ADVERTISEMENT

ಸದ್ದಿಲ್ಲದೆ ನಡೆಯುತ್ತಿದೆ ಮರಳು ಅಕ್ರಮ ಗಣಿಗಾರಿಕೆ: 5 ಸೇತುವೆಗಳ ಭದ್ರತೆಗೆ ಅಪಾಯ

ಟಿ.ಇನಾಯತ್‌ ಉಲ್ಲಾ
Published 24 ಜನವರಿ 2026, 2:47 IST
Last Updated 24 ಜನವರಿ 2026, 2:47 IST
ಹರಿಹರ ಮತ್ತು ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಮಧ್ಯದಲ್ಲಿ ಬೀರೂರು-ಸಮ್ಮಸಗಿ ಹೆದ್ದಾರಿಯ ತುಂಗಭದ್ರಾ ಹೊಸ ಸೇತುವೆಯ ಕೂಗಳತೆ ದೂರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುವವರು ಮರಳಿನ ರಾಶಿ ಹಾಕಿರುವುದು
ಹರಿಹರ ಮತ್ತು ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಮಧ್ಯದಲ್ಲಿ ಬೀರೂರು-ಸಮ್ಮಸಗಿ ಹೆದ್ದಾರಿಯ ತುಂಗಭದ್ರಾ ಹೊಸ ಸೇತುವೆಯ ಕೂಗಳತೆ ದೂರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುವವರು ಮರಳಿನ ರಾಶಿ ಹಾಕಿರುವುದು   

ಹರಿಹರ: ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಹರಿಹರ ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ವ್ಯಾಪ್ತಿಯ 1 ರಾಷ್ಟ್ರೀಯ ಹೆದ್ದಾರಿ, 3 ರಾಜ್ಯ ಹೆದ್ದಾರಿ ಹಾಗೂ ಒಂದು ರೈಲ್ವೆ ಸೇತುವೆಯ ಭದ್ರತೆಗೆ ಧಕ್ಕೆ ಎದುರಾಗಿದ್ದು, ಅಪಾಯದ ಕರೆಗಂಟೆ ಬಾರಿಸುತ್ತಿದೆ.

ಹೊನ್ನಾಳಿ ಭಾಗದಿಂದ ಹರಿಹರದ ಕಡೆಗೆ ಹರಿದು ಬರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆಗಳಿವೆ. ಈ ನದಿಯ ಪೂರ್ವದ ದಡ ದಾವಣಗೆರೆ ಜಿಲ್ಲೆ, ಪಶ್ಚಿಮ ದಡ ಹಾವೇರಿ ಜಿಲ್ಲೆ ವ್ಯಾಪ್ತಿಗೆ ಸೇರುತ್ತದೆ. 

ಈ ಸೇತುವೆಗಳ ಅಕ್ಕಪಕ್ಕ ನದಿಯ ಪೂರ್ವ ಮತ್ತು ಪಶ್ಚಿಮ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸದ್ದಿಲ್ಲದೆ ನಡೆಯುತ್ತಿದೆ. ಸಣ್ಣ ಯಂತ್ರ ಹಾಗೂ ಕೂಲಿ ಆಳುಗಳ ಮೂಲಕ ರಾತ್ರಿ ಸಮಯದಲ್ಲಿ ಆರೇಳು ಅಡಿ ಆಳದ ನದಿ ಪಾತ್ರ ಮತ್ತು ದಡದ ಮರಳನ್ನು ಶೇಖರಿಸಿ ಚೀಲಗಳಲ್ಲಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಸಾಗಿಸಲಾಗುತ್ತಿದೆ.

ADVERTISEMENT

ನದಿಯಲ್ಲಿ ಮರಳು ಗಣಿಗಾರಿಕೆ ಹಲವು ಕಡೆ ನಡೆಯುತ್ತಿದೆಯಾದರೂ, ಸೇತುವೆಗಳ ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ದೊಡ್ಡ ದುರಂತಗಳಿಗೆ ಎಡೆ ಮಾಡಿಕೊಡುವ ಆತಂಕವನ್ನು ತಂದೊಡ್ಡಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ-1957 (ಎಂಎಂಡಿಆರ್), ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು (ಕೆಎಂಎಂಸಿಆರ್), ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ವಿಧಿಸಿದ ನಿರ್ದೇಶನ, ಸ್ಥಿರ ಮರಳು ಗಣಿಗಾರಿಕೆ ನಿರ್ವಹಣಾ ಮಾರ್ಗಸೂಚಿ-2016 (ಎಸ್‌ಎಸ್‌ಎಂಎಂಜಿ) ತೆರನಾದ ಕಾಯ್ದೆ ಹಾಗೂ ನಿಯಮಗಳ ಸ್ಪಷ್ಟ ಉಲ್ಲಂಘನೆಯೂ ಇಲ್ಲಿ ಆಗುತ್ತಿದೆ.

