನ್ನು ಕರೆಸಿ ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಾಲಕೃಷ್ಣ ಪಿ.ಎಚ್‌
Published 12 ಅಕ್ಟೋಬರ್ 2021, 7:53 IST
Last Updated 12 ಅಕ್ಟೋಬರ್ 2021, 7:53 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ದಾವಣಗೆರೆ: ಹಾವೇರಿ ಜಿಲ್ಲೆಯ ಹಾನಗಲ್‌ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್‌. ಬಳ್ಳಾರಿ ಅವರನ್ನು ಉಮೇದುವಾರಿಕೆಯಿಂದ ಹಿಂತೆಗೆದುಕೊಳ್ಳುವಂತೆ ಮಾಡಲು ದಾವಣಗೆರೆಯಲ್ಲಿ ಕಸರತ್ತು ನಡೆದಿದೆ. ಸ್ವತಃ ಮುಖ್ಯಮಂತ್ರಿಯವರೇ ದಾವಣಗೆರೆಗೆ ಬಂದಿದ್ದಲ್ಲದೇ ಬಂಡಾಯ ಅಭ್ಯರ್ಥಿಯನ್ನು, ಪಂಚಮಸಾಲಿ ಸಮಾಜದ ಮುಖಂಡರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಸೋಮವಾರ ರಾತ್ರಿಯೇ ಇಲ್ಲಿನ ಜಿಎಂಐಟಿ ಅತಿಥಿಗೃಹಕ್ಕೆ ಬಂದಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ, ಶಿವಕುಮಾರ ಉದಾಸಿ, ಸಚಿವರಾದ ಸುನಿಲ್‌ ಕುಮಾರ್‌, ಬಿ.ಸಿ. ಪಾಟೀಲ, ಮುನಿರತ್ನ ಸಹಿತ ಹಲವರ ಜತೆಗೆ ಗುಪ್ತ ಸಭೆ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಪಂಚಮಸಾಲಿ ಸಮುದಾಯದ ಮುಖಂಡರಾದ ಚಂದ್ರಶೇಖರ ಪೂಜಾರ್‌, ಬಿ.ಸಿ. ಉಮಾಪತಿ, ರಾಣೆಬೆನ್ನೂರು ಶಾಸಕ ಅರುಣಕುಮಾರ್‌ ಪೂಜಾರ್‌ ಅವರ ಜತೆಗೂ ಚರ್ಚೆ ನಡೆಸಿದ್ದಾರೆ. ಬೆಳಿಗ್ಗೆ 9.30ರ ಬಳಿಕ ಹಾನಗಲ್‌ನ ಮುಖಂಡರ ಜತೆಗೆ ಬಂಡಾಯ ಅಭ್ಯರ್ಥಿ ಚನ್ನಬಸಪ್ಪ ಆರ್‌. ಬಳ್ಳಾರಿ (ಸಿ.ಆರ್‌. ಬಳ್ಳಾರಿ) ಅವರೂ ಅತಿಥಿ ಗೃಹಕ್ಕೆ ಬಂದಿದರು. ಅವರ ಜತೆಗೂ ಮುಕ್ಕಾಲು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಸಿ.ಆರ್‌. ಬಳ್ಳಾರಿ ಅವರು ಉಮೇದುವಾರಿಕೆ ವಾಪಸ್‌ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಬುಧವಾರ ನಾಮಪತ್ರ ವಾಪಸ್‌ ತೆಗೆದುಕೊಳ್ಳಲು ಕೊನೇ ದಿನವಾಗಿದ್ದು, ಬುಧವಾರ ಬೆಳಿಗ್ಗೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿ.ಆರ್‌. ಬಳ್ಳಾರಿ ತಿಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ‘ಎರಡು ವಿಚಾರಗಳಿಗಾಗಿ ದಾವಣಗೆರೆಗೆ ಬಂದಿದ್ದೇನೆ. ದಾವಣಗೆರೆ ಮುಖಂಡರನ್ನು ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಮಾತನಾಡಬೇಕಿತ್ತು. