ADVERTISEMENT

ಮಲೇಬೆನ್ನೂರು: ಗಾಳಿ ಮಳೆ, ಉರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2022, 3:46 IST
Last Updated 17 ಮೇ 2022, 3:46 IST
ಮಲೇಬೆನ್ನೂರು ಸಮೀಪದ ನಂದಿತಾವರೆ ಗ್ರಾಮದ ಬಳಿ ಸೋಮವಾರ ಬೀಸಿದ ಗಾಳಿ ಸುರಿದ ಬಿರುಮಳೆಗೆ ರಾಜ್ಯ ಹೆದ್ದಾರಿ -25ರಲ್ಲಿ ಸಾಲುಮರಗಳು ಬಿದ್ದಿದ್ದು ತೆರವು ಗೊಳಿಸುವುದರಲ್ಲಿ ನಿರತರಾದ ಬೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರು.
ಮಲೇಬೆನ್ನೂರು ಸಮೀಪದ ನಂದಿತಾವರೆ ಗ್ರಾಮದ ಬಳಿ ಸೋಮವಾರ ಬೀಸಿದ ಗಾಳಿ ಸುರಿದ ಬಿರುಮಳೆಗೆ ರಾಜ್ಯ ಹೆದ್ದಾರಿ -25ರಲ್ಲಿ ಸಾಲುಮರಗಳು ಬಿದ್ದಿದ್ದು ತೆರವು ಗೊಳಿಸುವುದರಲ್ಲಿ ನಿರತರಾದ ಬೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರು.   

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಸುರಿದ ಬಿರುಮಳೆ, ಬೀಸಿದ ಬಿರುಗಾಳಿಗೆ ಹಲವು ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಮಾರ್ಗ, ಕಂಬ ತುಂಡಾಗಿವೆ. ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆ ಚಾಪೆ ಹಾಸಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ರಾಜ್ಯ ಹೆದ್ದಾರಿ -25ರಲ್ಲಿ ಎಕ್ಕೆಗೊಂದಿಯಿಂದ ಕುಂಬಳೂರುವರಗೆ, ನಂದಿಗುಡಿ- ಎಕ್ಕೆಗೊಂದಿ ರಸ್ತೆ ಸಾಲು ಮರಗಳು ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೊಳೆಸಿರಿಗೆರೆ ಗ್ರಾಮದಲ್ಲಿ ಪಶುವೈದ್ಯಕೀಯ ಆಸ್ಪತ್ರೆಯ ಮೇಲೆ ಮರವೊಂದು ಉರುಳಿ
ಬಿದ್ದಿದೆ.

ಬಹುತೇಕ ಗ್ರಾಮಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು ಬೆಳೆ ನೆಲಕಚ್ಚಿವೆ. ಮಾವು, ಬಾಳೆ, ಅಡಿಕೆ ಮರಗಳಿಗೂ ಹಾನಿಯಾಗಿದೆ. ನಷ್ಟದ ಪ್ರಮಾಣ ಮಂಗಳವಾರ ಹೊಲ ನೋಡಿದ ನಂತರ ಗೊತ್ತಾಗಲಿದೆ. ಹೊಲಗಳಲ್ಲಿ ನೀರು ನಿಂತಿವೆ, ಯಾಂತ್ರಿಕ ಕಟಾವು ಮಾಡುವುದು ಕಷ್ಟ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ, ಫಾಲಾಕ್ಷ, ರೈತರಾದ ಕುಂಬಳೂರು ಆಂಜನೇಯ ಭಾನುವಳ್ಳಿ ಕೊಟ್ರೇಶ್ ತಿಳಿಸಿದರು.

ADVERTISEMENT

ಭತ್ತದ ಕಟಾವು ಸಾಗಿರುವ ಹೊಳೆಸಾಲಿನ ಉಕ್ಕಡಗಾತ್ರಿ, ನಂದಿಗುಡಿ, ಮಳಲಹಳ್ಳಿ, ಗೋವಿನಹಾಳು, ಡಿಬಿಕೆರೆ ಭಾಗದ ಬೂದಾಳು, ದೇವರಬೆಳೆಕೆರೆ ಗ್ರಾಮದ ಕಣಗಳು ಜಲಾವೃತವಾಗಿವೆ. ಭತ್ತದರಾಶಿ ನೀರಿನಲ್ಲಿ ನಿಂತಿವೆ ಎಂದು ರೈತ ಶಿವರಾಜ್ ಮಾಹಿತಿ
ನೀಡಿದರು. ಹರಿಹರ ತಾಲ್ಲೂಕಿನ ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಮರ ತೆರವು ಕಾರ್ಯಾಚರಣೆಯ ನಂತರ ಸಂಚಾರ ಪುನಃ ರಾತ್ರಿ 9ರಿಂದ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.