ನದಿ ದಡದ ಸೇತುವೆ ಮತ್ತು ಹೆದ್ದಾರಿಗಳ ಮೇಲ್ಮುಖ ಮತ್ತು ಕೆಳಮುಖ ಭಾಗದ 1 ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ಮಾಡಬಾರದೆಂಬ ನಿಯಮಗಳಿದ್ದರೂ ಪಾಲನೆಯಾಗುತ್ತಿಲ್ಲ.

‘ಸೇತುವೆಗಳಿಂದ ಕೇವಲ 200 ರಿಂದ 300 ಮೀಟರ್‌ ಅಂತರದಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮರಳುಗಾರಿಕೆ ತಡೆಯುವ ಜವಾಬ್ದಾರಿ ಹೊತ್ತ ಭೂ ವಿಜ್ಞಾನ ಮತ್ತು ಗಣಿ, ಕಂದಾಯ, ಪೊಲೀಸ್, ಲೋಕೋಪಯೋಗಿ ಇಲಾಖೆಗಳು ಸೇರಿ ಈ ಎರಡೂ ಜಿಲ್ಲೆಗಳ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ತಂಡಗಳು ನಿದ್ರೆಗೆ ಜಾರಿವೆ’ ಎಂದೂ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. 

ಇಲ್ಲೆಲ್ಲಾ ಅಕ್ರಮ:

ಬೆಂಗಳೂರು- ಹುಬ್ಬಳ್ಳಿ ನಡುವೆ ನಿತ್ಯ 50ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಆಧಾರವಾಗಿರುವ ರೈಲ್ವೆ ಸೇತುವೆ, ಬೀರೂರು-ಸಮ್ಮಸಗಿ ಹೆದ್ದಾರಿಯ ಶತಮಾನ ಕಂಡ ತುಂಗಭದ್ರಾ ಸೇತುವೆ ಇದರ ಪಕ್ಕದಲ್ಲಿ ಐದು ವರ್ಷಗಳ ಹಿಂದೆ ನಿರ್ಮಿಸಿದ ಹೊಸ ಸೇತುವೆ. 

ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಮತ್ತು ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮದ ನಡುವಿನ ಬೀರೂರು- ಸಮ್ಮಸಗಿ ಹೆದ್ದಾರಿಯ ಸೇತುವೆ, ರಾಜನಹಳ್ಳಿ ಮತ್ತು ಕವಲತ್ತು ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸೇತುವೆಗಳು ಅಕ್ರಮ ಮರಳು ಗಣಿಗಾರಿಕೆಯ ಸದ್ದಿಗೆ ನಲುಗುತ್ತಿವೆ.

ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಈ ಸೇತುವೆಗಳ ನದಿಯ ಪಾತ್ರ ಹಾಗೂ ದಡದಲ್ಲಿ ಏಳೆಂಟು ಅಡಿಯ ಗುಂಡಿಗಳು ಸೃಷ್ಟಿಯಾಗಿವೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವಾಗ ಈ ಗುಂಡಿಗಳಲ್ಲಿ ಮರಳು ಶೇಖರಣೆಯಾಗುತ್ತದೆ, ಮಳೆಗಾಲದ ನಂತರ ಮರಳು ಎತ್ತುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದು ಜನರ ಆರೋಪವಾಗಿದೆ.

ಸೇತುವೆಗಳ ಸಮೀಪ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. ರಾಣೆಬೆನ್ನೂರು ತಹಶೀಲ್ದಾರ್‌ ಹಾಗೂ ಟಾಸ್ಕ್‌ಫೋರ್ಸ್ ತಂಡದವರೊಂದಿಗೂ ಚರ್ಚಿಸುತ್ತೇನೆ
ಸಂತೋಷ್ ಕುಮಾರ್ ಜಿ. ತಹಶೀಲ್ದಾರ್ ಹರಿಹರ
‘ಅಕ್ರಮ ಮರಳು ಗಣಿಗಾರಿಕೆ ನಿಲ್ಲಲಿ’
‘ಅಪಾಯ ಸಂಭವಿಸುವ ಮುನ್ನವೇ ರಾಷ್ಟ್ರೀಯ ಸ್ವತ್ತುಗಳೆನಿಸಿದ ಸೇತುವೆಗಳ ಭದ್ರತೆ ಹಾಗೂ ಪರಿಸರದ ದೃಷ್ಟಿಯಿಂದ ಈ ಭಾಗದ ಅಕ್ರಮ ಮರಳು ಗಣಿಗಾರಿಕೆಯನ್ನು ಎರಡೂ ಜಿಲ್ಲೆಗಳ ಜಿಲ್ಲಾಡಳಿತಗಳು ತಕ್ಷಣ ತಡೆಯಬೇಕಿದೆ’ ಎನ್ನುತ್ತಾರೆ ನಿವೃತ್ತ ಜಲಸಂಪನ್ಮೂಲ ಇಲಾಖೆ ಇಂಜಿನಿಯರ್ ವಿ.ಎಸ್.ಮಲ್ಲಿಕಾರ್ಜುನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.