ಹರಿಹರ: ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಕನ್ನಡ ಸಾಹಿತ್ಯ ವೇದಿಕೆಗಳಲ್ಲಿ ಸಮಾನ ಆದ್ಯತೆ ಸಿಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
ಚಿಂತನ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಗತಿಪರ ಬರಹಗಾರರ ಒಕ್ಕೂಟದ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾನು ಈವರೆಗೆ ಮಾಡಿರುವುದು ಅತ್ಯಲ್ಪ, ಇನ್ನೂ ಮಾಡಬೇಕಾದ ಕಾರ್ಯ ಬಹಳಷ್ಟಿದೆ. ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ಲಲಿತಶ್ರೀ ಪ್ರಶಸ್ತಿ-2025 ಸ್ವೀಕರಿಸಿದ ಹಿರಿಯ ಸಾಹಿತಿ ಹಿ.ಗೂ.ದುಂಡ್ಯಪ್ಪ ಹೇಳಿದರು.
ಹೆಣ್ಣು ಹೊಸಿಲು ದಾಟದೇ ಇದ್ದ ಕಾಲದಲ್ಲಿ ವನಿತಾ ಸಮಾಜ, ಮಹಿಳಾ ಸಮಾಜಗಳನ್ನು ಹುಟ್ಟುಹಾಕಿ ಮಹಿಳೆಯರನ್ನು ಸಾಮಾಜಿಕ, ಸಾಹಿತ್ಯಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಶ್ರೇಯ ದಿ.ನಾಗಮ್ಮ ಕೇಶವಮೂರ್ತಿ, ದಿ.ಟಿ.ಗಿರಿಜಾ ಹಾಗೂ ಲಲಿತಮ್ಮ ಚಂದ್ರಶೇಖರ್ ಅವರಿಗೆ ಸಲ್ಲುತ್ತದೆ ಎಂದು ದಾವಣಗೆರೆ ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್ ಹೇಳಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈ ಮೂವರೂ ಸ್ತ್ರೀ ಬಳಗಕ್ಕೆ ಶಕ್ತಿ ತುಂಬಿದ ರತ್ನಗಳು ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಹೇಳಿದರು.
ಒಕ್ಕೂಟದ ಸದಸ್ಯರು ಆಸಕ್ತಿಯಿಂದ ಕಾರ್ಯನಿರ್ವಹಿಸಲು, ಹೊಸಬರಿಗೆ ಪ್ರೋತ್ಸಾಹ ನೀಡಲು ಲಲಿತಮ್ಮ ಅವರ ಪ್ರೇರಣೆಯೇ ಕಾರಣ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಗುಂಡಗಟ್ಟಿ ಹೇಳಿದರು.
ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಿ.ಫ್ರಾನ್ಸಿಸ್ ಕ್ಸೇವಿಯರ್, ಎ.ಬಿ.ಮಂಜಮ್ಮ, ಬಿ.ನಾಗರತ್ನ, ಜಯರಾಮನ್, ಸೌಮ್ಯ, ಚಂದನ ವೈ.ನೀಲಪ್ಪ, ವೈದ್ಯ ರಾಮಚಂದ್ರ, ಉಷಾ ಇ., ಜಿ.ಎಸ್.ಗಾಯತ್ರಿ, ಮಂಜುನಾಥ ಅಡಿಗ, ಶ್ಯಾಮಲಾದೇವಿ, ಮತ್ತಿತರರು ಇದ್ದರು.
ನಂತರ ನಡೆದ ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು. ಜಿ.ಕೆ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಒಕ್ಕೂಟದ ಸದಸ್ಯರು ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.