ADVERTISEMENT

ಹರಿಹರ: ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:10 IST
Last Updated 7 ಆಗಸ್ಟ್ 2025, 7:10 IST
ಹರಿಹರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗೆ ಬುಧವಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಯರಿಂದ ಮಾಹಿತಿ ಪಡೆದರು 
ಹರಿಹರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗೆ ಬುಧವಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಯರಿಂದ ಮಾಹಿತಿ ಪಡೆದರು    

ಹರಿಹರ: ನಗರದ ಜೆ.ಸಿ.ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬುಧವಾರ ಭೇಟಿ ನೀಡಿದರು. ಈ ವೇಳೆ  ವಿದ್ಯಾರ್ಥಿನಿಯರು ಹಾಸ್ಟೆಲ್‌ ಸಮಸ್ಯೆಗಳ ಬಗ್ಗೆ ದೂರಿದರು. 

ಹಾಸ್ಟೆಲ್‌ನಲ್ಲಿ ಹುಳ ಭರಿತ ಆಹಾರ ವಿತರಣೆ ಮಾಡಿದ್ದಾರೆಂದು ಕದಸಂಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್‌ಸ್ಪೆಕ್ಟರ್‌ ಮೇಘರಾಜ್, ಸಬ್ ಇನ್‌ಸ್ಪೆಕ್ಟರ್‌ ಸಂಜೀವ್ ಕುಮಾರ್ ಅವರು ಹಾಸ್ಟೆಲ್‌ಗೆ ಭೇಟಿ ನೀಡಿದರು. 

‘ಕಳೆದ ಶನಿವಾರ ಮಾಡಿಟ್ಟಿದ್ದ ವಗ್ಗರಣೆಯನ್ನು ಬುಧವಾರದ ಊಟ ತಯಾರಿಕೆಗೆ ಬಳಿಸಿದ್ದಾರೆ. ಹುಳ ಇದ್ದ ಅನ್ನ ನಮಗೆ ನೀಡಿದ್ದಾರೆ’ ಎಂದು ವಿದ್ಯಾರ್ಥಿನಿಯರು ದೂರಿದರು. 

ADVERTISEMENT

ಸಮಸ್ಯೆ ಆಲಿಸಿದ ಮೇಘರಾಜ್, ಹಾಸ್ಟೆಲ್‌ನಲ್ಲಿ ಏನೇ ಸಮಸ್ಯೆ ಇದ್ದರೂ ನಮಗೆ ತಿಳಿಸಿ ಎಂದು ತಮ್ಮ ಮೊ.ನಂ. ನೀಡಿದರು.  

ನಂತರ ಕೊಠಡಿಗಳನ್ನು ಪರಿಶೀಲಿಸಿದ ಅವರು, ಬೆಡ್‌ಶೀಟ್ ಹಾಗೂ ಹಾಸಿಗೆಗಳು ಕೊಳಕಾಗಿದ್ದು, ಸ್ವಚ್ಛಗೊಳಿಸಿ. ಗುಣಮಟ್ಟದ ಊಟ ನೀಡಬೇಕು. ಇಲ್ಲಿನ ಲೋಪಗಳ ಕುರಿತು ನಿರ್ದೇಶನಾಲಯದ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಹಾಸ್ಟೆಲ್ ಸಿಬ್ಬಂದಿಗೆ ಎಚ್ಚರಿಸಿದರು. 

ಬುಧವಾರ ಬೆಳಿಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ ನೇತೃತ್ವದ ತಂಡವು ಭೇಟಿ ನೀಡಿ ಹಾಸ್ಟೆಲ್‌ನ ಸ್ಥಿತಿಗತಿಗಳನ್ನು ಪರಿಶೀಲಿಸಿ, ಸಿಬ್ಬಂದಿಯಿಂದ ಮಾಹಿತಿ ಪಡೆಯಿತು. 

ದಾಸ್ತಾನು ಕೊಠಡಿಗೆ ತೆರಳಿ ಅಕ್ಕಿಯನ್ನು ಪರಿಶೀಲಿಸಿದಾಗ ಅಕ್ಕಿಯಲ್ಲಿ ಹುಳ ಹಾಗೂ ಕಸವನ್ನು ಕಂಡು, ಈ ಅಕ್ಕಿಯನ್ನು ಅಡುಗೆಗೆ ಬಳಸಬೇಡಿ, ಬೇರೆ ಅಕ್ಕಿ ತರಿಸಿ, ಸ್ವಚ್ಛತೆಗೆ ಗಮನ ಕೊಡಿ, ಇಲ್ಲಿನ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಕಲಾವತಿ ತಿಳಿಸಿದರು. 

‘ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದೆ. 190 ವಿದ್ಯಾರ್ಥಿನಿಯರಿದ್ದು ಕೂಡಲೇ ಕಟ್ಟಡ ದುರಸ್ತಿ ಮಾಡಿಸಿ ಅಥವಾ ಬೇರೆಡೆಗಾದರೂ ಸ್ಥಳಾಂತರಿಸಿ’ ಎಂದು ಲೋಕಾಯುಕ್ತ ಪಿಎಸ್‌ಐ ಗುರುಬಸವರಾಜ್ ಅವರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತಪ್ಪ ಅವರಿಗೆ ಸೂಚಿಸಿದರು. 

ಎಪಿಎಂಸಿ ಆವರಣದಲ್ಲಿ ಕೆಲವು ಕಟ್ಟಡಗಳಿದ್ದು ಅಲ್ಲಿಗೆ ಸ್ಥಳಾಂತರಿಸಲು ಪರಿಶೀಲಿಸುತ್ತಿದ್ದೇವೆ ಎಂದು ಹನುಮಂತಪ್ಪ ಹೇಳಿದರು. 

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.