ADVERTISEMENT

ಹರಿಹರ: ಅಭ್ಯರ್ಥಿಗೇ ದುಡ್ಡು ಕೊಡುವ ಮತದಾರರು!

ಕ್ಷೇತ್ರ ವ್ಯಾಪ್ತಿಯ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹ

ಚಂದ್ರಶೇಖರ ಆರ್‌.
Published 7 ಏಪ್ರಿಲ್ 2023, 20:21 IST
Last Updated 7 ಏಪ್ರಿಲ್ 2023, 20:21 IST
ಶಿವಶಂಕರ್
ಶಿವಶಂಕರ್   

ದಾವಣಗೆರೆ: ಚುನಾವಣಾ ಕಣ ದಲ್ಲಿರುವ ಅಭ್ಯರ್ಥಿಗಳು ಮತದಾರರಿಗೆ ಹಣ, ಪಾತ್ರೆ, ಮದ್ಯ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ನೀಡಿ ಆಮಿಷ ಒಡ್ಡುವುದು ಸಾಮಾನ್ಯ. ಆದರೆ, ಜಿಲ್ಲೆಯ ಹರಿಹರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ
18ಕ್ಕೂ ಅಧಿಕ ಗ್ರಾಮಗಳಲ್ಲಿ ಜನರೇ ದೇಣಿಗೆ ಮೂಲಕ ಹಣ ಸಂಗ್ರಹಿಸಿ ಅಭ್ಯರ್ಥಿಗೆ ನೀಡುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಮಾಜಿ ಸಚಿವ ಹರಿಹರದ ದಿವಂಗತ ಎಚ್‌.ಶಿವಪ್ಪ ಅವರಿಗೆ ಚುನಾವಣೆ ಸಂದರ್ಭ ದೇಣಿಗೆ ಸಂಗ್ರಹಿಸಿ ಕೈಲಾದ ಸಹಾಯ ಮಾಡುತ್ತಿದ್ದ ಗ್ರಾಮಸ್ಥರು, ಈ ಬಾರಿಯೂ ಸ್ಪರ್ಧೆಗೆ ಅಣಿಯಾಗಿರುವ ಅವರ ಪುತ್ರ, ಎರಡು ಬಾರಿ ಶಾಸಕರಾಗಿದ್ದ ಜೆಡಿಎಸ್‌ನ ಎಚ್‌.ಎಸ್‌. ಶಿವಶಂಕರ್ ಪರ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ.

ಕಮಲಾಪುರ, ಹೊಳೆಸಿರಿಗೆರೆ, ಭಾನುವಳ್ಳಿ, ದೂಳೆಹೊಳೆ, ನಂದಿಗಾವಿ, ಹೊಸಳ್ಳಿ, ಹಿರೇಹೊಸಳ್ಳಿ, ಸಾಲಕಟ್ಟೆ, ಮಿಟ್ಲಕಟ್ಟೆ, ಬನ್ನಿಕೋಡು, ಸಂಕ್ಲಿಪುರ, ನಂದಿಗುಡಿ, ವಾಸನ, ಕೊಕ್ಕನೂರು, ಬೆಳ್ಳೂಡಿ, ಉಕ್ಕಡಗಾತ್ರಿ ಮತ್ತಿತರ ಗ್ರಾಮಗಳ ಜನ ಸ್ವಯಂ ಪ್ರೇರಣೆಯಿಂದಲೇ ದೇಣಿಗೆ ಸಂಗ್ರಹಿಸಿ ಚುನಾವಣೆ ಉಸ್ತುವಾರಿ ವಹಿಸಿಕೊಂಡವರಿಗೆ ನೀಡುತ್ತಾರೆ.

ADVERTISEMENT

‘ಮಧ್ಯಮ, ಕೆಳ ಮಧ್ಯಮ ವರ್ಗದ ಮತದಾರರು ಸಭೆ ಸೇರಿ, ಶಿವಶಂಕರ್‌ ಅವರ ಚುನಾವಣೆಯ ಖರ್ಚು ನಿಭಾಯಿಸಲು ನೆರವಾಗಲೆಂದೇ ದೇಣಿಗೆ ಸಂಗ್ರಹಿ ಸುವುದು ವಾಡಿಕೆ. ಯಾರ ಮೇಲೂ ಒತ್ತಡ ಹೇರಿ, ಇಂತಿಷ್ಟೇ ಹಣ ಕೊಡಿ ಎಂದೂ ಪೀಡಿಸುವುದಿಲ್ಲ. ಅವರವರ ಶಕ್ತ್ಯಾನುಸಾರ ಹಣ ನೀಡುಬಹುದು’ ಎಂದು ತಿಳಿಸಿ ದೇಣಿಗೆ ಸಂಗ್ರಹಿಸಲಾಗುತ್ತದೆ.

ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಸಚಿವರಾಗಿದ್ದ ಎಚ್‌.ಶಿವಪ್ಪ ಅವರಿಗೂ 1994ರ ಚುನಾವಣೆಯಲ್ಲಿ ಕ್ಷೇತ್ರದ ಜನ ಧನಸಹಾಯ ಮಾಡಿದ್ದರು. 2013, 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಿವಶಂಕರ್‌ ಅವರಿಗೂ ಜನರ ಸಹಾಯ ಹರಿದು ಬಂದಿತ್ತು.

‘ಮತ ಯಾಚಿಸುವ ಕಾರ್ಯಕರ್ತರಿ ಗಾಗಿ ಮಾಡಲಾಗುವ ವಾಹನ, ಊಟ– ತಿಂಡಿ ವ್ಯವಸ್ಥೆಗೆ, ಮತಗಟ್ಟೆ, ಮತ ಎಣಿಕೆ ಏಜೆಂಟರಿಗೆ ಖರ್ಚು ಮಾಡಲು ನೆರವಾಗಲೆಂದೇ ದೇಣಿಗೆ ಸಂಗ್ರಹಿಸಿ ನೀಡುತ್ತೇವೆ. ಶಿವಪ್ಪ ಅವರ ಕುಟುಂಬದ ಮೇಲಿನ ಅಭಿಮಾನದಿಂದ ಈ ಪದ್ಧತಿ ಅನುಸರಿಸಲಾಗುತ್ತಿದೆ‘ ಎಂದು ಉಕ್ಕಡಗಾತ್ರಿಯ ಸಂಜೀವ ರೆಡ್ಡಿ ತಿಳಿಸಿದರು.

‘ದುಡ್ಡು ಕೊಟ್ಟು ಜನರನ್ನು ಸೇರಿಸುವುದಿಲ್ಲ. ಜನರೇ ಅಭಿಮಾನ ದಿಂದ ಸಹಾಯ ಮಾಡಲು ಬರುತ್ತಾರೆ’ ಎಂದು ವಿಧಾನ ಪರಿಷತ್‌ ಸದಸ್ಯರೂ ಆಗಿದ್ದ ಎಚ್‌.ಎಸ್‌. ಶಿವಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.