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರನ್ನು, ಮುಖಂಡರನ್ನು ಕರೆಸಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಇವತ್ತು ಹಾವೇರಿ ಜಿಲ್ಲೆಯ ಮುಖಂಡರು, ಹಾನಗಲ್‌ ವಿಧಾನಸಭಾ ಕ್ಷೇತ್ರದ ಮುಖಂಡರನ್ನು ಕರೆಸಿ ಹಾನಗಲ್‌ ಉಪಚುನಾವಣೆ ಬಗ್ಗೆ ನಮ್ಮ ಸ್ಟ್ರೆಟಜಿ ಬಗ್ಗೆ ಚರ್ಚೆ ಮಾಡಿದ್ದೇವೆ. ನಮಗೆ ವಿಶ್ವಾಸ ಇದೆ. ಸಿಂಧಗಿ ಮತ್ತು ಹಾನಗಲ್‌ನಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿ.ಆರ್‌. ಬಳ್ಳಾರಿ ಮತ್ತು ನಮ್ಮದು ಬಹಳ ಹಳೇ ಸಂಬಂಧ. ಉದಾಸಿಯವರಿಗೂ ಹತ್ತಿರ. ಅವರು ಸರ್ಕಾರಿ ಸೇವೆಯಲ್ಲಿರುವಾಗಲೇ ಹತ್ತಿರದವರಾಗಿದ್ದರು. 40 ವರ್ಷಗಳಿಂದ ನಮ್ಮ ನಂಟು ಇದೆ. ನಾನು ಇಲ್ಲಿಗೆ ಬರುತ್ತೇನೆ. ಭೇಟಿಯಾಗಬೇಕು ಎಂದಾಗ ನಮ್ಮ ತಂದೆಯವರ ಮೇಲಿನ ಪ್ರೀತಿಯ ಕಾರಣದಿಂದ ಅವರು ಬಂದಿದ್ದಾರೆ. ಅವರ ಜತೆಗೂ ಚರ್ಚೆ ಮಾಡಿದ್ದೇವೆ. ಅವರೂ ಅವರ ಬೆಂಬಲಿಗರು, ಸಮಾಜದ ಮುಖಂಡರ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಸಮಾಜದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ: ‘ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆಗಿದ್ದೆ. ಬಿಜೆಪಿಯವರು ಯಾವ ಕಾರಣಕ್ಕೆ ಟಿಕೆಟ್‌ ನೀಡಿಲ್ಲ ಎಂಬುದು ಗೊತ್ತಿಲ್ಲ. ಪಂಚಮಸಾಲಿ ಸಮಾಜದ ಒತ್ತಾಯದ ಮೇರೆಗೆ ನಾನು ಸ್ವತಂತ್ರವಾಗಿ ಸ್ಪರ್ಧಿಸಿದ್ದೇನೆ. ಅ.13ರಂದು ಬೆಳಿಗ್ಗೆ ಹಾನಗಲ್‌ನಲ್ಲಿ ಸಮಾಜದವರ ಜತೆಗೆ ಚರ್ಚಿಸಿ ಮುಂದಿನ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್‌. ಬಳ್ಳಾರಿ ತಿಳಿಸಿದರು.

‘ಬಸವರಾಜ ಬೊಮ್ಮಾಯಿ ಮತ್ತು ನಾನು ಸ್ನೇಹಿತರು. ಅವರು ಮುಖ್ಯಮಂತ್ರಿ ಆಗಿರುವಾಗ ಚುನಾವಣೆಯಲ್ಲಿ ಹೆಚ್ಚುಕಮ್ಮಿ ಆದರೆ ಅವರಿಗೆ ಗೌರವ ತರುವಂಥದ್ದಲ್ಲ. ಆ ದೃಷ್ಟಿಯಿಂದ ಬಹಳಷ್ಟು ವಿಚಾರ ಮಾಡುತ್ತಿದ್ದೇವೆ. ಹಾನಗಲ್‌ನಲ್ಲಿ ನಮ್ಮ ಸಮಾಜ ಹೇಳಿದಂತೆ ನಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

‘ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಒಬ್ಬರು ಕಾಂಗ್ರೆಸ್‌, ಒಬ್ಬರು ಬಿಜೆಪಿ ಎಂಬುದು ಜಾರಕಿಹೊಳಿ ಫ್ಯಾಮಿಲಿಯಲ್ಲಿ ಇಲ್ವ. ಹಾಗೇ ನನ್ನ ತಮ್ಮ ಬಿಜೆಪಿ ಎಂಎಲ್‌ಎ ಆದರೆ ನಾನು ಪಕ್ಷೇತರ ಎಂಎಲ್‌ಎ ಆಗಬಾರದೇ?’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂತೆಗೆತ ಶೇ 99 ಖಚಿತ: ‘ಸಿ.ಆರ್‌. ಬಳ್ಳಾರಿ ಅವರು ನಾಮಪತ್ರ ಹಿಂತೆಗೆದುಕೊಳ್ಳುವುದು ಶೇ 99ರಷ್ಟು ಖಚಿತವಾಗಿದೆ. ನಾಳೆ ಸಂಜೆ ನಿಮಗೆ ಅದೆಲ್ಲ ಗೊತ್ತಾಗಲಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.