
ಹೊನ್ನಾಳಿ: ತಾಲ್ಲೂಕಿನ ಮಾಸಡಿ ಗ್ರಾಮದಲ್ಲಿ ನೂರು ವರ್ಷಗಳ ಬಳಿಕ ಮಾರಿಹಬ್ಬ ಆಚರಿಸಲಾಗುತ್ತಿದೆ ಗ್ರಾಮದ ಮುಖಂಡರಾದ ಎಂ.ಎಚ್. ಗಜೇಂದ್ರಪ್ಪ ಹೇಳಿದರು ತಿಳಿಸಿದರು.
90 ವರ್ಷಗಳ ಹಿಂದೆ ಈ ಹಬ್ಬ ಆಚರಿಸಿದಾಗ ಗುದ್ದಮ್ಮನ ರೋಗ ಊರಲ್ಲಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಗುಂಪು ಗುಂಪಾಗಿ ಜನ ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು. ಹೀಗಾಗಿ ಗ್ರಾಮದ ಮುಖಂಡರು ಮಾರಿಹಬ್ಬವನ್ನು ಆಚರಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಈ ಗ್ರಾಮದಲ್ಲಿ ಮಾರಿಹಬ್ಬವನ್ನೇ ಆಚರಿಸದಿರುವುದು ಐತಿಹಾಸಿಕ ನಿರ್ಧಾರ ಎಂದು ಹೇಳಿದರು.
ಗ್ರಾಮದ ಮಾರಿಕಾಂಬೆಯ ದೇವಸ್ಥಾನ ಅವಸಾನದ ಅಂಚಿನಲ್ಲಿದ್ದು, ಅದನ್ನು ತೆರವುಗೊಳಿಸಿ ಪುನರ್ ನಿರ್ಮಾಣ ಮಾಡಿ, ಮಾರಿಕಾಂಬ ದೇವಿಯ ಪ್ರಾಣಪ್ರತಿಷ್ಠಾಪನೆ ಮಾಡಲಾಗಿತ್ತು ಎಂದು ಮುಖಂಡರಾದ ಗದ್ದಿಗೆಪ್ಪ ಹಾಗೂ ಅಶೋಕ್ ಹೇಳಿದರು.
ಗ್ರಾಮದಲ್ಲಿ ಏನೇ ಶುಭ ಕಾರ್ಯಗಳು ನಡೆದರೂ ಮೊದಲ ಪೂಜೆ ಮಾರಿಕಾಂಬೆಗೆ ಸಲ್ಲಿಸಿ ನಂತರ ಶುಭ ಕಾರ್ಯಗಳನ್ನು ಆಚರಿಸುವ ಪದ್ಧತಿ ಅಲ್ಲಿಂದ ಇಲ್ಲಿಯವರೆಗೆ ಅನೂಚಾನವಾಗಿ ನಡೆದು ಬಂದಿದೆ. ಅಮ್ಮನ ಮೂರ್ತಿ ಪ್ರತಿಷ್ಠಾಪನೆಯಾಗಿ ನಾಲ್ಕೈದು ವರ್ಷಗಳ ಕಳೆದ ಬಳಿಕ ಗ್ರಾಮಸ್ಥರನ್ನು ಸೇರಿಸಿ ನೂರು ವರ್ಷದ ನಂತರ ಬಂದಿರುವ ಈ ಜಾತ್ರೆಯನ್ನು ಅಮ್ಮನ ಮಡಿಲಿಗೆ ಹಾಕಿ ಆಚರಿಸೋಣ ಎಂದು ತೀರ್ಮಾನಿಸಲಾಯಿತು ಎಂದು ಹೇಳಿದರು.
ಗ್ರಾಮದಲ್ಲಿ ಯಾವುದೇ ಚಂದ ವಸೂಲಿ ಮಾಡಿಲ್ಲ, ಭಕ್ತರು ಕೊಟ್ಟ ದೇಣಿಗೆ, ದಾನಧರ್ಮದ ಹಣದಿಂದ ಹಬ್ಬ ಆಚರಿಸಲಾಗುತ್ತಿದೆ. ಆ ದೇವಿ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಾಳೆ ಎಂದು ಗಜೇಂದ್ರಪ್ಪ ಹೇಳಿದರು.
ಗ್ರಾಮದ ಮುಖಂಡರಾದ ಎಸ್.ಕೆ. ಮಂಜಪ್ಪ, ರಾಜಪ್ಪ ಕಂಬಳಿ, ನಾಗಪ್ಪ ಹುಳ್ಳಳ್ಳಿ, ರಾಮಪ್ಪ ಮಂಡಕ್ಕಿ, ಲೋಹಿತ್, ಈರಪ್ಪ, ರಾಮಕೃಷ್ಣ, ಎ.ಕೆ. ಚಂದ್ರಪ್ಪ, ಮಾದಪ್ಪ,ಮಂಜಪ್ಪ, ಬೆಟಗೇರಿ ರಾಮಪ್ಪ ಹಾಗೂ ಪ್ರಧಾನ ಅರ್ಚಕರಾದ ಕೋಟೇಶಾಚಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.